

ಬೆಂಗಳೂರು: ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರಿ ಅವಾಂತರ ಸೃಷ್ಟಿಸಿರುವ ಮಳೆ ಶನಿವಾರ ತುಸು ಬಿಡುವು ನೀಡಿದರೂ, ಪ್ರವಾಹ ಪೀಡಿತ ಪ್ರದೇಶದ ಜನರ ಬವಣೆ ಕಡಿಮೆಯಾಗಿಲ್ಲ. ಮಳೆ ತಗ್ಗಿದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದ್ದು, ಮತ್ತಷ್ಟು ಹಾನಿ, ಅನಾಹುತಗಳು ಬೆಳಕಿಗೆ ಬರುತ್ತಿವೆ. ಹಲವು ಗ್ರಾಮಗಳು ದ್ವೀಪದಂತಾಗಿದ್ದು, ಅಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಬೆಳಗಾವಿ ಸಹಿತ ಕೆಲ ಜಿಲ್ಲೆಗಳಲ್ಲಿ ಮಳೆ ನಿಂತಿದ್ದರೂ, ನೆರೆಯ ಭೀತಿ ಇನ್ನೂ ತಗ್ಗಿಲ್ಲ. ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ಜನರು ಆತಂಕದಲ್ಲಿದ್ದಾರೆ.
ಅಣೆಕಟ್ಟೆಗಳು ಭರ್ತಿ: ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಬಹುತೇಕ ಅಣೆಕಟ್ಟೆಗಳು ಭರ್ತಿಯಾಗುವ ಹಂತಕ್ಕೆ ಬಂದಿವೆ. ತುಂಗಭದ್ರಾ ಜಲಾಶಯದ ಭರ್ತಿಗೆ ಕೇವಲ ಎಂಟು ಅಡಿ ಬಾಕಿಯಿದೆ. ಶನಿವಾರ ಜಲಾಶಯಕ್ಕೆ 1,20,411 ಕ್ಯೂಸೆಕ್ ಒಳಹರಿವು ಬಂದಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಒಂದೇ ದಿನ 3.45 ಅಡಿ ಏರಿಕೆಯಾಗಿದೆ. 1,03,117 ಕ್ಯೂಸೆಕ್ ಒಳಹರಿವಿದೆ. ಕೆಆರ್ಎಸ್ ಮಟ್ಟ 107 ಅಡಿಗೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ 139ಕ್ಕೆ ಏರಿದ ಸಾವು: ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ139ಕ್ಕೆ ಏರಿಕೆಯಾಗಿದೆ. ಕೊಂಕಣ ಪ್ರದೇಶದ ಅನೇಕ ಜಿಲ್ಲೆಗಳು ಭಾರಿ ಸಂಕಷ್ಟಕ್ಕೆ ಒಳಗಾಗಿವೆ. ಕೊಲ್ಹಾಪುರದಲ್ಲಿ 54 ಗ್ರಾಮಗಳು ಮುಳುಗಿವೆ. 821 ಗ್ರಾಮಗಳಲ್ಲಿ ಭಾಗಶಃ ಪ್ರವಾಹ ಪರಿಸ್ಥಿತಿ ಇದೆ. ಕೊಲ್ಹಾಪುರದಲ್ಲಿ ಎಂಟು ನೇಪಾಳಿಗಳು ಸೇರಿ 11 ಜನ ಇದ್ದ ಬಸ್ ಪ್ರವಾಹದಲ್ಲಿ ಕೊಚ್ಚಿ ಹೋಗುವುದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದೆ. ಮಹಾರಾಷ್ಟ್ರ ಸರ್ಕಾರ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಸಿಡಿಲು ಬಡಿದು ಐವರು ಬಲಿಯಾಗಿದ್ದಾರೆ.
ರಣ ಮಳೆಗೆ 9 ಮಂದಿ ಸಾವು: ಕಳೆದ ಎರಡು ದಿನದಲ್ಲಿ ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರ್ಕಾರ ಶನಿವಾರ ಮಾಹಿತಿ ನೀಡಿದೆ. 11 ಜಿಲ್ಲೆಗಳ 45 ತಾಲೂಕುಗಳು ಸಂಕಷ್ಟಕ್ಕೆ ಸಿಲುಕಿದ್ದು, ಅಂದಾಜು 283 ಗ್ರಾಮಗಳಲ್ಲಿ ಭಾರಿ ಹಾನಿಯಾಗಿದೆ. ಪ್ರವಾಹದಿಂದ 36,498 ಮಂದಿಗೆ ತೊಂದರೆಯಾಗಿದ್ದು, 3 ಮಂದಿ ಕಾಣೆಯಾಗಿದ್ದಾರೆ. 31,360 ಜನರನ್ನು ಸ್ಥಳಾಂತರಿಸಲಾಗಿದೆ. 134 ಮನೆಗಳು ಸಂಪೂರ್ಣ ಹಾಗೂ 2,480 ಮನೆಗಳು ಭಾಗಶಃ ಹಾನಿಯಾಗಿವೆ. 78 ಜಾನುವಾರುಗಳು ಸಾವನ್ನಪ್ಪಿವೆ. ರಾಜ್ಯದ 237 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ 22,417 ಜನರಿಗೆ ಪರಿಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಹದಿಂದಾಗಿ 58,960 ಎಕರೆಯಲ್ಲಿ ಬೆಳೆದ ಬೆಳೆ ಹಾನಿಗೊಂಡಿವೆ. 1,962 ಎಕರೆಯಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆ ಹಾಳಾಗಿವೆ. ಅಂದಾಜು 555 ಕಿ.ಮೀ.ರಸ್ತೆಗಳು, 123 ಸೇತುವೆಗಳು, 213 ಶಾಲೆಗಳು ಹಾಗೂ 33 ಆರೋಗ್ಯ ಕೇಂದ್ರಗಳು, 3,502 ವಿದ್ಯುತ್ ಕಂಬಗಳು ಹಾನಿಗೊಂಡಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಬೆಳಗಾವಿಗೆ ಇಂದು ಸಿಎಂ: ಪ್ರವಾಹ ಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಭೇಟಿ ನೀಡಲಿದ್ದಾರೆ. ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚೆ ನಡೆಸಲಿದ್ದಾರೆ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅವರು ಈಗಾಗಲೇ ಸೂಚನೆ ನೀಡಿದ್ದಾರೆ.
