ಲಹರಿಯಲ್ಲಿ ತೂಗುಮಂಚದಲ್ಲಿ ಕೂತ ರಕ್ಷಿತ್ ಶೆಟ್ಟಿ-ರಶ್ಮಿಕಾ...

Untitled-1
Published on

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ತೂಗುಮಂಚದಲ್ಲಿ ಕೂತು ಲಹರಿಗೆ ಹೋಗಿದ್ದಾರೆ. ಅರ್ಥಾತ್, ಅವರ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾದಲ್ಲಿನ ಬಹುಜನಪ್ರಿಯ ಗೀತೆ 'ತೂಗುಮಂಚದಲ್ಲಿ ಕೂತು' ಇಂದು ಲಹರಿ ಮ್ಯೂಸಿಕ್​ನಲ್ಲಿ ಬಿಡುಗಡೆ ಆಗಿದೆ.

ಸಿ. ಅಶ್ವತ್ಥ್​ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಎಚ್​.ಎಸ್. ವೆಂಕಟೇಶಮೂರ್ತಿ ಅವರ ಸಾಹಿತ್ಯದ ಈ ಹಾಡನ್ನು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದ್ದು, ಅದನ್ನು ಸಂಗೀತಾ ರವೀಂದ್ರನಾಥ್ ಹಾಡಿದ್ದರು. ಸಿನಿಮಾ ಬಿಡುಗಡೆಯಾದ ದಿನಗಳಲ್ಲಿ ಈ ಗೀತೆಗೆ ಬಹಳಷ್ಟು ಜನ ಮಾರುಹೋಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ ಸಿನಿಮಾ ಬಿಡುಗಡೆಯಾದ ಸುಮಾರು ಐದು ವರ್ಷಗಳ ಬಳಿಕ ಈ ಗೀತೆಯನ್ನು ಲಹರಿ ಮ್ಯೂಸಿಕ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಇಂದು ಈ ಗೀತೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಈ ಹಾಡನ್ನು ಕೇಳಿದ್ದಾರೆ ನೋಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ 2016ರ ಡಿಸೆಂಬರ್​ನಲ್ಲಿ ಬಿಡುಗಡೆ ಆಗಿತ್ತು.

ಈ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಜತೆಗೆ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಕೂಡ ನಾಯಕಿಯರಾಗಿ ಅಭಿನಯಿಸಿದ್ದರು. ಈ ಸಿನಿಮಾದಿಂದ ರಕ್ಷಿತ್, ರಿಷಬ್ ಮಾತ್ರವಲ್ಲದೆ ರಶ್ಮಿಕಾ ಕೂಡ ದೊಡ್ಡ ಬ್ರೇಕ್ ಪಡೆದಿದ್ದರು. ಮೊದಲ ಸಿನಿಮಾದಲ್ಲೇ ಸಿಕ್ಕ ಯಶಸ್ಸು ರಶ್ಮಿಕಾ ಬದುಕಿಗೆ ದೊಡ್ಡ ತಿರುವನ್ನೇ ನೀಡಿ ಪರಭಾಷೆಗಳಿಗೂ ಕೊಂಡೊಯ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net