

ಬೆಂಗಳೂರು: ಬಿಜೆಪಿಯ ಸಿದ್ಧಾಂತಗಳು ಭಾರತದ ಪರಿಕಲ್ಪನೆ ಮೇಲೆ ದಾಳಿ ಮಾಡುತ್ತಿದೆ. ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರೆ, ನಿಮಗೆ ಸಾಧ್ಯವಾದರೆ ನಮ್ಮನ್ನು ತಡೆಯಿರಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎನ್ಡಿಎಗೆ ನೇರ ಸವಾಲು ಹಾಕಿದ್ದಾರೆ.
ವಿಪಕ್ಷಗಳ ಮಹಾಘಟಬಂಧನ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು. ರಾಹುಲ್ ಗಾಂಧಿ ಮಾತನಾಡಿ, ಇಲ್ಲಿ ನಮ್ಮ ಎರಡನೇ ಸಭೆ ನಡೆದಿದ್ದು, ಉತ್ತಮ ಚರ್ಚೆ ಆಗಿದೆ. ನಮ್ಮ ಹೋರಾಟ ಬಿಜೆಪಿ ವಿಚಾರಧಾರೆ, ಅವರ ಚಿಂತನೆ ವಿರುದ್ಧ. ಅವರು ದೇಶದ ಮೇಲೆ ಆಕ್ರಮಣ ಮಾಡಿ, ನಿರುದ್ಯೋಗ ಹರಡುತ್ತಿದ್ದು, ದೇಶದ ಸಂಪೂರ್ಣ ಸಂಪತ್ತು ಕೆಲವು ಉದ್ಯಮಿಗಳ ವಶಕ್ಕೆ ಸೇರುತ್ತಿದೆ ಎಂದು ಆರೋಪಿಸಿದರು.
ಇದು ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವಣ ಹೋರಾಟವಲ್ಲ. ಇದು ದೇಶದ ಧ್ವನಿಯ ಪರವಾದ ಹೋರಾಟ. ಇದೇ ಕಾರಣಕ್ಕೆ ಈ ಮೈತ್ರಿಗೆ ‘ಇಂಡಿಯಾ’ ಎಂದು ಹೆಸರಿಡಲಾಗಿದೆ. ಈ ಹೋರಾಟ ಎನ್ಡಿಎ ಹಾಗೂ ಇಂಡಿಯಾ ವಿರುದ್ಧ, ಇಂಡಿಯಾ ಹಾಗೂ ಮೋದಿ ವಿರುದ್ಧ ಎಂದರು. ಯಾರೇ ಇಂಡಿಯಾ ವಿರುದ್ಧ ನಿಂತರು ಗೆಲವು ಯಾರಿಗೆ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದಿನ ಸಭೆ ಮಹಾರಾಷ್ಟ್ರದಲ್ಲಿ ನಡೆಯಲಿದ್ದು, ಕಾರ್ಯ ಯೋಜನೆ ಸಿದ್ಧಪಡಿಸಿ ನಾವು ಒಂದಾಗಿ ನಮ್ಮ ವಿಚಾರಧಾರೆಗಳನ್ನು ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು. ಇದು ರಾಜಕೀಯ ಪಕ್ಷಗಳ ಹೋರಾಟವಲ್ಲ. ಇದು ಇಂಡಿಯಾದ ಪರಿಕಲ್ಪನೆ ರಕ್ಷಣೆಯ ಹೋರಾಟವಾಗಿದ್ದು, ನಾವು ಪ್ರಜಾಪ್ರಭುತ್ವ, ಸಂವಿಧಾನ, ಜನರ ಧ್ವನಿಯ ರಕ್ಷಣೆಗೆ ಹೋರಾಟ ಮಾಡುತ್ತಿದ್ದು, ಈ ಕಾರಣಕ್ಕೆ ನಾವು ನಮ್ಮ ಮೈತ್ರಿಯನ್ನು ‘ಇಂಡಿಯಾ’ ಎಂದು ತೀರ್ವನಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ದೀದಿ ಸವಾಲು: ಯುವಕರು, ರೈತರು, ವಿದ್ಯಾರ್ಥಿಗಳು, ದಲಿತರು ನಮ್ಮ ಪರವಾಗಿದ್ದಾರೆ. ದೇಶದ ಪರವಾಗಿ ನಾವು ಇದ್ದೇವೆ. ನಮ್ಮ ಸವಾಲುಗಳು, ಹೋರಾಟ, ಪ್ರಚಾರ ಎಲ್ಲವನ್ನು ‘ಇಂಡಿಯಾ’ ಅಡಿ ಮಾಡಲಾಗುವುದು. ನಿಮಗೆ ಸಾಧ್ಯವಾದರೆ ನಮ್ಮನ್ನು ತಡೆಯಿರಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎನ್ಡಿಎಗೆ ನೇರ ಸವಾಲು ಹಾಕಿದರು. ದಲಿತರು, ಅಲ್ಪಸಂಖ್ಯಾತರು, ಹಿಂದು, ಮುಸಲ್ಮಾನ, ಸಿಖ್ ಸೇರಿ ಎಲ್ಲರೂ ಅಪಾಯದಲ್ಲಿದ್ದಾರೆ. ಅರುಣಾಚಲ ಪ್ರದೇಶ, ಮಣಿಪುರ, ಉತ್ತರ ಪ್ರದೇಶ, ದೆಹಲಿ, ಬಂಗಾಳ, ಬಿಹಾರ, ಮಹಾರಾಷ್ಟ್ರ ಎಲ್ಲ ಕಡೆ ಅಪಾಯವಿದೆ ಎಂದರು.
