

ಬೆಂಗಳೂರು: ರೈಲ್ವೆ ಟಿಕೆಟ್ ರದ್ದುಪಡಿಸುವ ಉದ್ದೇಶಕ್ಕೆ ಹೆಲ್ಪ್‌ಲೈನ್‌ಗೆ ಕರೆ ಮಾಡಿದ ಪ್ರಯಾಣಿಕನಿಗೆ ಸಹಾಯ ಮಾಡುವ ನೆಪದಲ್ಲಿ ಸೈಬರ್ ಕಳ್ಳರು 29 ಸಾವಿರ ರೂ. ದೋಚಿದ್ದಾರೆ.
ವಿವೇಕನಗರದ ನಿವಾಸಿ ವಿ.ಆರ್. ಮಂಜುನಾಥ್ ಮೋಸಕ್ಕೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೇ 16ರಂದು ರೈಲ್ವೆ ಟಿಕೆಟ್ ರದ್ದುಪಡಿಸುವ ಉದ್ದೇಶಕ್ಕೆ ಗೂಗಲ್‌ನಲ್ಲಿ ಹೆಲ್ಪ್‌ಲೈನ್ ಹುಡುಕಾಟ ನಡೆಸಿ ಅದರಲ್ಲಿ ಸಿಕ್ಕ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ, ಪಿಎನ್‌ಆರ್ ನಂಬರ್ ಪಡೆದು ಮತ್ತೊಂದು ಮೊಬೈಲ್ ನಂಬರ್ ಕೊಟ್ಟು ಇದಕ್ಕೆ ಕರೆ ಮಾಡುವಂತೆ ಸಲಹೆ ಕೊಟ್ಟಿದ್ದ. ಆ ಸಂಖ್ಯೆಗೆ ಕರೆ ಮಾಡಿದಾಗ ನಿಮ್ಮ ಹಣವನ್ನು ವಾಪಸ್ ಕಳುಹಿಸುತ್ತವೆ ಎಂದು ಹೇಳಿ ವಾಟ್ಸ್‌ಆ್ಯಪ್‌ನಲ್ಲಿ ಲಿಂಕ್ ಕಳುಹಿಸಿ ಅದರಲ್ಲಿ ಮಾಹಿತಿ ತುಂಬುವಂತೆ ಹೇಳಿದ್ದಾರೆ. ಲಿಂಕ್ ಮೇಲೆ ಕ್ಲಿಕ್ ಮಾಡಿದ ಮಂಜುನಾಥ್, ಅದರಲ್ಲಿ ಕೇಳಿದ ಬ್ಯಾಂಕ್ ಖಾತೆ ವಿವರ ತುಂಬಿದಾಗ 9,915 ರೂ. ಕಡಿತವಾಗಿದೆ.
ಗಾಬರಿಗೊಂಡ ಮಂಜುನಾಥ್, ಕರೆ ಮಾಡಿ ಪ್ರಶ್ನಿಸಿದಾಗ ತಪ್ಪಾಗಿ ಹಣ ಕಡಿತವಾಗಿ ಆ ಹಣವೂ ವಾಪಸ್ ಬರಲಿದೆ. ಅದಕ್ಕಾಗಿ ಎಟಿಎಂ ಕಾರ್ಡ್ ಮಾಹಿತಿ ಭರ್ತಿ ಮಾಡುವಂತೆ ದಾರಿ ತಪ್ಪಿಸಿದ್ದಾರೆ. ಅದರಂತೆ ಡೆಬಿಟ್ ಕಾರ್ಡ್ ನಂಬರ್ ತುಂಬಿದಾಗ ಹಂತ ಹಂತವಾಗಿ 29,745 ರೂ. ಕಡಿತವಾಗಿತ್ತು. ಮತ್ತೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ, ಮೊಬೈಲ್ ಆ್ ಆಗಿತ್ತು. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.