ಉತ್ತರ ಕನ್ನಡ: 81 ಗ್ರಾಮಗಳು ಪ್ರವಾಹ ಪೀಡಿತ; 50 ಮನೆಗಳು ಸಂಪೂರ್ಣ ಬಿದ್ದಿದ್ದು, 146 ಮನೆಗಳಿಗೆ ಭಾಗಶಃ ಹಾನಿಯಾಗಿದೆ; ಈವರೆಗೆ 4 ಸಾವು. ಇಬ್ಬರು ನಾಪತ್ತೆ.
ಗದಗ: ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದು ರೋಣ ಮತ್ತು ನರಗುಂದ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ನೆರೆ ಭೀತಿ
ಶಿವಮೊಗ್ಗ: ಚರಂಡಿ ಮೂಲಕ ಹರಿದ ತುಂಗಾ ಜಲಾಶಯ ನೀರು; ಸುತ್ತಮುತ್ತಲಿನ ಪ್ರದೇಶ ಜಲಾವೃತ; ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಇದನ್ನು ತೆರವು ಮಾಡಲು ಜನರು ರಾತ್ರಿ ಇಡೀ ಶ್ರಮಿಸಬೇಕಾಯಿತು.
ಚಿಕ್ಕಮಗಳೂರು: ವರುಣನ ಆರ್ಭಟಕ್ಕೆ 100 ಕೋಟಿ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ; 3.1 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ; 30 ಸೇತುವೆ, 327 ಕಿಮೀ ರಸ್ತೆಗಳಿಗೆ ಹಾನಿಯಾಗಿದ್ದು, ಸಂಚಾರ ಸ್ಥಗಿತವಾಗಿದೆ.
ಮಡಿಕೇರಿ: ಮಡಿಕೇರಿ-ಸೋಮವಾರಪೇಟೆ ಮುಖ್ಯರಸ್ತೆಯ ಹಟ್ಟಿಹೊಳೆಯಲ್ಲಿ 500 ಮೀಟರ್ಗಳಷ್ಟು ದೂರ ರಸ್ತೆ ಬಿರುಕು ಬಿಟ್ಟಿದ್ದು, ರಸ್ತೆ ಕುಸಿಯುವ ಆತಂಕ ಎದುರಾಗಿದೆ.
ಹಾಸನ: ಹೇಮಾವತಿ, ವಾಟೇಹೊಳೆ, ಯಗಚಿ ಜಲಾಶಯಗಳ ಒಳಹರಿವು ಹೆಚ್ಚಿದ್ದು, ವಾಟೇಹೊಳೆಯಿಂದ ನದಿಗೆ ನೀರು ಹರಿಸಲಾಗುತ್ತಿದೆ ್ಝ ಗೊರೂರಿನ ಹೇಮಾವತಿ ಅಣೆಕಟ್ಟೆ ಭಾಗಶಃ ಭರ್ತಿಯಾಗಿದೆ.
ಬೆಳಗಾವಿ: ನದಿಪಾತ್ರ ಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಜಿಲ್ಲಾದ್ಯಂತ ಶನಿವಾರವೂ ಜಿಟಿಜಿಟಿ ಮಳೆ ಮುಂದುವರಿದಿತ್ತು. ನದಿತೀರದ ಮನೆಗಳು, ಕೃಷಿಭೂಮಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಾವಣಗೆರೆ: ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿನ ಹೂವಿನ ಬೆಳೆ ಗಳು, ಮೆಕ್ಕೆಜೋಳ, ಶೇಂಗಾ, ಅಡಕೆ, ದ್ವಿದಳ ಧಾನ್ಯ ಬೆಳೆಗಳು ಜಲಾವೃತ ್ಝ ನೂರಕ್ಕೂ ಹೆಚ್ಚು ಮನೆಗಳಿಗೆ ಹಾನಿ.