ಜನರಿಂದ ಆಯ್ಕೆಯಾದ ಸರ್ಕಾರ ಕೆಡವುದು, ಮಾರಾಟ ಮಾಡುವುದು ಈ ಸರ್ಕಾರದ ಕೆಲಸವಾಗಿದೆ. ಹೀಗಾಗಿ ಇಂದು ನಾವೆಲ್ಲರೂ ಸೇರಿ ಇಂಡಿಯಾ ಎಂಬ ಮೈತ್ರಿಕೂಟ ಸ್ಥಾಪಿಸಿದ್ದೇವೆ. ಬಿಜೆಪಿ ಹಾಗೂ ಎನ್ಡಿಎಗೆ ಇಂಡಿಯಾ ಸವಾಲನ್ನು ಎದುರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇಂದಿನಿಂದ ನಿಜವಾದ ಸವಾಲು ಆರಂಭವಾಗಿದೆ. ನಮ್ಮ ಮೈತ್ರಿ 26 ಪಕ್ಷಗಳ ನಡುವೆ ನಡೆದಿದೆ. ಮೊದಲು ಯುಪಿಎ ಹೆಸರಿನಲ್ಲಿ ಇತ್ತು. ಈಗ ಹೊಸ ಹೆಸರಿನಿಂದ ಕರೆಯಲ್ಪಡಲಿದೆ ಎಂದರು. ನಮ್ಮ ಯುದ್ಧದಲ್ಲಿ ಇಂಡಿಯಾ ಗೆಲ್ಲಲಿದೆ, ಬಿಜೆಪಿ ಸೋಲಲಿದೆ. ಈ ಮೈತ್ರಿಗೆ ಒಪ್ಪಿ ಬಂದಿರುವ ಎಲ್ಲ ಪಕ್ಷಗಳಿಗೆ ಧನ್ಯವಾದಗಳು. ನಮ್ಮ ಮುಂದಿನ ಸಭೆ ಮುಂಬೈನಲ್ಲಿ ನಡೆಯಲಿದೆ ಎಂದರು.
ಸಭೆ ಆರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಒಕ್ಕೂಟ ರಚನೆಯ ಹಿಂದೆ ಕಾಂಗ್ರೆಸ್ಗೆ ಅಧಿಕಾರ ಪಡೆಯುವ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಾನೂನು ದುರುಪಯೋಗ ಮಾಡಿಕೊಂಡು ನಮ್ಮ ಸಂಸದರನ್ನೇ ಅಮಾನತು ಮಾಡಿದ್ದಾರೆ. ಶಾಸಕರನ್ನು ಹಣ, ತನಿಖಾ ಸಂಸ್ಥೆಗಳ ಮೂಲಕ ಬೆದರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಜತೆಗೂಡಿ ಚರ್ಚೆ ಮಾಡಬೇಕಿದೆ ಎಂದು ಪಕ್ಷಗಳಿಗೆ ಕರೆ ನೀಡಿದರು. ಹಲವು ರಾಜ್ಯಗಳಲ್ಲಿ ನಮ್ಮ ಸರ್ಕಾರವಿದೆ. ಈ ರಾಜ್ಯಗಳಲ್ಲಿ ನಾವೆಲ್ಲಾ ಒಟ್ಟಾಗಿ ತಂತ್ರಗಾರಿಕೆ ಮಾಡಬೇಕು. ಆಗ ಬಿಜೆಪಿಗೆ ಸಹಜವಾಗಿಯೇ ಹಿನ್ನಡೆಯಾಗಲಿದೆ ಎಂದು ಪ್ರಸ್ತಾಪಿಸಿದರು.
