ಉತ್ತರದಲ್ಲಿ ನಿಲ್ಲದ ಮಳೆ ಅನಾಹುತ; ಉಳ್ಳಾಗಡ್ಡಿ ದರ ಏರಿಕೆ

Rain 1 Oct
Published on

ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ನೂರಾರು ಮನೆಗಳು ಜಾಲಾವೃತವಾಗಿವೆ. ಸಾವಿರಾರು ಎಕರೆಯಲ್ಲಿ ಬೆಳೆದುನಿಂತಿದ್ದ ಫಸಲು ಹಾನಿಯಾಗಿದ್ದು, ರೈತರಿಗೆ ಅಘಾತ ತಂದಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನಲ್ಲಿ ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕೆಲವು ಗ್ರಾಮಗಳಲ್ಲಿ ನೂರಾರು ಮನೆಗಳು ಜಲಾವೃತವಾಗಿವೆ. ಬೂದಿಹಾಳ ನವಗ್ರಾಮದ 174 ಮನೆಗಳು, ವಾಸನ ಗ್ರಾಮದ ತಗಡಿನ 42 ತಾತ್ಕಾಲಿಕ ಶೆಡ್​ಗಳು, ಕೊಣ್ಣೂರಿನ ಉಪ ಪೊಲೀಸ್ ಠಾಣೆ, ಗ್ರಾಪಂ ಕಾರ್ಯಾಲಯ, ಪಶು ಆಸ್ಪತ್ರೆಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಕೊಣ್ಣೂರಲ್ಲಿ 1 ಮನೆ ಸಂಪೂರ್ಣ, ವಾಸನದಲ್ಲಿ 2 ಮನೆಗಳು, ಬೆಳ್ಳೇರಿಯಲ್ಲಿ ಮೂರು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಮಳೆ -ಇಳಕಲ್ ಭಾಗದಲ್ಲಿ ಜನಜೀವನ ಅಸ್ತವ್ಯಸ್ತ. ಒಂದು ಮನೆ ಕುಸಿತ. ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.

ಮಳೆಗೆ ಕೊಚ್ಚಿ ಹೋದ ಟ್ರ್ಯಾಕ್ಟರ್: ಕೊಪ್ಪಳ ತಾಲೂಕಿನ ಭೈರಾಪುರ ಬಳಿ ಹಳ್ಳ ದಾಟುವಾಗ ರೈತರರೊಬ್ಬರ ಟ್ರ್ಯಾಕ್ಟರ್ ನೀರಿಗೆ ಕೊಚ್ಚಿ ಹೋಗಿದೆ. ಭೈರಾಪುರ ಹಾಗೂ ನಿಲೋಗಿಪುರ ನಡುವೆ ಒಂದೆ ಸಂಪರ್ಕ ರಸ್ತೆಯಿದ್ದು, ಮಧ್ಯದಲ್ಲಿ ಹಳ್ಳವಿದೆ. ಅಧಿಕ ಮಳೆಯಿಂದ ಹಳ್ಳ ತುಂಬಿ ಹರಿಯುತ್ತಿದೆ. ಅದನ್ನು ದಾಟಲು ತೆರಳಿದ ಟ್ರ್ಯಾಕ್ಟರ್ ಕೊಚ್ಚಿ ಹೋಗಿದೆ. ಅಳವಂಡಿ-ಕಂಪ್ಲಿ ಗ್ರಾಮಗಳನ್ನು ಸಂರ್ಪಸುವ ರಸ್ತೆಯಲ್ಲಿನ ಕುಟುಂಬವೊಂದು ಅಪಾಯ ಲೆಕ್ಕಿಸದೇ ಹಳ್ಳ ದಾಟಿದೆ. ಪತಿಯೊಬ್ಬ ತನ್ನ ಪತ್ನಿಯನ್ನು ಎತ್ತಿ್ತೊಂಡು ಹಳ್ಳ ದಾಟಿದ್ದಾನೆ. ಆತನ ಹಿಂದೆಯೆ ಮಗು ಎತ್ತಿಕೊಂಡ ಮತ್ತೊಬ್ಬ ವ್ಯಕ್ತಿ ಸೇರಿ ಮೂವರು ಕೈ ಕೈ ಹಿಡಿದು ದಾಟಿದ್ದಾರೆ. ಇದನ್ನೂ ಓದಿ: ಪ್ರತಿಭಟನೆಯ ಉತ್ಸಾಹದಲ್ಲಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೈಮೇಲೆ ಬಿದ್ದ ಬಿಸಿ ಎಣ್ಣೆ…!

