More

    ಪಕ್ಷನಿಷ್ಠೆಗೆ ಉನ್ನತ ಹುದ್ದೆಯ ಅವಕಾಶ: ಖರ್ಗೆ ನಾಮಪತ್ರ ಸಲ್ಲಿಕೆ, ಗೆಲುವು ಬಹುತೇಕ ಖಚಿತ

    | ರಾಘವ ಶರ್ಮ ನಿಡ್ಲೆ ನವದೆಹಲಿ

    ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕಾಗಿ ಸಂಸದ ಶಶಿ ತರೂರ್ ವಿರುದ್ಧ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅಥವಾ ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗಳ ನಡುವೆ ಕೊನೆ ಕ್ಷಣದಲ್ಲಿ ಗಾಂಧಿ ಪರಿವಾರದ ನಿಷ್ಠ ಮತ್ತು ಪಕ್ಷದ ಶಿಸ್ತಿನ ಸಿಪಾಯಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸುವ ಮೂಲಕ ಕನ್ನಡಿಗರೊಬ್ಬರು ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷರಾಗುವುದು ಬಹುತೇಕ ನಿಚ್ಚಳವಾಗಿದೆ.

    ರಾಜಸ್ಥಾನ ಸಿಎಂ ಸ್ಥಾನವನ್ನು ಸಚಿನ್ ಪೈಲಟ್​ಗೆ ಬಿಟ್ಟುಕೊಡಲೊಪ್ಪದ ಗೆಹ್ಲೋಟ್, ಹೈಕಮಾಂಡ್​ನ್ನು ತೀವ್ರ ಮುಜುಗರಕ್ಕೊಳಪಡಿಸಿದ್ದರಿಂದ ಗಾಂಧಿ ಪರಿವಾರದ ಒಡನಾಡಿ ದಿಗ್ವಿಜಯ ಸಿಂಗ್ ಚುನಾವಣೆಗೆ ಸಜ್ಜಾಗಿದ್ದರು. ಆದರೆ, ದಿಗ್ವಿಜಯ ಸ್ಪರ್ಧೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಭಾವಿಸಿದ ವರಿಷ್ಠರು ಅಂತಿಮವಾಗಿ ಮಲ್ಲಿಕಾರ್ಜುನ ಖರ್ಗೆಗೆ ಮಣೆ ಹಾಕಿದ್ದಾರೆ. ಸೋನಿಯಾ ಗಾಂಧಿ ನಿರ್ದೇಶನದ ಮೇರೆಗೆ ಖರ್ಗೆ ನಾಮಪತ್ರ ಸಲ್ಲಿಸಿದ್ದು, ಚುನಾವಣೆಯಲ್ಲಿ ಖರ್ಗೆಗೆ ಮತ ಹಾಕಬೇಕು ಎಂಬ ಸಂದೇಶವನ್ನೂ ಕೇಡರ್​ಗೆ ರವಾನಿಸಲಾಗಿದೆ. ಖರ್ಗೆ ಅವರು ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಸೂಚಿಸಿರುವ ಅಭ್ಯರ್ಥಿಯಾಗಿರುವುದರಿಂದ ಗಾಂಧಿ ಪರಿವಾರದ ಬೆಂಬಲಿಗರೆಲ್ಲರೂ ಖರ್ಗೆಗೆ ಮತ ಹಾಕುವುದು ನಿಶ್ಚಿತ.

