ರಸ್ತೆ ಮೇಲೆ ಹರಿದ ಕೊಳಚೆ ನೀರು

27 BIRUR road
ಬೀರೂರಿನ ಲಿಂಗದಹಳ್ಳಿ ರಸ್ತೆ ಸ್ವಚ್ಛಗೊಳಿಸಿ ಮಳೆ ನೀರು ಹರಿಯುವಂತೆ ಮಾಡುವುದರಲ್ಲಿ ನಿರತವಾಗಿರುವ ಪೌರಕಾರ್ಮಿಕರು.
Published on

ಬೀರೂರು: ಸತತ 15 ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಪಟ್ಟಣದ ಹಲವು ಚರಂಡಿಗಳು ಜಲಾವೃತವಾಗಿ ತ್ಯಾಜ್ಯ ಕಟ್ಟಿಕೊಂಡು ಕೊಳಚೆ ನೀರು ರಸ್ತೆಗಳಲ್ಲಿ ನಿಂತು ಸಂಚಾರ ಅಸ್ತವ್ಯಸ್ತವಾಗಿತ್ತು. ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗಿನವರೆಗೆ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಪ್ಲಾಸ್ಟಿಕ್ ಕಟ್ಟಿಕೊಂಡ ಪರಿಣಾಮ ರಾಜಕಾಲುವೆಯ ನೀರು ರಸ್ತೆಯಲ್ಲಿ ಹರಿಯುತ್ತಿತ್ತು. ಲಿಂಗದಹಳ್ಳಿ ರಸ್ತೆ, ಮಹಾತ್ಮಗಾಂಧಿ ವೃತ್ತ, ಅಜ್ಜಂಪುರ ರಸ್ತೆ, ಬಿ.ಎಚ್.ರಸ್ತೆಯೂ ಸಂಪೂರ್ಣ ಜಲಾವೃತಗೊಂಡಿತ್ತು.
ಪುರಸಭೆ ನೌಕರರು ಚರಂಡಿಯಲ್ಲಿದ್ದ ತ್ಯಾಜ್ಯ ತೆರವುಗೊಳಿಸಿ ರಸ್ತೆಗಳಲ್ಲಿರುವ ನೀರನ್ನು ಚರಂಡಿಗೆ ಹರಿಸಲು ಹರಸಾಹಸಪಟ್ಟರು.
ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಲಕ್ಷ್ಮಣ್ ವಿಜಯವಾಣಿಯೊಂದಿಗೆ ಮಾತನಾಡಿ, ಸಾರ್ವಜನಿಕರು ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು ಎಂದು ಮನೆ ಬಾಗಿಲಿಗೆ ಕಸದ ವಾಹನಗಳು ತೆರಳುತ್ತವೆ. ಕೆಲವರು ಕಸವನ್ನು ನೀಡಿದರೆ ಬಹಳಷ್ಟು ಮಂದಿ ಚರಂಡಿಗೆ ಕಸ ಎಸೆಯುವ ಪರಿಣಾಮ ಮಳೆ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ನಿಲ್ಲುತ್ತದೆ. ಅಲ್ಲದೆ ಕೆಲವರು ಚರಂಡಿಗಳ ಮೇಲೆ ಕಲ್ಲು, ಮಣ್ಣು, ಸಿಮೆಂಟ್ ಕಟ್ಟೆ ಮುಂತಾದವುಗಳನ್ನು ನಿರ್ಮಿಸಿಕೊಂಡು ಪೌರ ಕಾರ್ಮಿಕರ ಕೆಲಸಗಳಿಗೂ ಅಡ್ಡಿಪಡಿಸುತ್ತಾರೆ. ಸ್ವಚ್ಛತೆ, ಪಟ್ಟಣ ಸೌಂದರ್ಯ ಕಾಪಾಡಲು ಪುರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸಿದರೆ ಮಾತ್ರ ಯಶಸ್ಸು ಕಾಣಬಹುದು. ಇಲ್ಲವಾದಲ್ಲಿ ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net