ಬೆಂಗಳೂರು: (Rain continue) ’ಮುರಸು’ ಸೈಕ್ಲೋನ್ ಕಾರಣದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 3 ದಿನ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಬೆಂಗಳೂರು ನಗರ, ಮೈಸೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಬುಧವಾರ ಮಳೆಯಾಯಿತು. ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರೊಂದಿಗೆ ತುಂತುರು ಮಳೆ ಬಿತ್ತು. ಕೊಡಗು, ಮೈಸೂರು, ಚಾಮರಾಜನಗರದಲ್ಲಿ ನ.5ರಿಂದ ನ.7ರವರೆಗೆ ಮತ್ತು ದಕ್ಷಿಣ ಕನ್ನಡ, ಮಂಡ್ಯದಲ್ಲಿ ನ.5ರಂದು ವ್ಯಾಪಕವಾಗಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮುಂದಿನ 3 ದಿನ ಸಾಧಾರಣ ಮಳೆ ಬೀಳಲಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎಂದಿನಂತೆ ಒಣಹವೆ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಸೈಕ್ಲೋನ್ ದುರ್ಬಲ:ತೀವ್ರಗೊಂಡಿದ್ದ ‘ಮುರಸು’ ಚಂಡಮಾರುತವು ದುರ್ಬಲಗೊಂಡು ಪ್ರಸ್ತುತ ಪೂರ್ವ ತೆಲಂಗಾಣ ಮತ್ತು ಅದಕ್ಕೆ ಹತ್ತಿರ ಇರುವ ಕರಾವಳಿ ಆಂಧ್ರಪ್ರದೇಶದ ಮೇಲೆ ವಾಯುಭಾರ ಕುಸಿತವಾಗಿ ಮುಂದುವರಿದಿದೆ. ತಮಿಳುನಾಡು, ಕೇರಳ, ಕರಾವಳಿ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಸಾಧಾರಣದಿಂದ ಭಾರಿ ಮಳೆಯಾಗಲಿದೆ. ಸಮುದ್ರದ ಸ್ಥಿತಿಯು ರಭಸದಿಂದ ಕೂಡಿರುವುದರಿಂದ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.