ಬ್ಲ್ಯಾಕ್​ ಫಂಗಸ್ ಉಲ್ಬಣ: ತಿಂಗಳಲ್ಲಿ 425 ಪ್ರಕರಣ, ಕರೊನಾ ಕೇಸ್ ಹೆಚ್ಚಳ

Black Fungus
Published on

ಬೆಂಗಳೂರು: ನೆರೆಯ ಕೇರಳದ ಬಳಿಕ ದೈನಂದಿನ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳದಿಂದ ಆತಂಕಗೊಂಡಿರುವ ರಾಜ್ಯಕ್ಕೀಗ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಆಘಾತವೂ ತಟ್ಟಿದೆ. ಕಳೆದೊಂದು ತಿಂಗಳಲ್ಲಿ 425 ಮಂದಿ ಬ್ಲ್ಯಾಕ್ ಫಂಗಸ್​ನಿಂದ ಚಿಕಿತ್ಸೆಗೆ ದಾಖಲಾಗಿದ್ದು, 73 ಮಂದಿ ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ. ಇನ್ನು ಸಂಭಾವ್ಯ ಕರೊನಾ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಗಡಿ ಭಾಗ ಸೇರಿದಂತೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 3,669 ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 341ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲೇ ಕಳೆದ ಒಂದು ತಿಂಗಳ ಅವಧಿಯಲ್ಲಿ 122 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದ್ದು, 28 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ಈವರೆಗೆ 1,164 ಮಂದಿಗೆ ಫಂಗಸ್ ಸೋಂಕು ತಗುಲಿದ್ದು, 111 ಮಂದಿ ಮೃತಪಟ್ಟಿರುವುದು ಭೀತಿ ಮೂಡಿಸಿದೆ.

ಕೋಟಾದಡಿ ಚಿಕಿತ್ಸೆ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈವರೆಗೆ 209 ಪ್ರಕರಣಗಳು ವರದಿಯಾಗಿವೆ. ಅದೇ ರೀತಿ, ಬೌರಿಂಗ್ ಆಸ್ಪತ್ರೆಯಲ್ಲಿ 394, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನಾಲ್ಕು, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮೂರು ಪ್ರಕರಣಗಳು ಸೇರಿದಂತೆ 610 ಜನ ಸರ್ಕಾರಿ ಕೋಟಾದಡಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಔಷಧ ಕೊರತೆ: ಬ್ಲಾ್ಯಕ್ ಫಂಗಸ್​ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಆರಂಭದ ದಿನಗಳಿಗಿಂತ ಕಡಿಮೆಯಾಗಿದ್ದರೂ, ಈ ಚಿಕಿತ್ಸೆಗೆ ಅಗತ್ಯವಾಗಿ ಬೇಕಾದ ಲಿಪೋಸೋಮಲ್ ಆಂಫೊಟೆರಿಸಿನ್ ಬಿ ಔಷಧದ ಕೊರತೆ ಮುಂದುವರಿದಿದೆ. ರೋಗಿಗಳಿಗೆ ಪರ್ಯಾಯ ಔಷಧ ನೀಡಲಾಗುತ್ತಿರುವುದರಿಂದ ರೋಗಿಗಳ ಚೇತರಿಕೆಗೆ ದೀರ್ಘ ಸಮಯ ತೆಗೆದುಕೊಳ್ಳುತ್ತಿದೆ. ಅಲ್ಲದೆ ಆರಂಭಿಕ ಲಕ್ಷಣಗಳನ್ನು ಗುರುತಿಸದೆ ಗಂಭೀರ ಹಂತಕ್ಕೆ ತಲುಪಿದಾಗ ಚಿಕಿತ್ಸೆಗೆ ಬರುತ್ತಿದ್ದಾರೆ. ಇದರಿಂದ ಸೋಂಕು ಉಲ್ಬಣಗೊಂಡು ಸಾವನ್ನಪು್ಪತ್ತಿದ್ದಾರೆ ಎನ್ನುತ್ತಾರೆ ವೈದ್ಯರು.