ಯುಪಿಎ ಹೆಸರು ಬದಲಾವಣೆ ಮಾಡಲು ತೀರ್ವನಿಸಿದ ಬಳಿಕ ನಾಲ್ಕು ಹೆಸರು ಚರ್ಚೆಗೆ ಬಂದಿತ್ತು. ಪಿಡಿಎ, ಎನ್ಪಿಎ ಪ್ರಮುಖವಾಗಿ ಚರ್ಚೆಯಾಗಿತ್ತು. ಯಾವುದೇ ಹೆಸರು ಪರಿಗಣಿಸಿದರೂ ಸೆಕ್ಯುಲರ್ ಪದ ಬಳಸಬೇಕೆಂಬ ಬಗ್ಗೆ ಕಾಂಗ್ರೆಸ್ ನಾಯಕರು ಒಲವು ವ್ಯಕ್ತಪಡಿಸಿದ್ದರು. ಆದರೆ, ಜಾತ್ಯತೀತ ಪದ ಬಳಸಿದರೆ ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಬಹುದು ಎಂದು ಚರ್ಚೆಯಾಗಿದೆ. ಅಂತಿಮವಾಗಿ ಇಂಡಿಯಾ ಹೆಸರು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿಯು, ಆರ್ಜೆಡಿ, ಜೆಎಮ್ವ್, ಎನ್ಸಿಪಿ, ಶಿವಸೇನಾ (ಉದ್ಧವ್), ಎಸ್ಪಿ, ರಾಷ್ಟ್ರೀಯ ಲೋಕದಳ, ಅಪ್ನಾದಳ್, ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಪರೆನ್ಸ್, ಪಿಡಿಪಿ, ಸಿಪಿಐ, ಸಿಪಿಐ (ಎಂ), ಸಿಪಿಐ (ಎಂ ಎಲ್), ರೆವೆಲ್ಯುಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಎಂಡಿಎಂಕೆ, ವಿಡುದಲೈ ಚಿರುತೈಗಳ್ ಕಚ್ಚಿ, ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ, ಮಣಿತನೆಯ ಮಕ್ಕಳ್ ಕಚ್ಚಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್(ಮಣಿ), ಕೇರಳ ಕಾಂಗ್ರೆಸ್ (ಜೊಸೆಫ್).
ಇಪ್ಪತ್ತಾರು ಪಕ್ಷಗಳ ನಾಯಕರು, ಐದು ರಾಜ್ಯಗಳ ಮುಖ್ಯಮಂತ್ರಿಗಳು, ನಾಲ್ವರು ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರು ಸೇರಿ ಘಟಾನುಘಟಿ ನಾಯಕರಿಗೆ ಆತಿಥ್ಯ ನೀಡಿದ್ದು ಪ್ರದೇಶ ಕಾಂಗ್ರೆಸ್ ಸಮಿತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೋಡಿಯು ಅತಿಥಿಗಳನ್ನು ಸತ್ಕರಿಸಿ ಗೌರವಾದರಗಳೊಂದಿಗೆ ಬೀಳ್ಕೊಟ್ಟಿತು. ಬಹುತೇಕ ನಾಯಕರು ಆತಿಥ್ಯವನ್ನು ಸ್ಮರಿಸಿದರು.
ಸಭೆ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ 26 ಪಕ್ಷಗಳ ನಾಯಕರೂ ಹಾಜರಿರಬೇಕಿತ್ತು. ಆದರೆ ಸಭೆ ಬಳಿಕ ವಿಮಾನದ ಸಮಯದ ನೆಪ ಹೇಳಿ ತಮಿಳುನಾಡು ಸಿಎಂ ಸ್ಟಾಲಿನ್, ಬಿಹಾರ ಸಿಎಂ ನಿತಿಶ್ಕುಮಾರ್, ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಸುದ್ದಿಗೋಷ್ಠಿಯಿಂದ ದೂರ ಉಳಿದಿದ್ದರು. ಇನ್ನೊಂದು ಸಂಗತಿ ಎಂದರೆ ಒಗ್ಗಟ್ಟಿನ ಪ್ರದರ್ಶನ ರೂಪದಲ್ಲಿ ಎಲ್ಲರೂ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಫೋಟೋಗೆ ಫೋಸ್ ನೀಡುವ ಉಸಾಬರಿಗೆ ಯಾರೂ ಆಸಕ್ತಿ ತೋರಿಸಲಿಲ್ಲ.
