

ನವದೆಹಲಿ: ಇತರೆ ಸಾಮಾಜಿಕ ಜಾಲತಾಣ ರೀತಿಯಲ್ಲೇ ವಿಡಿಯೋ ಡಿಸ್ಲೈಕ್ ಕೌಂಟ್ ಅನ್ನು ತೆಗೆದುಹಾಕಲು ಯೂಟ್ಯೂಬ್ ನಿರ್ಧಾರ ಮಾಡಿದೆ. ಹೊಸ ಯೂಟ್ಯೂಬ್ ಕ್ರಿಯೆಟರ್ಸ್ಗಳ ಮೇಲೆ ಡಿಸ್ಲೈಕ್ ದಾಳಿ ನಡೆಯುತ್ತಿರುವುದನ್ನು ಕಂಪನಿ ಗಮನಿಸಿದ್ದು, ಅದಕ್ಕೆ ಬ್ರೇಕ್ ಹಾಕಲು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಟ್ವೀಟ್ ಮೂಲಕ ಯೂಟ್ಯೂಬ್ ಕಂಪನಿ ಈ ನಿರ್ಧಾರವನ್ನು ಘೋಷಣೆ ಮಾಡಿದೆ. ಕ್ರಿಯೆಟರ್ಸ್ ಮೇಲೆ ಡಿಸ್ಲೈಕ್ ದಾಳಿಗಳು ನಡೆಯುತ್ತಿದ್ದು, ಕ್ರಿಯೆಟರ್ಸ್ ಮೇಲೆ ಪ್ರಭಾವ ಬೀರುವುದರಿಂದ ಅದನ್ನು ಕಡಿಮೆ ಮಾಡಲು ಡಿಸ್ಲೈಕ್ ಕೌಂಟ್ ತೆಗೆದುಹಾಕಲು ನಿರ್ಧರಿಸಲಾಗಿದೆ. ಸಾಕಷ್ಟು ಸಂಶೋಧನೆ ಹಾಗೂ ಪರೀಕ್ಷೆಯ ಬಳಿಕ ಈ ನಿರ್ಧಾರವನ್ನು ಪರಿಗಣಿಸಲಾಗಿದೆ ಎಂದು ಯೂಟ್ಯೂಬ್ ಟ್ವೀಟ್ನಲ್ಲಿ ತಿಳಿಸಿದೆ.
ಡಿಸ್ಲೈಕ್ ಬಟನ್ ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ. ಬದಲಾಗಿ ಡಿಸ್ಲೈಕ್ ಕೌಂಟ್ ಮಾತ್ರ ಸಾರ್ವಜನಿಕವಾಗಿ ಕಾಣದಂತೆ ಕಂಪನಿ ಮರೆಮಾಚಲಿದೆ. ಇಷ್ಟವಿಲ್ಲದವರು ಡಿಸ್ಲೈಕ್ಸ್ ಮಾಡಬಹುದು. ಆದರೆ, ಎಷ್ಟು ಡಿಸ್ಲೈಕ್ ಆಗಿದೆ ಎಂಬುದು ಇನ್ಮುಂದೆ ಕಾಣುವುದಿಲ್ಲ. ಆದರೆ, ಕ್ರಿಯೆಟರ್ಸ್ ಫೀಡ್ಬ್ಯಾಕ್ಗಾಗಿ ಡಿಸ್ಲೈಕ್ ಕೌಂಟ್ ಅವರಿಗೆ ಮಾತ್ರ ಕಾಣಲಿದೆ. ಸಾರ್ವಜನಿಕ ಅವಮಾನ ಮತ್ತು ಕಿರುಕುಳ ತಪ್ಪಿಸಲು ಇದು ಸಹಕಾರಿ ಆಗಲಿದೆ ಎಂದು ಯೂಟ್ಯೂಬ್ ಹೇಳಿದೆ.
ಯೂಟ್ಯೂಬ್ ಮಾತ್ರವಲ್ಲ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಕೂಡ ಡಿಸ್ಲೈಕ್ ಆಯ್ಕೆಯನ್ನು ಮರೆಮಾಚಿದೆ. ಇದರಿಂದ ಬಳಕೆದಾರರ ಮೇಲಿನ ಕಿರುಕುಳ ತಪ್ಪಿ, ಮಾನಸಿಕ ಆರೋಗ್ಯಕ್ಕೆ ಸಹಕಾರಿ ಆಗಲಿದೆ ಎಂಬುದು ಕಂಪನಿಗಳ ಉದ್ದೇಶವಾಗಿದೆ. (ಏಜೆನ್ಸೀಸ್)