

ಬೆಂಗಳೂರು: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರ ಮೈಮೇಲೆ ಬಿಸಿ ಎಣ್ಣೆ ಬಿದ್ದಿದ್ದು, ಒಂದು ಕ್ಷಣ ಪ್ರತಿಭಟನೆಯಲ್ಲಿ ಗಲಿಬಿಲಿ ಉಂಟಾಯಿತು.
ಪಂಜು ಹಿಡಿದು ಹೊರಟಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋರಾಟದ ಉತ್ಸಾಹದಲ್ಲಿ ಸಾಮಾಜಿಕ ಅಂತರ ಮರೆತಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಹೀಗಾಗಿ ಪಂಜಿನಲ್ಲಿದ್ದ ಬಿಸಿ ಎಣ್ಣೆ ಅವರ ಕುತ್ತಿಗೆ ಮೇಲೆ ಬಿದ್ದಿದೆ. ತಕ್ಷಣವೇ ಭದ್ರತಾ ಸಿಬ್ಬಂದಿ ಮತ್ತು ಅಲ್ಲಿದ್ದ ಮುಖಂಡರು ಎಣ್ಣೆ ಒರೆಸಿದರು.
ಯಾವುದೆ ಗಾಯಗಳಾಗದೇ ಇದ್ದರೂ, ಅಲ್ಲಿದ್ದವರೆಲ್ಲ ಕೆಲಕ್ಷಣ ಗಾಬರಿಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅನುಮತಿ ಪಡೆಯದೇ ಪ್ರತಿಭಟಿಸಿದ್ದರಿಂದ ಅವರನ್ನೆಲ್ಲ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.