ಸೋಂಕಿತ ಬಾಲಕಿ ಚೇತರಿಕೆ: ಈ ನಡುವೆ ಬ್ಲಾ್ಯಕ್ ಫಂಗಸ್ ಸೋಂಕಿಗೆ ಒಳಗಾಗಿ ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕಿ ಚೇತರಿಸಿಕೊಂಡು ಮನೆಗೆ ತೆರಳಿರುವುದು ಸಮಾಧಾನದ ಸಂಗತಿಯಾಗಿದೆ. ಬಳ್ಳಾರಿ ಮೂಲದ ಈ ಬಾಲಕಿ ಕೋವಿಡ್ ಸೋಂಕಿನಿಂದ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ವೇಳೆ ಬ್ಲಾ್ಯಕ್ ಫಂಗಸ್ ಸೋಂಕಿಗೆ ಒಳಗಾಗಿದ್ದಳು. ಹೆಚ್ಚಿನ ಚಿಕಿತ್ಸೆಗೆ ಕಳೆದ ಮೇ 29ರಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ಅದಾಗಲೇ ಸೋಂಕು ಕಣ್ಣು ಮತ್ತು ಮಿದುಳಿಗೆ ಹರಡಿತ್ತು. ಹಾಗಾಗಿ ಆಕೆ ತನ್ನ ಎಡಗಣ್ಣಿನ ದೃಷ್ಟಿ ಕಳೆದುಕೊಂಡಳು. ನಂತರ ಪರೀಕ್ಷೆ ನಡೆಸಿದ ವೈದ್ಯರು ಸೋಂಕು ಹರಡಿದ್ದ ಭಾಗಗಳಾದ ಮಿದುಳು, ದವಡೆ, ಕಣ್ಣು ಸೇರಿದಂತೆ ಐದು ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ್ದರು. ಈಗ ಕೊಂಚ ಚೇತರಿಸಿಕೊಂಡು ಬಿಡುಗಡೆಯಾಗಿರುವ ಬಾಲಕಿಗೆ ಮೂರು ತಿಂಗಳ ನಂತರ ಇನ್ನೂ ಎರಡು ಶಸ್ತ್ರ ಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ಬೌರಿಂಗ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಬಾಲಕನಿಗೆ ಫಲಿಸದ ಚಿಕಿತ್ಸೆ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ 11 ವರ್ಷದ ಬಾಲಕನಲ್ಲಿಯೂ ಬ್ಲಾ್ಯಕ್ ಫಂಗಸ್ ಕಾಣಿಸಿಕೊಂಡಿತ್ತು. ಟೈಪ್ -1 ಮಧುಮೇಹ ಹೊಂದಿದ್ದರಿಂದ ಬಾಲಕನಲ್ಲಿ ಸೋಂಕು ತೀವ್ರತೆ ಹೆಚ್ಚಿತ್ತು. ಮೇ 26ರಂದು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿದ್ದ ಬಾಲಕನಿಗೆ ನಿಮ್ಹಾನ್ಸ್ ವೈದ್ಯರಿಂದಲೂ ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಜು. 7ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಮಕ್ಕಳಲ್ಲಿ ಕಾಣಿಸಿಕೊಂಡ ಮೊದಲ ಬ್ಲಾ್ಯಕ್ ಫಂಗಸ್ ಪ್ರಕರಣ ಇದಾಗಿತ್ತು.

ದೇಶದಲ್ಲಿ ಹೆಚ್ಚಿದ ಪ್ರಕರಣ: ದೇಶದಲ್ಲಿ ಕರೊನಾ ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಮಾತ್ರ ಕೊಂಚ ತಗ್ಗಿದ್ದು, ಶುಕ್ರವಾರ 1,890 ಹೊಸ ಪ್ರಕರಣ ದೃಢಪಟ್ಟಿದೆ. ಈ ಅವಧಿಯಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 23,478ಕ್ಕೆ ಏರಿಕೆಯಾಗಿದೆ. ಇನ್ನು ದೇಶಾದ್ಯಂತ 3 ವಾರಗಳಲ್ಲೇ ಅತ್ಯಧಿಕ 44,230 ಹೊಸ ಕೇಸ್ ಶುಕ್ರವಾರ ಪತ್ತೆಯಾಗಿವೆ.

ಕಠಿಣ ಕ್ರಮಕ್ಕೆ ತಾಕೀತು: ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿ ಹಾಗೂ ತಜ್ಞರ ಸಲಹೆಯಂತೆ ರಾಜ್ಯದಲ್ಲಿ ಕರೊನಾ ಕಟ್ಟಿ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತಾಕೀತು ಮಾಡಿದ್ದಾರೆ. ಸಿಎಂ ಸೂಚನೆಯಂತೆ ಜಿಲ್ಲಾಧಿಕಾರಿಗಳೊಂದಿಗೆ ಶುಕ್ರವಾರ ವಿಡಿಯೋ ಸಂವಾದ ನಡೆಸಿ ವಸ್ತುಸ್ಥಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net