

ಜೈಪುರ: ರಾಜಸ್ಥಾನದಲ್ಲಿ ಪೈಲಟ್ ಮತ್ತು ಬೆಂಬಲಿಗರನ್ನು ಪಕ್ಷದ ಪ್ರಮುಖ ಹೊಣೆಗಾರಿಕೆಗಳಿಂದ ಬಿಡುಗಡೆಗೊಳಿಸುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಬೆನ್ನಿಗೆ, ರಾಜ್ಯ ಬಿಜೆಪಿ ನಾಯಕರು ಮಂಗಳವಾರ ತುರ್ತುಸಭೆ ಸೇರಿದ್ದಾರೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ಪಕ್ಷದ ನ್ಯಾಷನಲ್ ಜಾಯಿಂಟ್ ಜನರಲ್ ಸೆಕ್ರೆಟರಿ ವಿ.ಸತೀಶ್, ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ, ವಿಪಕ್ಷ ನಾಯಕ ಗುಲಾಬ್ ಚಾಂದ್ ಕಟಾರಿಯಾ, ವಿಪಕ್ಷ ಉಪನಾಯಕ ರಾಜೇಂದ್ರ ರಾಥೋಡ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯೇ ಸಭೆಯ ಚರ್ಚಾ ಕಾರ್ಯಸೂಚಿಯ ಪ್ರಮುಖ ಅಂಶ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಈಗ ಭಿನ್ನಮತೀಯ ನಾಯಕ ಸಚಿನ್ ಪೈಲಟ್ ಮತ್ತು ಬೆಂಬಲಿಗ ಶಾಸಕರನ್ನು ಸಮಾಧಾನಗೊಳಿಸುವುದೇ ಸವಾಲು. 2018ರ ಡಿಸೆಂಬರ್ ತಿಂಗಳು ನಡೆದ ವಿಧಾನಸಭಾ ಚುನಾವಣೆಯ ನಂತರ ಪೈಲಟ್ಗೆ ಮುಖ್ಯಮಂತ್ರಿ ಸ್ಥಾನ ನೀಡದೇ ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದು ಭಾರಿ ಅಸಮಾಧಾನ ತಂದಿತ್ತು.
ಸದ್ಯ ಸಚಿನ್ ಪೈಲಟ್ ಬಣ 30 ಶಾಸಕರು ತಮ್ಮ ಜತೆಗಿದ್ದಾರೆ ಎಂದು ಪ್ರತಿಪಾದಿಸಿದೆ. ಮುಖ್ಯಮಂತ್ರಿ ಗೆಹ್ಲೋಟ್ ತಮ್ಮೊಂದಿಗೆ 109 ಶಾಸಕರಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಲ 107 ಆಗಿತ್ತು. ಈಗ ಬಣ ಜಗಳ ಉಲ್ಬಣವಾದ ಪರಿಸ್ಥಿತಿಯಲ್ಲಿ ಚಿತ್ರಣ ಬದಲಾಗಬಹುದು. (ಏಜೆನ್ಸೀಸ್)