ಒಂಬತ್ತು ವರ್ಷಗಳ ಹಿಂದೆ ದೇಶದ ಜನ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯನ್ನು ಬಹುಮತಗಳಿಂದ ಗೆಲ್ಲಿಸಿದ್ದರು. ದೇಶಕ್ಕಾಗಿ ಕೆಲಸ ಮಾಡಲು ಅವರ ಬಳಿ ಅವಕಾಶಗಳಿದ್ದವು. ಆದರೆ ಅವರು ಯಾವುದೇ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿಲ್ಲ. ಎಲ್ಲ ಕ್ಷೇತ್ರಗಳನ್ನು ಬರ್ಬಾದ್ ಮಾಡುವಲ್ಲಿ ಯಾವುದೇ ಅವಕಾಶಗಳನ್ನು ಬಿಟ್ಟಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟೀಕಿಸಿದ್ದಾರೆ.
ಮುಂದೆನಾಗಲಿದೆ ಎಂದು ಭಯಭೀತರಾಗಿರುವ ಜನರಲ್ಲಿ ವಿಶ್ವಾಸ ಮೂಡಿಸಲು ನಾವಿದ್ದೇವೆ ಎಂದು ಹೇಳಲು ನಾವು ಇಲ್ಲಿ ಸೇರಿದ್ದೇವೆ. ಓರ್ವ ವ್ಯಕ್ತಿ ಅಥವಾ ಪಕ್ಷ ಇಡೀ ದೇಶವಾಗಲು ಸಾಧ್ಯವಿಲ್ಲ. ನಾವೆಲ್ಲರೂ ಸೇರಿ ದೇಶವನ್ನು ಸುರಕ್ಷಿತವಾಗಿಡುತ್ತೇವೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದರು.
ಹೊಸ ಹೆಸರಿನ ಮೂಲಕ ಪುನರ್ ಸಂಘಟನೆಗೆ ಕೈಹಾಕಿರುವ ವಿಪಕ್ಷಗಳು, ಯಾವ ದಿಕ್ಕಿನಲ್ಲಿ ಸಾಗುತ್ತವೆ, ಅವುಗಳ ಮುಂದಿರುವ ಸವಾಲುಗಳಿಗೆ ಪರಿಹಾರ ಏನಿದೆ? ಎಂಬ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಗೊಳಿಸುವ ಪ್ರಯತ್ನ ನಡೆಸಿದರು.
1. ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಹೇಗೆ ತೀರ್ಮಾನ ಮಾಡುತ್ತೀರಿ?
- ಇದು ದೊಡ್ಡ ವಿಚಾರವಲ್ಲ. ನಮ್ಮ ಸಮನ್ವಯ ಸಮಿತಿ ತೀರ್ಮಾನ ಮಾಡಲಿದೆ. ಎಲ್ಲ ನಾಯಕರು, ಸಮಿತಿ ಸೇರಿ ತೀರ್ಮಾನ ಮಾಡಲಿದೆ.
2. ಈ ‘ಇಂಡಿಯಾ’ವನ್ನು ಮುನ್ನಡೆಸುವವರು ಯಾರು?
- ನಾವು 11 ಸದಸ್ಯರು ಸಮನ್ವಯ ಸಮಿತಿ ರಚಿಸುತ್ತಿದ್ದು, ಆ ಸಮಿತಿ ನಿರ್ಧರಿಸಲಿದೆ. ಈ ಸಮಿತಿ ಸದಸ್ಯರನ್ನು ಮುಂಬೈ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು.
3. ಯುಸಿಸಿ ವಿಚಾರವಾಗಿ ಎಲ್ಲ ಪಕ್ಷಗಳು ಒಮ್ಮತಕ್ಕೆ ಬಂದಿವೆಯೇ?