ಕೊಚ್ಚಿಹೋದ ಎತ್ತಿನಬಂಡಿ: ರಾಯಚೂರು ತಾಲೂಕು ಯರಗೇರಾ ಗ್ರಾಮದ ಬಳಿ ತುಂಬಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಎತ್ತಿಬಂಡಿಯೊಂದು ಕೊಚ್ಚಿಹೋಗಿದೆ. ಅದೃಷ್ಟವಶಾತ್ ಇದರಲ್ಲಿದ್ದ ವ್ಯಕ್ತಿಗಳು ಮತ್ತು ಎತ್ತುಗಳು ಪ್ರಾಣಾಪಾಯದಿಂದ ಪಾರಾಗಿವೆ. ಒಬ್ಬ ಮಹಿಳೆ ಮತ್ತು ಮೂವರು ಪುರುಷರು ಬಂಡಿಯಲ್ಲಿದ್ದರು.

ಉಳ್ಳಾಗಡ್ಡಿ ದರ ಏರುಮುಖ

ಧಾರವಾಡ ಜಿಲ್ಲೆಯಲ್ಲಿ ಅತಿಯಾದ ಮಳೆಗೆ ಉಳ್ಳಾಗಡ್ಡಿ ಬೆಳೆ ಹಾಳಾಗಿದೆ. 2020ರ ಮುಂಗಾರಿನಲ್ಲಿ ಧಾರವಾಡ ಜಿಲ್ಲೆಯಲ್ಲಿ 28905 ಹೆಕ್ಟೇರ್​ನಲ್ಲಿ ಉಳ್ಳಾಗಡ್ಡಿ ಬಿತ್ತನೆಯಾಗಿತ್ತು. ಅಂದಾಜು 5.78 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ, ಸುಮಾರು 14041 ಹೆಕ್ಟೇರ್​ನಲ್ಲಿನ ಉಳ್ಳಾಗಡ್ಡಿ ಮಳೆಯಿಂದ ನಷ್ಟವಾಗಿದೆ. ಹಾಗಾಗಿ ಮಾರುಕಟ್ಟೆಗೆ ಆವಕ ತೀರಾ ಕಡಿಮೆಯಾಗಿದೆ. ಪ್ರತಿ ವರ್ಷ ಇದೇ ಸೀಸನ್​ನಲ್ಲಿ ನಿತ್ಯ ಏನಿಲ್ಲವೆಂದರೂ 10 ಸಾವಿರದಿಂದ 20 ಸಾವಿರ ಕ್ವಿಂಟಾಲ್​ವರೆಗೆ ಆವಕವಾಗುತ್ತಿದ್ದ ಉಳ್ಳಾಗಡ್ಡಿ ಈ ವರ್ಷ ಬರಿ ಸಾವಿರ ಕ್ವಿಂಟಾಲ್​ಗೆ ಇಳಿದಿದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಗುರುವಾರ ಪ್ರತಿ ಕ್ವಿಂಟಾಲ್​ಗೆ ಕನಿಷ್ಠ 300 ರೂ. ನಿಂದ ಗರಿಷ್ಠ 2700 ರೂ. ವರೆಗೆ ಮಾರಾಟವಾಗಿದೆ. ಒಟ್ಟು 1100 ಕ್ವಿಂಟಾಲ್ ಮಾತ್ರ ಆವಕವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net