

ಶಿವಮೊಗ್ಗ: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆಗೆ ರೈತ ಮಹಿಳೆ ಸೇರಿ ಇಬ್ಬರು ಬಲಿಯಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮಾಳೂರಿನ ಅನ್ಸರ್ (48) ಮತ್ತು ಸುಳ್ಳುಗೋಡಿನ ಭವಾನಿ ಶಂಕರನಾರಾಯಣ(52) ಮೃತರು ಎಂದು ಗುರುತಿಸಲಾಗಿದೆ.
ಮೂರು ದಿನದ ಹಿಂದೆ ಮಾಲೂರು ಸಮೀಪದ ತುಂಗಾನದಿಯಲ್ಲಿ ಕೊಚ್ಚಿ ಹೋಗಿದ್ದ ಅನ್ಸರ್ ಮೃತದೇಹ ಭಾನುವಾರ ಪತ್ತೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಸುಳುಗೋಡಿನ ಭವಾನಿ ಅವರು ಭಾನುವಾರ ತೋಟಕ್ಕೆ ಹೋಗಿದ್ದರು. ಆದರೆ ಮೇಲಿನ ಕುರುವಳ್ಳಿ ಗ್ರಾಪಂ ವ್ಯಾಪ್ತಿ ಬಾಳೆಹಿತ್ತಲು ಹಳ್ಳದಲ್ಲಿ ಕೊಚ್ಚಿಹೋಗಿದ್ದರು. ಬೆಳಗ್ಗೆ ತೋಟಕ್ಕೆ ಎಂದು ಹೋದವರು ಸಂಜೆಯಾದರೂ ಪತ್ತೆಯಾಗಿರಲಿಲ್ಲ. ಹುಡುಕಾಟ ನಡೆಸಿದಾಗ ತಡರಾತ್ರಿ ಅವರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಸೇರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಇದರೊಂದಿಗೆ ಜಿಲ್ಲೆಯಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ.