

ಕೋಲಾರ: ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ವರುಣ ಶನಿವಾರ ಬೆಳಗ್ಗಿನಿಂದ ಸಂಜೆ 4ರವರೆಗೆ ವಿರಾಮ ನೀಡಿದ್ದನಾದರೂ ಮೋಡ ಮುಸುಕಿದ ವಾತಾವರಣ ಸೂರ್ಯನನ್ನು ಮರೆಮಾಚಿತ್ತು.
ವಾಯುಭಾರ ಕುಸಿತದ ಪರಿಣಾಮ ಸತತ ಮಳೆಗೆ ಬಯಲುಸೀಮೆ ಕೋಲಾರ ಮಲೆನಾಡಿನಂತಾಗಿ ಜನ ಮನೆಯಿಂದ ಹೊರಬರುವುದೇ ಕಷ್ಟವಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಲಕ್ಷಾಂತರ ಮೌಲ್ಯದ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ನಗರದಿಂದ ಹಳ್ಳಿಯವರೆಗಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.
ಜಿಲ್ಲೆಯಲ್ಲಿ 26 ಮಿಮೀ ಮಳೆ: ಶುಕ್ರವಾರವೂ ಜಡಿ ಮಳೆ ಸುರಿದಿತ್ತಾದರೂ ರಾತ್ರಿ ವಿರಾಮ ನೀಡಿತ್ತು. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 26 ಮಿಮೀ ಮಳೆಯಾಗಿದೆ. ಬಂಗಾರಪೇಟೆಯಲ್ಲಿ 38 ಮಿಮೀ, ಕೋಲಾರದಲ್ಲಿ 41 ಮಿಮೀ, ಮಾಲೂರಿನಲ್ಲಿ 28 ಮಿಮೀ, ಮುಳಬಾಗಿಲು 18 ಮಿಮೀ, ಕೆಜಿಎಫ್‌ನಲ್ಲಿ 30 ಮಿಮೀ ಮಳೆಯಾಗಿದ್ದರೆ ಅತಿ ಕಡಿಮೆ ಶ್ರೀನಿವಾಸಪುರದಲ್ಲಿ 8 ಮಿಮೀ ಮಳೆ ದಾಖಲಾಗಿದೆ.
ಶನಿವಾರ ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣ ಕಂಡುಬಂತು, ಕೆಲ ನಿಮಿಷ ಸೂರ್ಯ ಮೋಡದ ಮರೆಯಿಂದ ಇಣುಕಿದನಾದರೂ ಮತ್ತೆ ಮೋಡ ಆವರಿಸಿಕೊಂಡಿದ್ದು ಸಂಜೆಯವರೆಗೂ ಸೂರ್ಯನಿಗೆ ಹೊರಗಡೆ ಕಾಣಿಸಿಕೊಳ್ಳಲು ಅವಕಾಶ ನೀಡಲೇ ಇಲ್ಲ. ಹೀಗಾಗಿ ಇಡೀ ದಿನ ಶೀತ ವಾತಾವರಣ, ಉಷ್ಣಾಂಶ 21 ಡಿಗ್ರಿ ಸೆಲ್ಷಿಯಸ್‌ಕ್ಕಿಂತ ಹೆಚ್ಚು ದಾಟಲಿಲ್ಲ.
ಜಡಿಮಳೆಗೆ ಹೊರಗೆ ಬರಲಾಗದ ಜನತೆ ಇಂದು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಕಂಡುಬಂತು. ಪ್ರಮುಖವಾಗಿ ರೈತರು ಹೊಲಗಳತ್ತ ಹೆಜ್ಜೆ ಹಾಕಿ ನೆಲಕ್ಕೆ ಒರಗಿ ನೀರಿನಲ್ಲಿ ತೋಯ್ದ್ದು ಮೊಳಕೆ ಒಡೆಯುತ್ತಿರುವ ರಾಗಿ ತೆನೆಯನ್ನು ರಕ್ಷಿಸಿಕೊಳ್ಳುವ, ಕಟಾವು ಮಾಡುವ ಕೆಲಸದಲ್ಲಿ ತೊಡಗಿದ್ದರು. ಕಟಾವು ಮಾಡಿ ರಾಶಿ ಹಾಕಿದ್ದ ತೆನೆಯನ್ನು ಟಾರ್ಪಾಲ್‌ನಲ್ಲಿ ಹರಡಿ ಗಾಳಿಯಾಡಲು ಬಿಟ್ಟಿದ್ದರು.
ಸಾರ್ವಜನಿಕರು ಅವಶ್ಯಕ ವಸ್ತುಗಳ ಖರೀದಿಗೆ ನಗರಕ್ಕೆ ಬಂದಿದ್ದರಿಂದ ಎರಡ್ಮೂರು ದಿನಗಳಿಗಿಂತ ತುಸು ಹೆಚ್ಚು ಜನಸಂದಣಿ ಕಂಡುಬಂತು. ಕೆಲಸ ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಿಗೆ ಎಡತಾಕುತ್ತಿದ್ದ ದೃಶ್ಯ ಕಂಡುಬಂತು. ಸಂಜೆ 5 ಗಂಟೆಯ ನಂತರ ಕೆಲ ಭಾಗದಲ್ಲಿ ಆಗಾಗ್ಗೆ ತುಂತುರು ಮಳೆ ಸುರಿಯಿತು.
ಒತ್ತುವರಿ ಪರಿಶೀಲನೆ: ಬೆಳೆ ನಷ್ಟದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ಗ್ರಾಪಂ ಅಧಿಕಾರಿ ಸಿಬ್ಬಂದಿ ರೈತರ ಹೊಲಗಳತ್ತ ಭೇಟಿ ನೀಡಿದ್ದರು. ತಾಲೂಕಿನ ಹೋಳೂರು ಗ್ರಾಮದಲ್ಲಿ ದೊಡ್ಡಕೆರೆ ಕಾಲುವೆ ಒತ್ತುವರಿಯಾಗಿರುವ ಕಾರಣ ನೀರು ಮುಂದಿನ ಎದರೂರು ಕೆರೆಗೆ ಸರಾಗವಾಗಿ ಹರಿಯದೆ ರೈತರ ರಾಗಿ, ಬಾಳೆ ಇನ್ನಿತರ ತೋಟಗಳಿಗೆ ನುಗ್ಗಿ ಬೆಳೆ ನಷ್ಟವಾಗಿದೆ. ಕೃಷಿ ಸಹಾಯಕ ಅಧಿಕಾರಿ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ದೊಡ್ಡಕೆರೆಯಿಂದ ಎದರೂರು ಕೆರೆಗೆ ನೀರು ಹರಿಯುವ ಕಾಲುವೆ ಒತ್ತುವರಿ ತೆರವಿಗೆ ಸರ್ವೇ ನಡೆಸಿ ಕೊಡುವಂತೆ ಕೆಸಿ ವ್ಯಾಲಿ ಯೋಜನೆ ಇಂಜಿನಿಯರ್‌ಗಳು ತಹಸೀಲ್ದಾರ್‌ಗೆ ಪತ್ರ ಬರೆದಿದ್ದರೂ ಕ್ರಮ ವಹಿಸದಿರುವುದರಿಂದ ನೀರು ತೋಟಗಳಿಗೆ ನುಗ್ಗಿದೆ ಎಂದು ಗ್ರಾಮದ ಎಚ್.ಎಸ್.ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕಾವೇರಿ ಭೇಟಿ ನೀಡಿ ಒತ್ತುವರಿ ಪರಿಶೀಲಿಸಿದರಲ್ಲದೆ ಸರ್ವೇ ನಡೆಸುವ ಬಗ್ಗೆ ತಹಸೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ.