ಜಲ ಜೀವನ್ ಮಿಷನ್ ಹಗರಣ; ರಾಜಸ್ಥಾನ ಮಾಜಿ ಸಚಿವ ಮಹೇಶ್ ಜೋಶಿ ಜಾಮೀನು ಅರ್ಜಿ ತಿರಸ್ಕರಿಸಿದ ಹೈ ಕೋರ್ಟ್​ | Rajasthan Ex-Minister

Ex-Minister Mahesh Joshi
Published on

Rajasthan Ex-Minister: ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಲ್ಲಿ 900 ಕೋಟಿ ರೂ. ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಏಪ್ರಿಲ್ 24 ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮಹೇಶ್ ಜೋಶಿ ಅವರ ಜಾಮೀನು ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠ ತಿರಸ್ಕರಿಸಿದೆ.

ಜಲ ಜೀವನ್ ಮಿಷನ್ ಹಗರಣದಲ್ಲಿ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದು, ವಿಶೇಷ ನ್ಯಾಯಾಲಯವು ಜೋಶಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಅವರು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

ಮಹೇಶ್ ಜೋಶಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವಿವೇಕರಾಜ್ ಬಜ್ವಾ, ರಾಜಕೀಯ ಒತ್ತಡದಿಂದ ತಮ್ಮ ಕಕ್ಷಿದಾರರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಮೂಲ ಪ್ರಕರಣದಲ್ಲಿ ಜೋಶಿ ಅವರ ಹೆಸರನ್ನು ಉಲ್ಲೇಖಿಸಿಲ್ಲ, ಒಂದು ವರ್ಷದ ಹಿಂದಿನ ನೋಟಿಸ್ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ಇಡಿ ತನ್ನ ಕಕ್ಷಿದಾರರ ವಿರುದ್ಧ 2.01 ಕೋಟಿ ರೂ.ಗಳ ವಹಿವಾಟಿನ ಆರೋಪ ಮಾಡಿದ್ದು, ಇದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ವಾದಿಸಿದರು.

ಇಡಿ ಪರ ವಾದ ಮಂಡಿಸಿದ ವಕೀಲ ಅಕ್ಷಯ್ ಭಾರದ್ವಾಜ್, ಟೆಂಡರ್ ಪ್ರಕ್ರಿಯೆಯಲ್ಲಿ ಜೋಶಿ ಲಂಚ ಪಡೆದಿದ್ದು, ಆರೋಪಿಗೆ ಜಾಮೀನು ನೀಡಿದರೆ, ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ, ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು ಎಂದರು.

ಎರಡು ಕಡೆಗಳಿಂದ ವಾದ ಪ್ರತಿ ವಾದ ಆಲಿಸಿದ ರಾಜಸ್ಥಾನ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net