

ಮುಂಬೈ: '9 ಥಿರುದರ್ಗಳ್' ಹೆಸರಿ ತಮಿಳು ಸಿನಿಮಾ ಮೂಲಕ ನಾಯಕಿಯಾಗಿ ಕಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮತ್ತು ಕೆಲವು ಹಿಂದಿ ಸಿನಿಮಾಗಳು ಸೇರಿದಂತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರೀಯಳಾಗಿದ್ದ ನಟಿ ಆಕಾಂಕ್ಷಾ ಮೋಹನ್, ಮುಂಬೈನ ವೆರ್ಸೋವಾದಲ್ಲಿರುವ ಹೋಟೆಲ್ ಕೋಣೆಯೊಂದರಲ್ಲಿ ಸೆ.30ರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ 30 ವರ್ಷದ ಆಕಾಂಕ್ಷಾ ಬುಧವಾರ (ಸೆ.28) ಬೆಳಗ್ಗೆ ಹೋಟೆಲ್ಗೆ ಆಗಮಿಸಿ, ರೂಮ್ ಪಡೆದು ಅಲ್ಲಿಯೇ ಕೆಲ ದಿನಗಳವರೆಗೆ ತಂಗಲು ಮುಂದಾಗಿದ್ದರು. ಆದರೆ, ಎರಡು ದಿನಗಳ ಬಳಿಕ ಅಂದರೆ, ಸೆ.30ರಂದು ಹೋಟೆಲ್ ಸಿಬ್ಬಂದಿ, ಆಕಾಂಕ್ಷಾ ಅವರಿದ್ದ ಕೋಣೆಯ ಬಾಗಿಲನ್ನು ಎಷ್ಟೇ ಬಡಿದರು, ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮತ್ತೊಂದು ನಕಲಿ ಕೀ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಆಕಾಂಕ್ಷಾ ಶವವಾಗಿ ಪತ್ತೆಯಾಗಿದ್ದಾರೆ.
ಆಕಾಂಕ್ಷಾ ಕೋಣೆಯಲ್ಲಿ ಡೆತ್ನೋಟ್ ಸಹ ಪತ್ತೆಯಾಗಿದ್ದು, ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ಸಂತೋಷವಾಗಿಲ್ಲ. ನನಗೆ ನೆಮ್ಮದಿ ಬೇಕಿದೆ ಎಂದು ಬರೆದಿಟ್ಟು, ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಹದಿನೈದು ದಿನಗಳ ಹಿಂದಷ್ಟೇ ಆಕಾಂಕ್ಷಾ ಮೋಹನ್ ಮುಖ್ಯ ಭೂಮಿಕೆಯಲ್ಲಿದ್ದ ಹೊಸ ಹಿಂದಿ ಸಿನಿಮಾ 'ಸಿಯಾ' ಬಿಡುಗಡೆಯಾಗಿರುವುದು ಬೆಳಕಿಗೆ ಬಂದಿದೆ. ನಗರದ ಲೋಖಂಡವಾಲಾ ಪ್ರದೇಶದ ಯಮುನಾ ನಗರ ಸೊಸೈಟಿಯಲ್ಲಿ ಒಂಟಿಯಾಗಿ ವಾಸವಿದ್ದ ಆಕೆ ಖಿನ್ನತೆಗೆ ಒಳಗಾಗಿ ತೀವ್ರ ಹೆಜ್ಜೆ ಇಟ್ಟಿದ್ದಳು ಎನ್ನಲಾಗಿದೆ. (ಏಜೆನ್ಸೀಸ್)