- ಯುಸಿಸಿ ಮಸೂದೆ ನನಗೆ ಸಿಕ್ಕಿಲ್ಲ. ನಿಮ್ಮ ಬಳಿ ಇದ್ದರೆ ಅದನ್ನು ನೀಡಿ. ಮಸೂದೆ ಇಲ್ಲದೆ ಅದರ ಬಗ್ಗೆ ಚರ್ಚೆ ಮಾಡಲು ಹೇಗ ಸಾಧ್ಯ? ನಾವು ಮಣಿಪುರ, ನಿರುದ್ಯೋಗ, ಹಣದುಬ್ಬರ ಸೇರಿ ಇತರ ವಿಚಾರಗಳ ಬಗ್ಗೆ ಹೇಗೆ ಹೋರಾಟ ಮಾಡಬೇಕು. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆ ವಿಚಾರವಾಗಿ ವಿಸ್ತಾರವಾಗಿ ಚರ್ಚೆ ಮಾಡಲಾಗಿದೆ.
4. ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಹೇಗೆ ಒಗ್ಗಟ್ಟಾಗಿ ಕೊಂಡೊಯ್ಯುತ್ತೀರಿ?
- ಎನ್ಸಿಪಿ ನಾಯಕ ಶರದ್ ಪವಾರ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಸೇರಿ ಪ್ರಾದೇಶಿಕ ಪಕ್ಷಗಳ ನಾಯಕರು ಇಲ್ಲಿದ್ದಾರೆ. ಶಾಸಕರು ಪಕ್ಷ ಬಿಟ್ಟು ಹೋಗಿರಬಹುದು. ಆದರೆ ಜನ ಈ ಪ್ರಮುಖ ನಾಯಕರ ಬೆನ್ನಿಗೆ ನಿಲ್ಲಲಿದ್ದಾರೆ. ನಾವು ಒಟ್ಟಾಗಿ ಇರುತ್ತೇವೆ. ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
5. ಕಾಮನ್ ಮಿನಿಮಮ್ ಪ್ರೋಗ್ರಾಮ್ ಮಾಡಿಕೊಳ್ಳುತ್ತೀರಾ?
- ಒಟ್ಟಿಗೆ ಹೋರಾಟ ಮಾಡಲು ತೀರ್ವನಿಸಿದ್ದೇವೆ. ಅದೇ ಉದ್ದೇಶ.
ಬೆಂಗಳೂರು: ವಿರೋಧ ಪಕ್ಷಗಳ ಮಹಾಘಟಬಂಧನ ಸಭೆಗೆ ಆಗಮಿಸಿದ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದನ್ನು ಬಿಜೆಪಿ, ಜೆಡಿಎಸ್ ಟೀಕಿಸಿದ್ದರೆ, ಶಿಷ್ಟಾಚಾರ ಪಾಲನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದ್ದರೆ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಐಎಎಸ್ ಅಧಿಕಾರಿಗಳನ್ನು ಜೀತಕ್ಕಿಡಲಾಗಿದೆ ಎಂದು ಕಿಡಿಕಾರಿದ್ದರು. ಬೆಂಗಳೂರಿಗೆ ಆಗಮಿಸಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಲಾಗಿತ್ತು. ಶಿಷ್ಟಾಚಾರದ ಪ್ರಕಾರ ಅತಿಥಿ ಗಣ್ಯರ ಸ್ವಾಗತಕ್ಕೆ ಮಾತ್ರ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತೇ ಹೊರತು ರಾಜಕೀಯ ಕಾರ್ಯಕ್ರಮಕ್ಕೆ ಬಳಸಿಕೊಂಡಿರಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸಾಮೂಹಿಕ ಸಂಕಲ್ಪ: ಒಕ್ಕೂಟದ ಉದ್ದೇಶ ಹಾಗೂ ಗುರಿಗೆ ಸಂಬಂಧಿಸಿ ಸಾಮೂಹಿಕ ಸಂಕಲ್ಪ ಮಾಡಿರುವ ಪಕ್ಷಗಳು ಸಹಿ ಹಾಕಿವೆ. ನಾವು, ಭಾರತದ 26 ಪ್ರಗತಿಪರ ಪಕ್ಷಗಳ ನಾಯಕರು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಭಾರತದ ಕಲ್ಪನೆಯನ್ನು ರಕ್ಷಿಸಲು ನಮ್ಮ ದೃಢ ಸಂಕಲ್ಪವನ್ನು ವ್ಯಕ್ತಪಡಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖವಿದೆ.