    ಸೆ.30 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದರಿಂದ ಶಶಿ ತರೂರ್ ನಾಮಪತ್ರ ಸಲ್ಲಿಕೆ ಬಳಿಕ ಎಐಸಿಸಿ ಕೇಂದ್ರ ಕಚೇರಿಗೆ ಆಗಮಿಸಿದ ಖರ್ಗೆ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆಯ ಔಪಚಾರಿಕ ಪ್ರಕ್ರಿಯೆ ಪೂರ್ಣಗೊಳಿಸಿದರು. ಖರ್ಗೆ ನಾಮಪತ್ರಕ್ಕೆ ಸೂಚಕರಾಗಿ ಕಾಂಗ್ರೆಸ್ ಮುಖಂಡರಾದ ಎ.ಕೆ. ಆಂಟನಿ, ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್, ಅಶೋಕ್ ಗೆಹ್ಲೋಟ್, ಅಜಯ್ ಮಾಕನ್ ಸೇರಿ ಹಲವರು ಸಹಿ ಹಾಕಿದ್ದಾರೆ. ವಿಶೇಷ ಎಂದರೆ ಜಿ-23 ಬಂಡಾಯ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಕೇಂದ್ರ ಮಾಜಿ ಸಚಿವರಾದ ಆನಂದ್ ಶರ್ಮ, ಮನೀಶ್ ತಿವಾರಿ ಕೂಡ ಖರ್ಗೆ ಪರ ಸಹಿ ಹಾಕಿದ್ದಾರೆ! ಅ.17ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​ನ ಅಂದಾಜು 9500 ಅರ್ಹ ಪ್ರತಿನಿಧಿಗಳು (ಡೆಲಿಗೇಟ್ಸ್) ಆಯಾ ರಾಜ್ಯಗಳ ಪಿಸಿಸಿ ಕಚೇರಿಯಲ್ಲಿ ಮತದಾನ ಮಾಡಲಿದ್ದಾರೆ. ಒಂದು ವೇಳೆ ಶಶಿ ತರೂರ್ ಸ್ಪರ್ಧೆಯಿಂದ ಹಿಂದೆ ಸರಿದರೆ, ಖರ್ಗೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ತರೂರ್ ಸ್ಪರ್ಧೆಯಿಂದ ಹಿಂದೆ ಸರಿಯಲಾರರು. ಸೋಲುವುದು ಗೊತ್ತಿದ್ದರೂ ಅವರು ಸ್ಪರ್ಧಿಸಿದ್ದಾರೆ.

    ಕನ್ನಡಿಗರ ದರ್ಬಾರ್

    ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಶಕ್ತಿ ಕೇಂದ್ರ ದೆಹಲಿಯಲ್ಲಿ ಕನ್ನಡಿಗರಿಗೆ ಮತ್ತೊಂದು ಆಯಕಟ್ಟಿನ ಹುದ್ದೆ ಲಭಿಸಿದಂತಾಗಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ಬಿ.ವಿ. ಶ್ರೀನಿವಾಸ್, ವಿವಿಧ ರಾಜ್ಯಗಳಲ್ಲಿ ಪಕ್ಷ ಸಂಘಟನೆ ಮಾಡುತ್ತಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮತ್ತೊಂದೆಡೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ರಾಜ್ಯದ ಬಿ.ಎಲ್. ಸಂತೋಷ್ ಅವರಿದ್ದರೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ. ರವಿ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತೋರ್ವ ಕನ್ನಡಿಗ, ಸಂಸದ ತೇಜಸ್ವಿ ಸೂರ್ಯ ಕೆಲಸ ಮಾಡುತ್ತಿದ್ದರೆ, ಕೇಂದ್ರದಲ್ಲಿ ಸಂಸದೀಯ ವ್ಯವಹಾರ ಖಾತೆ ನಿರ್ವಹಿಸುತ್ತಿರುವ ಪ್ರಲ್ಹಾದ್ ಜೋಶಿ, ಪ್ರಧಾನಿ ಮೋದಿಯವರ ವಿಶ್ವಾಸ ಗಳಿಸಿರುವುದು ಗಮನಾರ್ಹ.

    ರಿಮೋಟ್ ಕಂಟ್ರೋಲ್?

    ಖರ್ಗೆಯವರು ಸೋನಿಯಾ ಗಾಂಧಿ ನಿರ್ದೇಶನದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರು ರಿಮೋಟ್ ಕಂಟ್ರೋಲ್ ಅಧ್ಯಕ್ಷರಾಗಿರುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಅವರನ್ನು ರಿಮೋಟ್ ಕಂಟ್ರೋಲ್ಡ್ ಪಿಎಂ ಎಂದು ಬಿಜೆಪಿ ಸೇರಿ ಹಲವು ವಿಪಕ್ಷಗಳು ಟೀಕಿಸಿದ್ದವು. ಈಗ ಪಕ್ಷದಲ್ಲಿ ಹಲವು ನಿರ್ಧಾರಗಳನ್ನು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತೆಗೆದುಕೊಳ್ಳುತ್ತಿರುವುದರಿಂದ ಗಾಂಧಿ ಪರಿವಾರದ ಸೂಚನೆಯಂತೆ ನಡೆದುಕೊಳ್ಳುವ ಅಧ್ಯಕ್ಷ ಇವರಾಗಲಿದ್ದಾರಾ ಎಂಬ ಪ್ರಶ್ನೆಗಳೆದ್ದಿವೆ. ಅದೇನೇ ಇದ್ದರೂ, ರಾಜಕೀಯ ರಣನೀತಿ ರೂಪಿಸುವುದರಲ್ಲೇನೂ ಖರ್ಗೆಯೇನು ಹಿಂದೆ ಬಿದ್ದಿಲ್ಲ. ಇದಕ್ಕೆ ಅವರ ಲೋಕಸಭೆ ಮತ್ತು ರಾಜ್ಯಸಭೆಯ ನಿರ್ವಹಣೆಗಳೇ ನಿದರ್ಶನ. ಮೇಲಾಗಿ, 2024ರ ಲೋಕಸಭೆ ಚುನಾವಣೆ ಹಾಗೂ ವಿವಿಧ ವಿಧಾನಸಭೆ ಚುನಾವಣೆಗಳಿಗೆ ಮಿತ್ರಪಕ್ಷಗಳನ್ನು ಕಾಂಗ್ರೆಸ್ ಕಡೆ ಸೆಳೆಯುವಲ್ಲಿ ಖರ್ಗೆ ಮಹತ್ತರ ಪಾತ್ರವಹಿಸಬಲ್ಲರು. ಸಂಸತ್ತಿನ ಒಳಗೆ ಮತ್ತು ಹೊರಗೆ ರಾಜಕೀಯ ಪಕ್ಷಗಳ ಮುಖಂಡರು ಖರ್ಗೆ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

