

ಜೈಪುರ : ಕರೊನಾದಿಂದ ಚೇತರಿಸಿಕೊಂಡವರನ್ನೇ ಹೆಚ್ಚಾಗಿ ಆಕ್ರಮಿಸುತ್ತಿರುವ ಮ್ಯೂಕರ್ಮೈಕೋಸಿಸ್(ಬ್ಲಾಕ್ ಫಂಗಸ್)ಅನ್ನು ರಾಜಸ್ಥಾನ ಸರ್ಕಾರವು ಸಾಂಕ್ರಾಮಿಕ ಖಾಯಿಲೆ ಎಂದು ಘೋಷಿಸಿದೆ. ಹಾಲಿ, ರಾಜ್ಯದಲ್ಲಿ ಸುಮಾರು 100 ಬ್ಲಾಕ್ ಫಂಗಸ್ ರೋಗಿಗಳಿದ್ದು, ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಈ ಕಪ್ಪು ಶಿಲೀಂಧ್ರದ ಸೋಂಕಿಗೆ ಒಳಗಾದವರ ಚಿಕಿತ್ಸೆಗೆಂದೇ ಪ್ರತ್ಯೇಕ ವಾರ್ಡ್ಅನ್ನೂ ಸಜ್ಜುಗೊಳಿಸಲಾಗಿದೆ.
ರಾಜಸ್ಥಾನ ಎಪಿಡೆಮಿಕ್ ಆ್ಯಕ್ಟ್ 2020 ರಡಿಯಲ್ಲಿ ಮ್ಯೂಕರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗವೆಂದು ನೋಟಿಫೈ ಮಾಡಲಾಗಿದ್ದು, ಯಾರಿಗಾದರೂ ಈ ಖಾಯಿಲೆ ಬಂದ ತಕ್ಷಣ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗಿ ಆದೇಶ ಜಾರಿಗೊಳಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಕಾರ್ಯದರ್ಶಿ ಅಖಿಲ್ ಅರೋರ ಹೇಳಿದ್ದಾರೆ. ಕರೊನಾ ವೈರಸ್ ಮತ್ತು ಬ್ಲಾಕ್ ಫಂಗಸ್ಗೆ ಸಮಗ್ರ ಮತ್ತು ಸಂಘಟಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್)