VIDEO| ವ್ಯಕ್ತಿಯನ್ನು ಥಳಿಸಿ ಬಲವಂತವಾಗಿ ಕಾಲು ನೆಕ್ಕಿಸಿದ ಕಿಡಿಗೇಡಿ

MP Viral Video
Published on

ಭೋಪಾಲ್​: ಮಧ್ಯಪ್ರದೇಶದಲ್ಲಿ ಇತ್ತೀಚಿಗೆ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿ ಮೇಲೆ ಬಿಜೆಪಿ ನಾಯಕನೋರ್ವ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಘಟನೆಯೊಂದು ಮುನ್ನೆಲೆಗೆ ಬಂದಿದೆ.

ಇದೀಗ ಘಟನೆಯೊಂದರಲ್ಲಿ ವ್ಯಕ್ತಿಯೋರ್ವನಿಗೆ ಯುವಕನೋರ್ವ ತನ್ನ ಕಾಲನ್ನು ಬಲವಂತವಾಗಿ ನೆಕ್ಕಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆಯೂ ಮಧ್ಯಪ್ರದೇಶದ ಗ್ವಾಲಿಯಾರ್​ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವನನ್ನು ಯುವಕ ಥಳಿಸುತ್ತಿದ್ದು, ಮೊದಲಿಗೆ ಕಾಲನ್ನು ನೆಕ್ಕುವಂರತೆ ಹೇಳುತ್ತಾನೆ. ಇದಕ್ಕೆ ಆತ ಒಪ್ಪದಿದ್ದಾಗ ಬಲವಂತವಾಗಿ ಆತನಿಂದ ಕಾಲನ್ನು ನೆಕ್ಕಿಸುತ್ತಿರುವುದು ಕಂಡು ಬರುತ್ತದೆ. ಇದಲ್ಲದೆ ಸಂತ್ರಸ್ತನಿಗೆ ಆರೋಪಿ ಚಪ್ಪಲಿಯಿಂದ ಅಮಾನುಷವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ದರ್ಬಾ ಪೊಲೀಸ್​ ಠಾಣೆಯ ಅಧಿಕಾರಿ ವಿವೇಕ್​ ಕುಮಾರ್​ ಶರ್ಮಾ ಘಟನೆಯೂ ಶುಕ್ರವಾರ ಸಂಜೆ ನಡೆದಿದ್ದು, ವಿಡಿಯೋ ವೈರಲ್​ ಆದ ಬೆನ್ನಲ್ಲೇ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ವಿಡಿಯೋವನ್ನು ಫೋರೆನ್ಸಿಕ್​ ಇಲಾಖೆಗೆ ಕಳುಹಿಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಸಂತ್ರಸ್ತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ಭಾರತ ದಂಡ ಸಂಹಿತೆ(IPC Section)ಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ದರ್ಬಾ ಪೊಲೀಸ್​ ಠಾಣೆಯ ಅಧಿಕಾರಿ ವಿವೇಕ್​ ಕುಮಾರ್​ ಶರ್ಮಾ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net