    ದೈಹಿಕ ಸವಾಲು

    ಚುನಾವಣೆ ಮೇಲೆ ಚುನಾವಣೆ ಸೋಲುತ್ತಾ ಕಾಂಗ್ರೆಸ್ ಕಷ್ಟದ ದಿನಗಳನ್ನು ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ 80 ವರ್ಷ ತುಂಬಿರುವ ಮಲ್ಲಿಕಾರ್ಜುನ ಖರ್ಗೆಗೆ ಪಕ್ಷ ಸಂಘಟಿಸುವ ದೈತ್ಯ ಸವಾಲಿದೆ. ಎದುರಾಳಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಿಗೆ ಹೋಲಿಸಿದರೆ, ಚುರುಕು, ಸಕ್ರಿಯವಾಗಿ ನಿರಂತರ ಪ್ರವಾಸ ಮಾಡುತ್ತಾ, ಓಡಾಡುವುದನ್ನು ಖರ್ಗೆಯವರಿಂದ ನಿರೀಕ್ಷೆ ಮಾಡುವುದು ಕಷ್ಟ. ಆದರೆ, ದೆಹಲಿಯಲ್ಲೇ ಕುಳಿತು ಕಾರ್ಯತಂತ್ರ ರೂಪಿಸುತ್ತಾ ಸಂಘಟನೆಗೆ ಶಕ್ತಿ ತುಂಬ ಬಲ್ಲರು ಎಂಬ ವಿಶ್ವಾಸ ಖರ್ಗೆ ಬೆಂಬಲಿಗರಲ್ಲಿದೆ. ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್, ಖರ್ಗೆಯವರ ರಣನೀತಿಗಳೇ ಪಕ್ಷಕ್ಕೆ ವರವಾಗಲಿವೆ. ರಾಹುಲ್ ಗಾಂಧಿ ಈ ಪಾದಯಾತ್ರೆ ಬಳಿಕವೂ ನಿರಂತರ ಪ್ರವಾಸ ಮಾಡುತ್ತಾ ಪಕ್ಷ ಸಂಘಟನೆ ಮಾಡಲಿದ್ದಾರೆ, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

