ಸ್ಪೀಕರ್ ನೋಟಿಸ್ ವಿರುದ್ಧ ಹೈಕೋರ್ಟ್ ಮೊರೆಹೋದ ಪೈಲಟ್ ಬಣ: ಬಂಡೆದ್ದ ಶಾಸಕರ ಅರ್ಜಿ ವಿಚಾರಣೆ ಇಂದು

Sachin
Published on

ಜೈಪುರ: ಸರ್ಕಾರ ವಿರುದ್ಧ ಬಂಡಾಯ ಎದ್ದ ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗ 18 ಶಾಸಕರಿಗೆ ರಾಜಸ್ಥಾನದ ವಿಧಾನಸಭೆ ಸ್ಪೀಕರ್ ಜಾರಿ ಮಾಡಿರುವ ನೋಟಿಸ್ ಪ್ರಶ್ನಿಸಿದ ಅರ್ಜಿ ವಿಚಾರಣೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೆ ನಡೆಯಲಿದೆ. ರಾಜಸ್ಥಾನ ಹೈಕೋರ್ಟ್​ನ ವಿಭಾಗೀಯ ಪೀಠದಲ್ಲಿ ಈ ವಿಚಾರಣೆ ನಡೆಸಲಿದೆ.

ಪಕ್ಷ ವಿರೋಧಿ ಚಟುವಟಿಕೆ, ವಿಪ್ ಉಲ್ಲಂಘನೆ ಹಿನ್ನೆಲೆಯಲ್ಲಿ ಅವರ ಶಾಸಕತ್ವ ಅನರ್ಹತೆ ಮಾಡುವ ಕುರಿತು ಸ್ಪೀಕರ್ ಬುಧವಾರ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಉತ್ತರಿಸಲು ಎರಡು ದಿನಗಳ ಗಡುವು ನೀಡಿದ್ದರು. ಈ ನೋಟಿಸ್ ಕಾನೂನು ಬಾಹಿರ ಎಂದು ಆರೋಪಿಸಿದ್ದ ಪೈಲಟ್ ಪರ ಶಾಸಕರು ರಾಜಸ್ಥಾನ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಪೈಲಟ್ ಬಣದ ಪರ ಹಾಜರಾದ ವಕೀಲ ಹರೀಶ್ ಸಾಳ್ವೆ, ಬಂಡಾಯ ನಾಯಕರು ಸಲ್ಲಿಸಿರುವ ಅರ್ಜಿಯಲ್ಲಿ್ಲ ಕೆಲ ಬದಲಾವಣೆ ಮಾಡಲು ಬಯಸಿದರು. ಬಂಡಾಯ ನಾಯಕರಿಗೆ ಸಂವಿಧಾನದ 10ನೇ ಪರಿಚ್ಛೇದ ಅಡಿ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ವಾದಿಸಿದರು. ಇದಕ್ಕೆ ಒಪ್ಪಿಗೆ ನೀಡಿದ ಕೋರ್ಟ್, ಹೊಸದಾಗಿ ಪಿಟಿಷನ್ ಸಲ್ಲಿಕೆಯಾದ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿತು. ಸಂಜೆಯ ವೇಳೆಗೆ ಪೈಲಟ್ ಬೆಂಬಲಿಗರು ಹೊಸ ಪಿಟಿಷನ್ ಸಲ್ಲಿಸಿದರು. ಇದನ್ನು ಪರಿಗಣಿಸಿದ ಕೋರ್ಟ್ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಕ್ರಮ ಕೈಗೊಳ್ಳದಂತೆ ತಾತ್ಕಾಲಿಕ ತಡೆ: ನೋಟಿಸ್​ಗೆ ಉತ್ತರಿಸಲು ಸ್ಪೀಕರ್ ನೀಡಿರುವ ಎರಡು ದಿನದ ಗಡುವು ಶುಕ್ರವಾರ ಪೂರ್ಣಗೊಳ್ಳಲಿದೆ. ಮತ್ತೊಂದೆಡೆ ಈ ನೋಟಿಸ್ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯೂ ಅಂದೇ ನಡೆಯಲಿದೆ. ಹೀಗಾಗಿ ಶುಕ್ರವಾರ ಸಂಜೆ 5 ಗಂಟೆ ಒಳಗಾಗಿ ಪೈಲಟ್ ಹಾಗೂ ಅವರ ಬೆಂಬಲಿಗರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸ್ಪೀಕರ್​ಗೆ ಕೋರ್ಟ್ ಸೂಚನೆ ನೀಡಿದೆ.

ಏನಿದು ಪ್ರಕರಣ?

ಸಚಿನ್ ಪೈಲಟ್ ಹಾಗೂ ಬೆಂಬಲಿತ ಶಾಸಕರು ಕಾಂಗ್ರೆಸ್ ಶಾಸಕಾಂಗ ಸಭೆಗೆ ಎರಡು ಬಾರಿ ಗೈರಾದ ಹಿನ್ನೆಲೆಯಲ್ಲಿ ಅವರ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಪೈಲಟ್​ರನ್ನು ಡಿಸಿಎಂ, ರಾಜ್ಯ ಘಟಕದ ಮುಖ್ಯಸ್ಥರ ಸ್ಥಾನದಿಂದ ವಜಾ ಮಾಡಲಾಗಿತ್ತು. ಬಂಡಾಯ ನಾಯಕರ ಶಾಸಕತ್ವ ರದ್ದು ಮಾಡಬೇಕು ಎಂದು ಪಕ್ಷದ ಮುಖ್ಯ ಸಚೇತಕರು ಸ್ಪೀಕರ್​ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೈಲಟ್, ಬೆಂಬಲಿಗರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ಗೆಹ್ಲೋಟ್​ಗೆ ರಾಜೆ ಪರೋಕ್ಷ ಬೆಂಬಲ?

ಕಾಂಗ್ರೆಸ್ ಸರ್ಕಾರ ಪತನವಾಗದಂತೆ ರಾಜಸ್ಥಾನ ಮಾಜಿ ಸಿಎಂ, ಬಿಜೆಪಿ ನಾಯಕಿ ವಸುಂಧರಾ ರಾಜೆ ತಡೆಯುತ್ತಿದ್ದಾರೆ ಎಂದು ನಾಗಪುರ ಸಂಸದ ಹನುಮಾನ್ ಬೇಣಿವಾಲ್ ಟ್ವೀಟ್ ಮೂಲಕ ಆರೋಪ ಮಾಡಿದ್ದಾರೆ. ಗೆಹ್ಲೋಟ್​ಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ಸಂಸದರಿಗೆ ರಾಜೆ ಮನವಿ ಮಾಡುತ್ತಿದ್ದಾರೆ. ಹಲವು ಶಾಸಕರ ಜತೆ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಬೇಣಿವಾಲ್ ಹೇಳಿದ್ದಾರೆ. ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮ ಆರಂಭವಾದಾಗಿನಿಂದ ರಾಜೆ ಈ ಕುರಿತು ಯಾವುದೇ ಹೇಳಿಕೆ ನೀಡದೆ ಮೌನವಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net