

ರಾಯಚೂರು: ( Raichur Couple ) ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯ ಬಳಿ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಪತ್ನಿಯೇ ಗಂಡನನ್ನು ನದಿಗೆ ನೂಕಿದ ಘಟನೆ ರಾಯಚೂರಿನ ಗುರ್ಜಾಪುರದಲ್ಲಿ ವರದಿಯಾಗಿತ್ತು. ಈ ಸುದ್ದಿಯಾಗಿರುವ ಬೆನ್ನಲ್ಲೇ ಇದೀಗ ದಂಪತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗುತ್ತಿದೆ.
ಸೇತುವೆಯಿಂದ ನದಿಗೆ ನೂಕಿದ ಪತ್ನಿ, ಗಂಡನ ಸಹಾಯಕ್ಕೆ ಮುಂದಾಗಿಲ್ಲ. ಘಟನೆ ಅರಿತ ಸ್ಥಳೀಯರು ಕೂಡಲೇ ನದಿಗೆ ಜಿಗಿದು, ಬಡಪಾಯಿ ಗಂಡನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ತಾಲೂಕಿನ ಗುರ್ಜಾಪುರ ಬಳಿಯ ಸೇತುವೆ ಹತ್ತಿರ ಸಂಭವಿಸಿದೆ. ಜೋಡಿಯನ್ನು ನವದಂಪತಿ ಎನ್ನಲಾಗಿದ್ದು, ಸೇತುವೆಯಿಂದ ಪತ್ನಿಯೇ ನನ್ನನ್ನು ಉದ್ದೇಶಪೂರ್ವಕವಾಗಿ ನೂಕಿದಳು ಎಂದು ವ್ಯಕ್ತಿ ಆರೋಪಿಸಿದ್ದಾನೆ. ಗಂಡ ನೀರಿಗೆ ಬಿದ್ದು ಸಹಾಯಕ್ಕೆ ಕಿರುಚಾಡುತ್ತಿದ್ದರೆ, ಸೇತುವೆ ಮೇಲೆ ನಿಂತಿದ್ದ ಪತ್ನಿ ಮಾತ್ರ ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ನಿಂತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
ಈ ಘಟನೆ ನಂತರ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಪತ್ನಿಯಿಂದ ವಿಚ್ಛೇದನ ಪಡೆಯಲು ಪತಿ ತಾತಪ್ಪ ಮುಂದಾಗಿದ್ದಾನೆ. ಪತ್ನಿ ಗದ್ದೆಮ್ಮ ಸಹ ಸ್ವಯಂ ವಿವಾಹ ವಿಚ್ಛೇದನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾಳೆ ಎನ್ನಲಾಗಿದೆ. ಕುಟುಂಬದ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಕುಟುಂಬಸ್ಥರು ಬಾಂಡ್ ಬರೆಯಿಸಿಕೊಂಡಿದ್ದಾರೆ. ಘಟನೆ ಬಳಿಕ ಇಬ್ಬರು ಒಟ್ಟಿಗೆ ಇರುವುದು ಬೇಡ ಅಂತ ನಿರ್ಧರಿಸಿದ್ದಾರೆ.
ಹಳೆಯ ಸಂಬಂಧದಲ್ಲೇ ಮದುವೆ ಮಾಡಿದ್ದರೂ ಸಂಸಾರ ಸರಿಯಿರಲಿಲ್ಲ ಪತಿಯನ್ನೇ ಕೊಲೆ ಮಾಡಲು ಯತ್ನಿಸಿದ್ದಾಳೆ ಅಂತ ತಾತಪ್ಪನ ಸಹೋದರರು ಆರೋಪಿಸಿದ್ದಾರೆ.
ಮದುವೆಯಾಗಿ ಕೆಲವೇ ದಿನಕ್ಕೆ ಸಂಸಾರ ಕೆಟ್ಟಿದ್ದರೂ ನಮ್ಮ ತಮ್ಮ ಹೇಳಿಕೊಂಡಿರಲಿಲ್ಲ. ನದಿಗೆ ತಳ್ಳಿದ ಬಳಿಕ ಗಂಡನಿಗೆ ಚಪ್ಪಿಲಿ ತೋರಿಸಿದ್ದಾಳೆ. ಕೂಡಲೇ ತನ್ನ ಚಿಕ್ಕಮ್ಮಳಿಗೆ ಫೋನ್ ಮಾಡಿ ನದಿಗೆ ಬಿದ್ದಿದ್ದಾನೆ ಅಂತ ಹೇಳಿದ್ದಾಳೆ. ನಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲ್ಲಾ, ಕೋರ್ಟ್‌ನಲ್ಲಿ ವಿಚ್ಛೇದನ ಪಡೆಯುತ್ತೇವೆ ಎಂದು ತಾತಪ್ಪನ ಸಹೋದರರು ಹೇಳಿದ್ದಾರೆ.