    ಅಧಿಕಾರಕ್ಕಾಗಿ ಲಾಬಿ ಮಾಡಿರಲಿಲ್ಲ

    2019ರ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಸೋತರೂ, ಖರ್ಗೆಯವರನ್ನು ದೆಹಲಿಯಿಂದ ಕಳುಹಿಸಿಕೊಡಲು ಸೋನಿಯಾರಿಗೆ ಮನಸ್ಸಿರಲಿಲ್ಲ. ಹೀಗಾಗಿ, ರಾಜ್ಯಸಭೆ ಸದಸ್ಯತ್ವ ನೀಡಿ ವಾಪಸ್ ಕರೆಸಿಕೊಂಡರು ಮತ್ತು ರಾಜ್ಯಸಭೆಯಲ್ಲಿ ಪಕ್ಷದ ನಾಯಕನನ್ನಾಗಿಯೂ ಮಾಡಿದರು. ಈ ಕಾರಣಕ್ಕಾಗಿಯೇ, ಕೇಂದ್ರ ಮಾಜಿ ಸಚಿವರಾದ ಆನಂದ್ ಶರ್ಮ, ಗುಲಾಂ ನಬೀ ಆಜಾದ್, ಕಪಿಲ್ ಸೇರಿ ಹಲವರು ಒಳಗಿಂದೊಳಗೇ ಖರ್ಗೆ ವಿರುದ್ಧ ಮುನಿಸಿಕೊಂಡಿದ್ದರು. ಹೀಗಿದ್ದರೂ, ಬಹಿರಂಗವಾಗಿ ಏನೂ ಮಾತನಾಡದೆ ಸುಮ್ಮನಿದ್ದ ಖರ್ಗೆಯವರಿಗೆ ಈಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವ ಅದೃಷ್ಟ ಒಲಿದುಬಂದಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಖರ್ಗೆ ಲಾಬಿ ಮಾಡಿರಲಿಲ್ಲ. ಸೋನಿಯಾ ಗಾಂಧಿಯವರು ಇಚ್ಛಿಸಿದರೆ ಸ್ಪರ್ಧಿಸುವೆ ಎಂದಿದ್ದರು. ಅಶೋಕ್ ಗೆಹ್ಲೋಟ್ ಬಗ್ಗೆ ಸೋನಿಯಾ ಗಾಂಧಿಯವರಿಗೆ ಸದಭಿಪ್ರಾಯವಿತ್ತಾದರೂ, ಸಿಎಂ ಕುರ್ಚಿ ಬಿಡಲ್ಲ ಎಂಬ ಹಠಮಾರಿತನ ಸೋನಿಯಾರಿಗೆ ಬೇಸರ ತರಿಸಿದೆ ಎನ್ನಲಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಎಐಸಿಸಿ ಅಂಗಳದಲ್ಲಿ ಹರಿದಾಡುತ್ತಿದೆ.

    ರಾಜಕೀಯ ಹಾದಿ

    80ರ ಹರೆಯದ ಮಲ್ಲಿಕಾರ್ಜುನ ಖರ್ಗೆ ಜನ್ಮಭೂಮಿ ಬೀದರ್ (ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮ). ಕರ್ಮಭೂಮಿ ಕಲಬುರಗಿ. ಪಕ್ಷನಿಷ್ಠೆ ಯಾವತ್ತೂ ಬಿಟ್ಟಿಲ್ಲ. 70ರ ದಶಕದಲ್ಲಿ ಕಲಬುರಗಿಯಲ್ಲಿ ಮಜ್ದೂರ್ ಸಂಘದ ಮುಖಂಡರಾಗಿ ಖರ್ಗೆ ಆರಂಭಿಸಿದ ಹೋರಾಟ, ಸಾಮಾಜಿಕ ಕೆಲಸಗಳು ಈಗ ಎಐಸಿಸಿ ಗದ್ದುಗೆವರೆಗೆ ತಂದು ನಿಲ್ಲಿಸಿರುವುದು ವಿಶೇಷ. ಗುರುಮಠಕಲ್ ಎಸ್​ಸಿ ಮೀಸಲು ಕ್ಷೇತ್ರದಿಂದ 1972-2004 ರವರೆಗೆ (8 ಸಲ) ವಿಧಾನಸಭೆಗೆ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. ಕ್ಷೇತ್ರ ಮರು ವಿಂಗಡಣೆಯಲ್ಲಿ ಗುರುಮಠಕಲ್ ಸಾಮಾನ್ಯ ಕ್ಷೇತ್ರವಾದ ಬಳಿಕ 2008ರಲ್ಲಿ ಚಿತ್ತಾಪುರದಿಂದ ಸ್ಪರ್ಧಿಸಿ 9ನೇ ಸಲ ವಿಧಾನಸಭೆ ಪ್ರವೇಶಿಸಿದರು. 2009ರಲ್ಲಿ ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಅಖಾಡಕ್ಕಿಳಿದು ಮೊದಲ ಸಲ ಸಂಸತ್ತಿಗೆ ಎಂಟ್ರಿ ಕೊಟ್ಟರು. 2014ರಲ್ಲಿ ಸಂಸತ್ತಿಗೆ ಪುನರಾಯ್ಕೆ ಆದರು. 2019ರಲ್ಲಿ ಸೋತರು. ಇದು ಖರ್ಗೆ ರಾಜಕೀಯ ಜೀವನದ ಮೊದಲ ಸೋಲು. ಪಕ್ಷದ ವರಿಷ್ಠರು 2020ರ ಜೂನ್​ನಲ್ಲಿ ಇವರನ್ನು ರಾಜ್ಯಸಭೆ ಸದಸ್ಯರಾಗಿ ಮಾಡಿದರು. 2021ರ ಫೆಬ್ರವರಿಯಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕರಾದರು.

    ಎರಡನೇ ಕನ್ನಡಿಗ: ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾದರೆ ರಾಜ್ಯದಿಂದ ಆ ಹುದ್ದೆಗೆ ಏರುವ ಎರಡನೆಯವರಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು 1967-68 ರಲ್ಲಿ ಎಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ನಂತರ ರಾಜ್ಯದ ಯಾವುದೇ ಮುಖಂಡರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ.

