

ನವದೆಹಲಿ: ದೇಶದಲ್ಲಿ ಕರೊನಾ ಅಬ್ಬರ ಕೊಂಚ ತಗ್ಗುತ್ತಿದೆ ಎನ್ನುವಷ್ಟರಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗಲಾರಂಭಿಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಬ್ಲ್ಯಾಕ್ ಫಂಗಸ್ ಮಹಾಮಾರಿಯ ಬಗ್ಗೆ ಕೇಂದ್ರ ಸರ್ಕಾರವು ಮೂರು ವಿಚಾರಗಳಲ್ಲಿ ಸ್ಪಷ್ಟನೆ ನೀಡಬೇಕು. 1) ಆಂಫೊಟೆರಿಸಿನ್ ಬಿ ಔಷಧ ಕೊರತೆಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ? 2) ಔಷಧವನ್ನು ರೋಗಿಗಳಲ್ಲಿ ಯಾವ ವಿಧಾನದಲ್ಲಿ ನೀಡಲಾಗುತ್ತಿದೆ? 3) ಚಿಕಿತ್ಸೆ ನೀಡಬೇಕಾದ ಸಮಯದಲ್ಲಿ ಮೋದಿ ಸರ್ಕಾರ ಜನರಿಗೆ ಇನ್ನಷ್ಟು ತೊಂದರೆಗೊಳಗಾಗುವಂತೆ ಏಕಾಗಿ ಮಾಡುತ್ತಿದೆ?" ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೆ ದೇಶದಲ್ಲಿ ಈಗಾಗಲೇ ಬ್ಲ್ಯಾಕ್, ವೈಟ್, ಯೆಲ್ಲೋ, ಕ್ರೀಂ ಬಣ್ಣದ ಫಂಗಸ್ಗಳು ಕಾಣಿಸಿಕೊಂಡಿವೆ. ಪ್ರತಿದಿನ ದೇಶದಲ್ಲಿನ ಫಂಗಸ್ ಪ್ರಕರಣಗಳು ಏರುತ್ತಲೇ ಸಾಗಿವೆ. ಕರ್ನಾಟಕ ರಾಜ್ಯವೊಂದರಲ್ಲೇ 1250 ಮಂದಿ ಬ್ಲ್ಯಾಕ್ ಫಂಗಸ್ಗೆ ತುತ್ತಾಗಿದ್ದು 39 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ. (ಏಜೆನ್ಸೀಸ್)