More

    ಕೇಜ್ರಿವಾಲ್​ರನ್ನು ಮನೆಗೆ ಆಹ್ವಾನಿಸಿ ಆತಿಥ್ಯ ನೀಡಿದ್ದ ಗುಜರಾತಿನ ಆಟೋ ಚಾಲಕ ಎರಡೇ ವಾರದಲ್ಲಿ ಯೂಟರ್ನ್! ​

    ಅಹಮದಾಬಾದ್​: ಎರಡು ವಾರಗಳ ಹಿಂದೆ ಅಹಮದಾಬಾದ್​ನಲ್ಲಿರುವ ತನ್ನ ಮನೆಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರನ್ನು ಆಹ್ವಾನಿಸಿ, ಆತಿಥ್ಯ ನೀಡಿ ಭಾರೀ ಸುದ್ದಿಯಾಗಿದ್ದ ಗುಜರಾತಿನ ಆಟೋ ಚಾಲಕ ವಿಕ್ರಮ್​ ದಂತಾನಿ ಇದೀಗ ಯೂಟರ್ನ್​ ಹೊಡೆದಿದ್ದು, ತಾನೊರ್ವ ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ ಮತ್ತು ಬಿಜೆಪಿ ಪಕ್ಷದ ಕಟ್ಟಾ ಬೆಂಬಲಿಗ ಎಂದು ಹೇಳಿಕೊಂಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಪ್ರಧಾನಿ ಮೋದಿ ಅವರು ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಗುಜರಾತ್​ ಪ್ರವಾಸದಲ್ಲಿದ್ದಾಗ ಶುಕ್ರವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಆಟೋ ಚಾಲಕ ವಿಕ್ರಮ್​, ಬಿಜೆಪಿಯ ಸಂಕೇತವಾದ ಕೇಸರಿ ಶಾಲೂ ಮತ್ತು ಟೋಪಿ ಧರಿಸಿ ಪಾಲ್ಗೊಂಡಿದ್ದರು. ಈ ವೇಳೆ ಅವರನ್ನು ಮಾಧ್ಯಮವದವರು ಪ್ರಶ್ನೆ ಮಾಡಿದಾಗ, ಅಹಮದಾಬಾದ್​ನಲ್ಲಿ ಸೆ. 13ರಂದು ನಡೆದ ಆಮ್​ ಆದ್ಮಿ ಪಾರ್ಟಿ ಟೌನ್​ ಹಾಲ್​ ಮೀಟಿಂಗ್​ ನಡೆಯಿತು. ಈ ವೇಳೆ ನಮ್ಮ ಆಟೋ ರಿಕ್ಷಾ ಸಂಘದ ನಾಯಕರು ಕೇಜ್ರಿವಾಲ್​ ಅವರನ್ನು ಮನೆಗೆ ಆಹ್ವಾನಿಸುವಂತೆ ಹೇಳಿದರು. ಹೀಗಾಗಿ ನಾನು ಕೇಜ್ರಿವಾಲ್​ರನ್ನು ಆಹ್ವಾನಿಸಿದೆ ಎಂದು ವಿಕ್ರಮ್​ ಪ್ರತಿಕ್ರಿಯೆ ನೀಡಿದ್ದಾರೆ.

    ಎಎಪಿ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಅವರು ಅಹಮದಾಬಾದ್​ನಲ್ಲಿ ನಡೆದ ಸಭೆಯಲ್ಲಿ, ವಿಕ್ರಮ್​ನಿಂದ ಭೋಜನದ ಆಹ್ವಾನವನ್ನು ಸ್ವೀಕರಿಸಿದ ನಂತರ ಅವರ ಆಟೋದಲ್ಲಿ ಪ್ರಯಾಣಿಸಿ, ಮನೆಗೆ ಹೋಗಿ ಭೋಜನ ಸವಿದರು. ಈ ಘಟನೆಯ ಬಳಿಕ ವಿಕ್ರಮ್​ ಬಹಳ ಖ್ಯಾತಿಯನ್ನು ಪಡೆದುಕೊಂಡರು.

    ನಮ್ಮ ಆಟೋ ಚಾಲಕರ ಒಕ್ಕೂಟದ ಮುಖಂಡರು ನನ್ನನ್ನು ಕೇಳಿದ್ದರಿಂದ ನಾನು ಕೇಜ್ರಿವಾಲ್ ಅವರನ್ನು ಊಟಕ್ಕೆ ಆಹ್ವಾನಿಸಿದೆ. ನಾನು ಅವರಿಗೆ ನನ್ನ ಮನೆಯಲ್ಲಿ ಊಟಕ್ಕೆ ಆತಿಥ್ಯ ನೀಡಲು ಮುಂದಾದ ತಕ್ಷಣ, ಕೇಜ್ರಿವಾಲ್ ಅದನ್ನು ಒಪ್ಪಿಕೊಂಡರು. ಆದರೆ, ಅದು ಇಷ್ಟು ದೊಡ್ಡ ಸಮಸ್ಯೆಯಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಪಕ್ಷದೊಂದಿಗೆ (ಎಎಪಿ) ಯಾವುದೇ ಸಂಬಂಧ ಹೊಂದಿಲ್ಲ. ಕೇಜ್ರಿವಾಲ್​ ಆತಿಥ್ಯದ ನಂತರ ನಾನು ಯಾವುದೇ ಎಎಪಿ ನಾಯಕರೊಂದಿಗೆ ಸಂಪರ್ಕದಲ್ಲಿಲ್ಲ ಎಂದು ವಿಕ್ರಮ್​ ಸ್ಪಷ್ಟಪಡಿಸಿದರು. ಅಲ್ಲದೆ, ನಾನು ಪ್ರಧಾನಿ ಮೋದಿ ಅವರ ಕಟ್ಟಾ ಅಭಿಮಾನಿ ಮತ್ತು ನಾನು ಎಂದಿಗೂ ಬಿಜೆಪಿಯ ಫಾಲೋವರ್ಸ್​ ಆಗಿದ್ದು, ಬಿಜೆಪಿಗೆ ನನ್ನ ಮತ ಎಂದು ಹೇಳಿದರು.