ನಮ್ಮ ಗಣರಾಜ್ಯದ ಚಾರಿತ್ರ್ಯದ ಮೇಲೆ ಬಿಜೆಪಿಯವರು ವ್ಯವಸ್ಥಿತ ರೀತಿಯಲ್ಲಿ ಹಲ್ಲೆ ನಡೆಸುತ್ತಿದ್ದಾರೆ. ಸಂವಿಧಾನದ ಆಧಾರ ಸ್ತಂಭಗಳಾದ ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸಾರ್ವಭೌಮತ್ವ, ಸಾಮಾಜಿಕ ನ್ಯಾಯ ಮತ್ತು ಫೆಡರಲಿಸಂನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಮಣಿಪುರ ದುರಂತದ ಬಗ್ಗೆ ನಾವು ನಮ್ಮ ತೀವ್ರ ಕಳವಳವನ್ನು ವ್ಯಕ್ತಪಡಿಸುತ್ತೇವೆ. ಪ್ರಧಾನಿಯವರ ಮೌನ ಆಘಾತಕಾರಿಯಾಗಿದೆ. ಮಣಿಪುರವನ್ನು ಶಾಂತಿ ಮತ್ತು ಸೌಹಾರ್ದತೆಯ ಹಾದಿಗೆ ಮರಳಿ ತರುವ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಲಾಗಿದೆ. ಸಂವಿಧಾನದ ಮೇಲೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳ ಮೇಲಿನ ನಿರಂತರ ದಾಳಿಯನ್ನು ಎದುರಿಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಲಾಗಿದೆ.
ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಎಲ್ಜಿಗಳ ಪಾತ್ರವು ಎಲ್ಲಾ ಸಾಂವಿಧಾನಿಕ ಮಾನದಂಡಗಳನ್ನು ಮೀರಿದೆ. ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಬಿಜೆಪಿ ಸರ್ಕಾರವು ಸಂಸ್ಥೆಗಳ ದುರುಪಯೋಗ ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ. ಬಿಜೆಪಿಯೇತರ ರಾಜ್ಯಗಳ ಕಾನೂನುಬದ್ಧ ಅಗತ್ಯಗಳು, ಅವಶ್ಯಕತೆಗಳು ಮತ್ತು ಅರ್ಹತೆಗಳನ್ನು ಕೇಂದ್ರ ಸಕ್ರಿಯವಾಗಿ ನಿರಾಕರಿಸುತ್ತಿದೆ ಎಂದು ಅಸಮಾಧಾನ ಹೊರಹಾಕಲಾಗಿದೆ.
ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಆರ್ಥಿಕ ಬಿಕ್ಕಟ್ಟು, ನೋಟು ರದ್ಧತಿ ಬಗ್ಗೆ ಪ್ರಸ್ತಾಪವಾಗುವ ಜತೆಗೆ, ಪ್ರಧಾನಿಯವರು ದೇಶದ ಸಂಪತ್ತನ್ನು ತಮ್ಮ ಸ್ನೇಹಿತರಿಗೆ ಅಜಾಗರೂಕತೆಯಿಂದ ಮಾರಾಟ ಮಾಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಲಾಗಿದೆ.
ಅಲ್ಪಸಂಖ್ಯಾತರ ವಿರುದ್ಧ ನಿರ್ವಣವಾಗುತ್ತಿರುವ ದ್ವೇಷ ಮತ್ತು ಹಿಂಸೆಯನ್ನು ಹಿಮ್ಮೆಟ್ಟಿಸಲು ನಾವು ಒಟ್ಟಾಗಿ ಇರೋಣ. ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಕಾಶ್ಮೀರಿ ಪಂಡಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ನಿಲ್ಲಬೇಕಿದೆ ಎಂಬ ಒತ್ತಾಯಿಸಲಾಗಿದೆ.
ಲೋಕಸಭೆಗೆ ಒಟ್ಟಾಗಿ ಸ್ಪರ್ಧೆ, ದ್ವೇಷ ರಾಜಕಾರಣದ ವಿರುದ್ಧ ಸಾಮೂಹಿಕ ಹೋರಾಟ, ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆ ಕುರಿತು ಸಂಕಲ್ಪ ಪತ್ರದಲ್ಲಿದೆ.