    ಶಿಸ್ತು, ನಿಷ್ಠೆಗೆ ಸಿಕ್ಕ ಫಲ

    ಖರ್ಗೆ ಎಂದಿಗೂ ಅಶಿಸ್ತು ಪ್ರದರ್ಶಿಸಿದವರಲ್ಲ. ಅಧಿಕಾರ ಸಿಗದಿದ್ದಾಗ ಬೇಸರಿಸಿಕೊಂಡಿದ್ದರೂ, ವರಿಷ್ಠರ ಮುಂದೆ ಬಂಡಾಯದ ಬಾವುಟ ಬೀಸಿಲ್ಲ, ಬೆದರಿಕೆ ಹಾಕಲಿಲ್ಲ. 2004ರಲ್ಲಿ ತಮ್ಮ ಬದಲಿಗೆ ಧರಂಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಹೈಕಮಾಂಡ್ ನಿರ್ಧಾರದಿಂದ ಖರ್ಗೆ ತೀವ್ರ ಬೇಸರಗೊಂಡಿದ್ದರು. ಆಪ್ತರು ಹೈಕಮಾಂಡ್ ಮುಂದೆ ಅಸಮಾಧಾನ ತೋಡಿಕೊಳ್ಳಿ ಎಂದು ಒತ್ತಾಯಿಸಿದರೂ, ನಾನು ಪಕ್ಷನಿಷ್ಠನಾಗಿ ಹೀಗೆ ಮಾಡಲಾರೆ ಎಂದು ಹಿಂದೆ ಸರಿದಿದ್ದರು. 2014ರಲ್ಲಿ ಲೋಕಸಭೆ ವಿಪಕ್ಷ ನಾಯಕರಾಗಿ ಆಯ್ಕೆಯಾದಾಗ ಕಾಂಗ್ರೆಸ್ಸಿನ ಇತರೆ ಮುಖಂಡರು ಖರ್ಗೆ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು. ಆದರೆ, ಲೋಕಸಭೆಯ ಪ್ರತಿ ಅಧಿವೇಶನದಲ್ಲೂ ಕೇಂದ್ರ ಸರ್ಕಾರವನ್ನು ನೇರವಾಗಿ ಎದುರಿಸಿ, ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ತಮ್ಮದೇ ಶೈಲಿಯ ಮಾತಿನ ಚಾಟಿ ಮೂಲಕ ಬಿಸಿ ಮುಟ್ಟಿಸುತ್ತಿದ್ದ ಖರ್ಗೆ, ಸಹಜವಾಗಿಯೇ ಸೋನಿಯಾ ಗಾಂಧಿಯವರ ಮೆಚ್ಚುಗೆಗೆ ಪಾತ್ರವಾಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರೇ ಖರ್ಗೆಯವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದು ಕೂಡ ಉಲ್ಲೇಖಾರ್ಹ. ತನ್ನನ್ನು ತಾನು ದಲಿತ ಎಂದು ಕರೆಸಿಕೊಳ್ಳುವುದನ್ನು ಬಯಸದ ಖರ್ಗೆ, ನನ್ನನ್ನು ಮಾಧ್ಯಮಗಳು ದಲಿತ ನಾಯಕ ಎಂದು ವ್ಯಾಖ್ಯಾನಿಸುವುದು ತಪ್ಪು. ನಾನು ಸಮುದಾಯದ ಪ್ರತಿನಿಧಿ ಇರಬಹುದು. ಆದರೆ, ಸಮುದಾಯದ ಹೆಸರು ಹೇಳಿಕೊಂಡೇ ಅಧಿಕಾರ ಗಿಟ್ಟಿಸಿಕೊಂಡವನಲ್ಲ. ಎಲ್ಲಾ ಸಮಾಜದವರು ನನ್ನನ್ನು ಬೆಂಬಲಿಸಿದ್ದಾರೆ. ಸಮುದಾಯ ರಾಜಕಾರಣ ಮೀರಿ ಬೆಳೆದಿದ್ದೇನೆಂದು ಖರ್ಗೆ ಹೇಳುತ್ತಾರೆ.

    ಮಗನ ಪರವಾಗಿ ಹೀಗೊಂದು ಮನವಿ ಮಾಡಿಕೊಂಡ್ರು ಸುಮಲತಾ ಅಂಬರೀಷ್​..

    ಸೌಂದರ್ಯ ಜಗದೀಶ್ ಮತ್ತು ನೆರೆಮನೆ ಜಗಳ ಬೀದಿಗೆ; ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts