ಸಕಾಲದಲ್ಲಿ ಶಸ್ತ್ರಾಸ್ತ್ರ, ಮಿಲಿಟರಿ ಉಪಕರಣ ಪೂರೈಕೆ: ರಷ್ಯಾ ಭರವಸೆ ನೀಡಿದೆ ಎಂದ ರಕ್ಷಣಾ ಸಚಿವ

Rajanath singh in russia
Published on

ಮಾಸ್ಕೊ: ಕರೊನಾ ವೈರಸ್ ಸಾಂಕ್ರಾಮಿಕತೆಯ ಹೊರತಾಗಿಯೂ ಭಾರತದೊಂದಿಗೆ ಮಾಡಿಕೊಂಡಿರುವ ಎಲ್ಲ ರಕ್ಷಣಾ ಒಪ್ಪಂದಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವುದಾಗಿಯೂ ರಷ್ಯಾ ಭರವಸೆ ನೀಡಿದೆ. ಸೇನಾ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸುವುದಾಗಿಯೂ ತಿಳಿಸಿದೆ. ಕೆಲವು ಪ್ರಕರಣಗಳ ಶೀಘ್ರ ಸರಬರಾಜು ಮಾಡುವ ಸಾಧ್ಯತೆಯೂ ಇದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ನಮ್ಮ ಎಲ್ಲ ಪ್ರಸ್ತಾವನೆಗಳಿಗೆ ರಷ್ಯಾದಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಷ್ಯಾ ನಾಯಕರೊಂದಿಗೆ ನಡೆಸಿದ ಮಾತುಕತೆಗಳ ಬಗ್ಗೆ ಸಂಪೂರ್ಣ ತೃಪ್ತಿಯಿದೆ ಎಂದಿದ್ದಾರೆ.

ವಿಶೇಷ ಬಾಂಧವ್ಯ: ಭಾರತ ಮತ್ತು ರಷ್ಯಾ ಒಂದು ವಿಶೇಷ ಹಾಗೂ ವ್ಯೂಹಾತ್ಮಕ ಸಂಬಂಧ ಹೊಂದಿವೆ. ನಮ್ಮ ರಕ್ಷಣಾ ಬಾಂಧವ್ಯ ತುಂಬಾ ಮಹತ್ವದ ಆಧಾರ ಸ್ತಂಭಗಳು ಎಂದು ರಷ್ಯಾದ ಉಪಪ್ರಧಾನಿ ಯುರಿ ಲ್ವಾನೊವಿಚ್ ಬೊರಿಸೋವ್​ರೊಂದಿಗೆ ಮಂಗಳವಾರ ನಡೆದ ಮಾತುಕತೆಯ ನಂತರ ಸಿಂಗ್ ಹೇಳಿದ್ದಾರೆ. ಫ್ಯಾಸಿಸ್ಟ್ ಶಕ್ತಿಗಳ ಮೇಲೆ ಸೋವಿಯತ್ ಒಕ್ಕೂಟದ ವಿಜಯ ಹಾಗೂ ಎರಡನೇ ಮಹಾಯುದ್ಧ ಅಂತ್ಯಗೊಂಡ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಂಗ್ ರಷ್ಯಾಕ್ಕೆ 3 ದಿನ ಪ್ರವಾಸ ಕೈಗೊಂಡಿದ್ದಾರೆ.

ದ್ವಿತೀಯ ಮಹಾಯುದ್ಧದ 75ನೇ ವಿಜಯೋತ್ಸವ ಪರೇಡ್​ನಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳ ತುಕಡಿ ಭಾಗವಹಿಸಿರುವುದು ಅತ್ಯಂತ ಹೆಮ್ಮೆಯ ಕ್ಷಣ. | ರಾಜನಾಥ್ ಸಿಂಗ್ ರಕ್ಷಣಾ ಸಚಿವ

37,799 ಕೋಟಿ ರೂಪಾಯಿ ಒಡಂಬಡಿಕೆ: ಎಸ್-400 ಟ್ರಯಂಫ್ ಕ್ಷಿಪಣಿ ಪ್ರತಿರೋಧಕ ವ್ಯವಸ್ಥೆಯ ಐದು ರೆಜಿಮೆಂಟ್​ಗಳ ಖರೀದಿಗೆ 2018ರಲ್ಲಿ ರಷ್ಯಾದ ಜತೆ 37,799 ಕೋಟಿ (5 ಬಿಲಿಯನ್ ಡಾಲರ್ ) ರೂಪಾಯಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ವರ್ಷಾಂತ್ಯದಲ್ಲಿ ಅದರ ಸರಬರಾಜು ಆರಂಭವಾಗುವ ನಿರೀಕ್ಷೆಯಿದೆ. 2021ರ ಅಂತ್ಯದೊಳಗೆ ಪೂರ್ಣ ಪೂರೈಕೆ ಆಗಲಿದೆ. ಎಸ್​ಯುು-30 ಎಂಕೆಐ ಮತ್ತು ಮಿಗ್-29 ಯುಪಿಜಿ ವರ್ಗದ 33 ಹೆಚ್ಚುವರಿ ಯುದ್ಧ ವಿಮಾನಗಳ ಖರೀದಿಗೂ ಒಪ್ಪಂದ ಆಗಿದೆ.

ಶಾಂತಿಪ್ರಿಯ ದೇಶ: ಭಾರತ ಶಾಂತಿಪ್ರಿಯ ದೇಶವಾಗಿದ್ದು, ಇತರ ದೇಶಗಳ ಪ್ರದೇಶಗಳ ಮೇಲೆ ಯಾವತ್ತೂ ಕಣ್ಣುಹಾಕಿಲ್ಲ. ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ನಮ್ಮ ಇರಾದೆ. ಆದರೆ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ವಿಚಾರದಲ್ಲಿ ಯಾವುದೇ ಪ್ರಶ್ನೆ ಎದುರಾದರೆ ಯಾವ ಬೆಲೆ ತೆತ್ತಾದರೂ ನಮ್ಮ ಹಿತ ಕಾಯುವ ಸಂಕಲ್ಪದ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಕಿಲ್ಲ ಎಂದು ರಷ್ಯಾ ಉಪಪ್ರಧಾನಿ ಜತೆ ನಡೆದ ಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net