

ಹರಿಯಾಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಯಾಣದ ಸೋನಿಪತ್ಗೆ ದಿಢೀರ್ ಭೇಟಿ ನೀಡಿದ್ದು, ರೈತರ ಜೊತೆ ಕೆಲ ಸಮಯ ಕಳೆದಿದ್ದಾರೆ. ದೆಹಲಿಯಿಂದ ಹಿಮಾಚಲಪ್ರದೇಶದಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ಹರಿಯಾಣದ ಸೋನಿಪತ್ನಲ್ಲಿ ರಾಹುಲ್ ರೈತರನ್ನು ಭೇಟಿ ಮಾಡಿದ್ಧಾರೆ.
ರೈತರನ್ನು ಭೇಟಿ ಮಾಡಿದ ವೇಳೆ ರಾಹುಲ್ ಗದ್ದೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿ, ಬಿತ್ತನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ನೆರದಿದ್ದ ರೈತರೊಂದಿಗೆ ರಾಹುಲ್ ಗಾಂಧಿ ಕೆಲಕಾಲ ಸಂವಾದ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಜಗ್ಬೀರ್ ಸಿಂಗ್ ಸಮಾಜದ ಎಲ್ಲಾ ವರ್ಗದವರ ಕಷ್ಟಗಳನ್ನು ಅರಿಯಲು ಪ್ರಯತ್ನಿಸುತ್ತಿರುವ ನಾಯಕ ಎಂದರೆ ಅದು ರಾಹುಲ್ ಗಾಂಧಿ. ಕಾರ್ಯಕ್ರಮದ ನಿಮಿತ್ತ ಹಿಮಾಚಲಪ್ರದೇಶಕ್ಕೆ ತೆರಳುವ ವೇಳೆ ಮಾರ್ಗ ಮಧ್ಯ ಅವರು ದಿಢೀರ್ ಎಂದು ಸೋನಿಪತ್ಗೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಹರಿಯಾಣ ಕೃಷಿ ಸಚಿವ ಜೆ.ಪಿ. ದಲಾಲ್ ಕಾಂಗ್ರೆಸ್ನ ಯುವರಾಜ ಬಿಸಿಲಿನಲ್ಲಿ ರೈತರೊಂದಿಗೆ ಕೆಲಸ ಮಾಡುವ ಮೂಲಕ ಅವರ ಶ್ರಮವನ್ನು ಅರ್ಥ ಮಾಡಿಕೊಳ್ಳಬಹುದು. ಅದು ಬಿಟ್ಟು ಈ ರೀತಿ ಫೋಟೋಶೂಟ್ಗಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.