ಪ್ರಯಾಣಿಕನ ಒಂದು ದೂರಿಗೆ ರೈಲ್ವೆ ಇಲಾಖೆಗೆ ಬಿತ್ತು ಭಾರೀ ದಂಡ! 30,000 ರೂ. ಪರಿಹಾರ ನೀಡಲು ಆದೇಶ | Compensation

railways
Published on

ವಿಶಾಖಪಟ್ಟಣ: ಪ್ರಯಾಣಿಕರೊಬ್ಬರು ನೀಡಿದ ದೂರಿನ ಆಧಾರದ ಮೇರೆಗೆ ಭಾರತೀಯ ರೈಲ್ವೆ ಇಲಾಖೆಗೆ ಜಿಲ್ಲಾ ಗ್ರಾಹಕ ಆಯೋಗ 30,000 ರೂ. ದಂಡ ( Compensation) ವಿಧಿಸಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಪ್ರಕರಣದ ವಿಚಾರಣೆ ವಿಶಾಖಪಟ್ಟಣದಲ್ಲಿ ನಡೆದಿದ್ದು, ವಿ.ಮೂರ್ತಿ (55) ಅವರಿಗೆ ದಕ್ಷಿಣ ಮಧ್ಯ ರೈಲ್ವೆ ಇಲಾಖೆ 30,000 ರೂ. ಮೊತ್ತದ ಪರಿಹಾರ ಹಣವನ್ನು ನೀಡಬೇಕು ಎಂಬ ಆದೇಶ ಹೊರಡಿಸಿದೆ.

ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು

ರೈಲ್ವೆ ಕೋಚ್‌ನಲ್ಲಿನ ಎಸಿ ಅಸಮರ್ಪಕ ಕಾರ್ಯ, ಕುಡಿಯುವ ನೀರಿನ ಕೊರತೆ ಮತ್ತು ಸ್ವಚ್ಛತೆ ಕಾಪಾಡದ ಶೌಚಾಲಯಗಳಿಂದ ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಗೆ ಒಳಗಾಗದ ಪರಿಸ್ಥಿತಿ ಎದುರಾಯಿತು ಎಂದು ಮೂರ್ತಿ ಎಂಬ ಪ್ರಯಾಣಿಕ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ಇದರ ವಿಚಾರಣೆ ನಡೆಸಿದ ಆಯೋಗ, ಪ್ರಯಾಣಿಕರ ಆರೋಪಗಳನ್ನು ಪರಿಶೀಲಿಸಿ, ನಂತರದಲ್ಲಿ ರೈಲ್ವೆ ಇಲಾಖೆಯ ತಪ್ಪುಗಳನ್ನು ಎತ್ತಿಹಿಡಿದಿದೆ.

ಘಟನೆ ನಡೆದ ದಿನ ಯಾವುದು?

ತಮ್ಮ ಕುಟುಂಬದೊಂದಿಗೆ ಜೂನ್ 5, 2023ರಂದು ಮೂರ್ತಿ ಅವರು ತಿರುಮಲ ಎಕ್ಸ್‌ಪ್ರೆಸ್‌ನಲ್ಲಿ ತಿರುಪತಿಯಿಂದ ವಿಶಾಖಪಟ್ಟಣದ ದುವ್ವಾಡ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ತಿರುಪತಿ ನಿಲ್ದಾಣದಲ್ಲಿ ರೈಲು ಹತ್ತಿದ್ದ ಅವರು, ಕೋಚ್‌ನಲ್ಲಿ ಎಸಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಶೌಚಾಲಯದಲ್ಲಿ ನೀರು ಇರಲಿಲ್ಲ. ಜತೆಗೆ ಒಳಗೆ ಬಹಳ ಗಲೀಜಿತ್ತು. ಶೌಚಾಲಯವನ್ನು ಸ್ವಚ್ಛಗೊಳಿಸದ ಮತ್ತು ಬಳಕೆಗೆ ಯೋಗ್ಯವಾಗಿಲ್ಲದ ಕಾರಣ ದಯನೀಯ ಸ್ಥಿತಿಯಲ್ಲಿತ್ತು. ದುವ್ವಾಡ ರೈಲು ನಿಲ್ದಾಣದಲ್ಲಿ ವಿಷಯ ತಿಳಿಸಿದ್ದರೂ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ ಎಂದು ಮೂರ್ತಿ ಆಯೋಗದ ಬಳಿ ದೂರಿದ್ದರು.

25,000 ರೂ. + 5,000

ವಿಚಾರಣೆಯ ಸಂದರ್ಭದಲ್ಲಿ, ಮೂರ್ತಿ ಅವರು ಮಾಡಿದ ಆರೋಪಗಳು ಸುಳ್ಳು. ಅವರ ಕುಟುಂಬವು ಸೌಲಭ್ಯಗಳನ್ನು ಚೆನ್ನಾಗಿ ಬಳಸಿಕೊಂಡಿತು ಮತ್ತು ತೊಂದರೆಯಿಲ್ಲದೆ ಪ್ರಯಾಣವನ್ನು ಪೂರ್ಣಗೊಳಿಸಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ವಾದಿಸಿದರು. ಆದಾಗ್ಯೂ, ವಿಶಾಖಪಟ್ಟಣಂ ಜಿಲ್ಲಾ ಗ್ರಾಹಕರ ಆಯೋಗವು, ಪ್ರಯಾಣಿಕರಿಗೆ ನೀಡಲಾಗುವ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ರೈಲ್ವೆ ಇಲಾಖೆ ವಿಫಲವಾಗಿದೆ ಎಂದು ಹೇಳಿತು. ಮೂರ್ತಿ ಅವರ ಕುಟುಂಬಕ್ಕೆ ಉಂಟಾದ ಅನಾನುಕೂಲತೆಗಾಗಿ 25,000 ರೂ. ಮತ್ತು ನ್ಯಾಯಾಲಯದ ಕಲಾಪಕ್ಕೆ ಸಂಬಂಧಿಸಿದಂತೆ ವೆಚ್ಚವನ್ನು ಭರಿಸಲು 5,000 ಪರಿಹಾರ ಹಣ ನೀಡುವಂತೆ ಇಲಾಖೆಗೆ ಆದೇಶಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net