ಆರಿದ್ರೆ ಮಳೆ ಹಬ್ಬ

RPT poje
ರಿಪ್ಪನ್‌ಪೇಟೆ ಹಾರೋಹಿತ್ತಲು ಗ್ರಾಮದಲ್ಲಿ ಆರಿದ್ರಾ ಹಬ್ಬದ ವಿಶೇಷ ಪೂಜೆ ನಡೆಯಿತು.
Published on

ರಿಪ್ಪನ್‌ಪೇಟೆ: ಆರಿದ್ರಾ ಮಳೆಯ ಸಂದರ್ಭದಲ್ಲಿ ಮಲೆನಾಡು ಭಾಗದ ಈಡಿಗ (ದೀವರು) ಸಮಾಜದವರು ನೆಲ ಮತ್ತು ಜಲವನ್ನು ದೈವತ್ವದಂತೆ ಆರಾಧಿಸುವ ವಿಶೇಷ ಆಚರಣೆಯೇ ಆರಿದ್ರೆ ಮಳೆ ಹಬ್ಬ.
ಪ್ರಕೃತಿ ಪ್ರಿಯರಾದ ದೀವರು ತಮ್ಮ ದೈವಾಚರಣೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅಂತೆಯೆ ಪ್ರತಿವರ್ಷ ಈ ದೈವಸ್ವರೂಪಿಗಳಿಗೆ ಬಲಿಯನ್ನು ನೀಡಿ ಸಂತೈಸುವುದು ಆಚರಣೆಯ ಉದ್ದೇಶ. ಮೂಲತಃ ಕೃಷಿಕರಾದ ಇವರು ತಮ್ಮ ಮುಂದಿನ ಕೃಷಿ ಚಟುವಟಿಕೆಗಳಿಗೆ ಮಳೆಬೆಳೆ ಸಮೃದ್ಧಿಯಾಗಿ ಬರಲೆಂದು ಪೂಜಿಸುವ ಹಬ್ಬ ಇದಾಗಿದೆ.
ದೇವರಿಗೆ ಹಬ್ಬದ ಆಚರಣೆಯಲ್ಲಿ ಕುರಿ, ಕೋಳಿಯನ್ನು ಬಲಿಕೊಟ್ಟರು. ಜತೆಗೆ ತೆಂಗಿನಕಾಯಿ, ಬಾಳೆಗೊನೆಯನ್ನು ಅರ್ಪಿಸಿ ಪೂಜೆ ನೆರವೇರಿಸಿದರು. ಹಬ್ಬಕ್ಕೆ ಹೆಂಗಳೆಯರು ಮನೆ ಸ್ವಚ್ಛಗೊಳಿಸಿ ಅಡುಗೆಮನೆಯ ಇಡಕಲು ಮೇಲೆ ತುಂಬಿದ ಕೊಡವಿಟ್ಟು ದೀಪಹಚ್ಚಿ ಮುಖ್ಯವಾಗಿ ಹಲಸಿನ ಹಣ್ಣಿನ ಕೊಟ್ಟೆಕಡುಬು, ಕಡಲೆಬೇಳೆ ಖಾದ್ಯ ಮತ್ತು ದೊಡ್ಡಕ್ಕಿ ಪಾಯಸಮಾಡಿ ದೈವಗಳ ಲೆಕ್ಕದಲ್ಲಿ ಮೂರು, ಐದು, ಏಳು ಎಡೆಯಿಟ್ಟು ಆರಾಧಿಸಿ ಪ್ರಸಾದ ಸ್ವೀಕರಿಸಿದರು. ಜತೆಗೆ ಮತ್ತೊಂದು ಕೀಳುಯೆಡೆ ಮಾಡಿಟ್ಟು ಅಗಲಿದ ಕುಟುಂಬಸ್ಥರ ನೆನಪಿಗಾಗಿ ಚಪ್ಪರ ಮೇಲೋ, ಬೇಲಿ ಮೇಲೋ ಎಡೆಯನ್ನಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net