

ಜೈಪುರ: ಎಚ್ಐವಿ, ಹಂದಿ ಜ್ವರ(ಸ್ವೈನ್ ಫ್ಲೂ) ಮತ್ತು ಮಲೇರಿಯಾ ಔಷಧಗಳ ಸಂಯೋಜನೆಯನ್ನು ಬಳಸಿ ಇಟಾಲಿಯ ಕರೊನಾ ವೈರಸ್ ಸೋಂಕಿತ ರೋಗಿಗೆ ರಾಜಸ್ಥಾನದ ಸವಾಯಿ ಮಾನ್ ಸಿಂಗ್(ಎಸ್ಎಂಎಸ್) ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿರುವುದಾಗಿ ವರದಿಯಾಗಿದೆ.
ಚಿಕಿತ್ಸೆಯ ಬಳಿಕ ರೋಗಿಯಲ್ಲಿ ಕರೊನಾ ವೈರಸ್ ನೆಗಿಟಿವ್ ಕಂಡುಬಂದಿದೆ. ರಾಜಸ್ಥಾನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಇಟಲಿಯಿಂದ ಭಾರತಕ್ಕೆ ಆಗಮಿಸಿದ್ದ 23 ಮಂದಿಯಲ್ಲಿ ತನ್ನ ಪತಿಯೊಂದಿಗೆ ಆಗಮಿಸಿದ್ದ ಮಹಿಳೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು.
ಮೊದಲ ಗುಂಪಿನ ಪರೀಕ್ಷೆಯಲ್ಲಿ ಮಹಿಳೆಯ ಪತಿಗೆ ಕರೊನಾ ಇರುವುದನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮಾರ್ಚ್ 3ರಂದು ಖಚಿತಪಡಿಸಿತ್ತು. ದಿನದ ಬೆನ್ನಲ್ಲೇ ಮಹಿಳೆಗೂ ಕೋವಿಡ್ -19 ಪಾಸಿಟಿವ್ ಫಲಿತಾಂಶ ಬಂದಿತ್ತು.
ಎಸ್ಎಂಎಸ್ ವೈದ್ಯರು ಮಹಿಳೆಗೆ ಎರಡು ಎಚ್ಐವಿ ಸಂಯೋಜಿತ ಔಷಧದಿಂದ ಚಿಕಿತ್ಸೆ ನೀಡುತ್ತಿದ್ದರು. ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ರೋಗಿಗೆ 200 ಎಂಜಿ ಲೊಪಿನವಿರ್ ಹಾಗೂ 50 ಎಂಜಿ ರಿಟಿನವಿರ್ ಔಷಧವನ್ನು ದಿನಕ್ಕೆ ಎರಡು ಬಾರಿ ನೀಡುತ್ತಿದ್ದೆವು ಎಂದು ತಿಳಿಸಿದ್ದಾರೆ.
ಎಸ್ಎಂಎಸ್ ಆಸ್ಪತ್ರೆ ನೀಡುತ್ತಿರುವ ಎರಡು ಎಚ್ಐವಿ ಔಷಧ ಸಂಯೋಜನೆಯ ಶಿಷ್ಠಾಚಾರವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಒಪ್ಪಿದೆ. ಇದಲ್ಲದೆ, ಹಂದಿಜ್ವರ ರೋಗಿಗಳಿಗೆ ನೀಡುವ ಒಸೆಲ್ಟಮಿವಿರ್ ಮತ್ತು ಮಲೇರಿಯಾ ರೋಗಿಗಳಿಗೆ ನೀಡುವ ಕ್ಲೋರೋಕ್ವೀನ್ ಔಷಧವನ್ನು ಬಳಸಲಾಗುತ್ತಿತ್ತು ಎಂದು ಸಿಂಗ್ ವಿವರಿಸಿದರು.
ಗುಣಮಟ್ಟದ ಶಿಷ್ಠಾಚಾರ ಅನುಸರಿಸಿ ರೋಗಿಗೆ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತಿದ್ದೆವು. ಹೀಗಾಗಿ ರೋಗಿಯಲ್ಲಿ ಸದ್ಯ ಕೋವಿಡ್-19 ನಗೆಟಿವ್ ಕಾಣಿಸಿಕೊಂಡಿದೆ. ಇದು ಎಸ್ಎಂಎಸ್ ವೈದ್ಯರ ಸಾಧನೆ ಎಂದು ಎಸ್ಎಂಎಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಮತ್ತು ಕಂಟ್ರೋಲರ್ ಡಾ. ಸುಧೀರ್ ಭಂಡಾರಿ ಮೆಚ್ಚುಗೆ ವ್ಯಕ್ತಪಡಿಸಿದರು. (ಏಜೆನ್ಸೀಸ್)