    ಪ್ರಧಾನಿ ಮೋದಿಗಾಗಿ ನಾನು ಸಮಾವೇಶಕ್ಕೆ ಬಂದೆ. ನಾನು ಮೋದಿ ಅವರ ದೊಡ್ಡ ಅಭಿಮಾನಿ. ನನ್ನ ಆರಂಭದ ದಿನಗಳಿಂದಲೂ ನಾನು ಬಿಜೆಪಿಯಲ್ಲೇ ಇದ್ದೇನೆ. ನನ್ನ ಮತ ಯಾವಾಗಲೂ ಬಿಜೆಪಿಗೆ. ಇದನ್ನು ನಾನು ಯಾವುದೇ ಒತ್ತಡದಲ್ಲಿ ಹೇಳುತ್ತಿಲ್ಲ ಎಂದು ವಿಕ್ರಮ್​ ತಿಳಿಸಿದರು.

    ವರ್ಷಾಂತ್ಯದಲ್ಲಿ ಗುಜರಾತಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಎಎಪಿಯ ಪ್ರಚಾರದ ಭಾಗವಾಗಿ, ಕೇಜ್ರಿವಾಲ್ ನೇತೃತ್ವದಲ್ಲಿ ಸೆಪ್ಟೆಂಬರ್ 13ರಂದು ಅಹಮದಾಬಾದ್​ನಲ್ಲಿ ಆಟೋರಿಕ್ಷಾ ಚಾಲಕರೊಂದಿಗೆ ಟೌನ್ ಹಾಲ್ ಸಭೆ ನಡೆಸಿದರು. ಸಂವಾದದ ಸಮಯದಲ್ಲಿ ವಿಕ್ರಮ್​ ಅವರು ಕೇಜ್ರಿವಾಲ್ ಅವರನ್ನು ಅವರ ಮನೆಯಲ್ಲಿ ಭೋಜನ ಮಾಡುವಂತೆ ಒತ್ತಾಯಿಸಿದರು. ಈ ವೇಳೆ ಪ್ರಸ್ತಾಪವನ್ನು ದೆಹಲಿ ಸಿಎಂ ಒಪ್ಪಿಕೊಂಡರು. ಆ ರಾತ್ರಿ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದ ಕೇಜ್ರಿವಾಲ್​, ಕೆಲವು ಸ್ಥಳೀಯ ಪಕ್ಷದ ನಾಯಕರೊಂದಿಗೆ ವಿಕ್ರಮ್​ ಅವರ ಆಟೋದಲ್ಲಿ ಪ್ರಯಾಣಿಸಿದರು ಮತ್ತು ಘಟ್ಲೋಡಿಯಾ ಪ್ರದೇಶದಲ್ಲಿರುವ ವಿಕ್ರಮ್​ ಅವರ ಸಾಧಾರಣ ಮನೆಗೆ ತಲುಪಿದರು ಮತ್ತು ಭೋಜನ ಸವಿದರು. (ಏಜೆನ್ಸೀಸ್​)

    ಖರ್ಗೆಗೆ ಕಾಂಗ್ರೆಸ್ ಅಧ್ಯಕ್ಷ ಕಿರೀಟ: ಕೊನೆಯ ದಿನ ನಾಮಪತ್ರ ಸಲ್ಲಿಕೆ, ಗಾಂಧಿಯೇತರ ನಾಯಕನ ನೇತೃತ್ವ

    ಕಾಂಗ್ರೆಸ್ ಜೋಡೋ ಶುರು, ಉತ್ಸಾಹ ಜೋರು: ರಾಜ್ಯ ಪ್ರವೇಶಿಸಿದ ರಾಹುಲ್ ಗಾಂಧಿ ಪಾದಯಾತ್ರೆ

    ಪಕ್ಷನಿಷ್ಠೆಗೆ ಉನ್ನತ ಹುದ್ದೆಯ ಅವಕಾಶ: ಖರ್ಗೆ ನಾಮಪತ್ರ ಸಲ್ಲಿಕೆ, ಗೆಲುವು ಬಹುತೇಕ ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts