

ನವದೆಹಲಿ: ರೈಲ್ವೆ ಇಲಾಖೆಯಲ್ಲೀಗ ಅಧುನೀಕರಣದ ಗಾಳಿ ಬೀಸುತ್ತಿದೆ. ಹೊಸ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುತ್ತಿದೆ. ಅಂತೆಯೇ, ಶತಮಾನಗಳ ಹಳೆಯ ಸಂಪ್ರದಾಯವೊಂದಕ್ಕೆ ತಿಲಾಂಜಲಿ ನೀಡಿದೆ.
ಈವರೆಗೂ ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡಲೆಂದೇ ಟೆಲಿಫೋನ್ ಅಟೆಂಡೆಂಟ್ ಕಮ್ ಡಾಖ್ ಕಲಾಸಿ ಅಥವಾ ಬಂಗ್ಲೆ ಪ್ಯೂನ್ ಹೆಸರಿನಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿತ್ತು. ಮೇಲಧಿಕಾರಿಗಳ ಮನೆಯ ಚಾಕರಿಗೆಂದೇ ಇರುತ್ತಿದ್ದವರನ್ನು ಈ ಹೆಸರಿನಿಂದ ಕರೆಯತ್ತಿದ್ದರು ಎನ್ನಬಹುದೇನೋ.
ಬ್ರಿಟಿಷರ ಕಾಲದಲ್ಲಿ ಇಂಥದ್ದೊಂದು ಪದ್ಧತಿ ಪ್ರಾರಂಭವಾಗಿತ್ತು. ಇಂದಿನವರೆಗೂ ಈ ವಸಾಹತುಶಾಹಿ ಉಳಿಗ ಮುಂದುವರಿದಿತ್ತು. ಇದೀಗ ಈ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳದಂತೆ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.
ಈ ನೇಮಕಾತಿ ಮಂಡಳಿಯ ಪರಿಶೀಲನೆಯಲ್ಲಿತ್ತು. 2020ರ ಜುಲೈ 1ರಿಂದ ಅನ್ವಯವಾಗುವಂತೆ ಅಂಥ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹುದ್ದೆಗಳಿಗೆ ನೇಮಕವಾಗುತ್ತಿದ್ದವರು ಮೂರು ವರ್ಷಗಳ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟು ಡಿ ಗ್ರೂಪ್ ಹುದ್ದೆಗಳ ಸಮಾನ ಸ್ಥಾನಮಾನ ಪಡೆಯುತ್ತಿದ್ದರು.