More

    ಕಾಂಗ್ರೆಸ್ ಜೋಡೋ ಶುರು, ಉತ್ಸಾಹ ಜೋರು: ರಾಜ್ಯ ಪ್ರವೇಶಿಸಿದ ರಾಹುಲ್ ಗಾಂಧಿ ಪಾದಯಾತ್ರೆ

    | ಶ್ರೀಕಾಂತ್ ಶೇಷಾದ್ರಿ/ಕಿರಣ್ ಮಾದರಹಳ್ಳಿ ಗುಂಡ್ಲುಪೇಟೆ

    ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ದೂರದೃಷ್ಟಿಯಲ್ಲಿಟ್ಟಕೊಂಡೇ ಅಖಿಲ ಭಾರತ ಕಾಂಗ್ರೆಸ್ ಹಮ್ಮಿಕೊಂಡ ಭಾರತ್ ಜೋಡೋ ಯಾತ್ರೆ ತನ್ನ ಉದ್ದೇಶವನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಾ, ತನ್ನ ಶಕ್ತಿ- ಉತ್ಸಾಹ ಕುಂದಿಲ್ಲ ಎಂದು ಸಂದೇಶ ಸಾರುತ್ತಾ ರಾಜ್ಯದಲ್ಲಿ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

    ಹೊಸ ರೂಪಾಂತರದಲ್ಲಿ ಕಾಣಿಸಿಕೊಂಡಿರುವ ರಾಹುಲ್ ಗಾಂಧಿ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಐನೂರು ಕಿ.ಮೀ. ಸಾಗಿ ಬಂದರೂ ಅವರು ಇನಿತೂ ಕುಂದಿದಂತೆ ಕಾಣಿಸಿಲ್ಲ. ಪಕ್ಷದ ಸಂಪತ್ತಿನಂತಿರುವ ಕಾರ್ಯಕರ್ತರ ನಡುವೆ ಅವರ ಉತ್ಸಾಹ ನೂರ್ಮಡಿಸಿದಂತೆಯೇ ತೋರ್ಪಟ್ಟಿದೆ.

    ಶುಕ್ರವಾರ ಗುಂಡ್ಲುಪೇಟೆಯಲ್ಲಿನ ಊಟಿ- ಕ್ಯಾಲಿಕಟ್ ಹೆದ್ದಾರಿ ಪಕ್ಕದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಅವರನ್ನು ಅಧಿಕೃತವಾಗಿ ಸ್ವಾಗತಿಸಿ ರಾಜ್ಯಕ್ಕೆ ಬರಮಾಡಿಕೊಳ್ಳಲಾಯಿತು. ಅದಕ್ಕು ಮುನ್ನ ಸಿದ್ದರಾಮಯ್ಯ ಮತ್ತು ಅವರ ಆಪ್ತ ಶಾಸಕರು ಪ್ರತ್ಯೇಕವಾಗಿ ರಾಹುಲ್​ರನ್ನು ಎದುರುಗೊಂಡಿದ್ದು ವಿಶೇಷ.

    ಹಾಗೆಯೇ ಪಕ್ಷದ ರಾಜ್ಯ ಘಟಕದ ವಿಚಾರಕ್ಕೆ ಬಂದರೆ ರಾಹುಲ್ ಮನದಿಚ್ಛೆ ಏನೆಂಬುದು ಕೃತಿಯಲ್ಲಿ ಪುನಃ ಕಾಣಿಸಿತು. ಪರಸ್ಪರ ವಿರುದ್ಧ ದಿಕ್ಕಿಗೆ ಮುಖಮಾಡಿದಂತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಟ್ಟಾಗಿರಬೇಕೆಂದು ಬಯಸಿದಂತೆ ಅವರಿಬ್ಬರ ಕೈ ಹಿಡಿದು ನಗಾರಿ ಬಾರಿಸಿದ್ದು, ಬಳಿಕ ಕೈ ಹಿಡಿದು ಹೆಜ್ಜೆ ಹಾಕಿಸಿದ್ದು ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದ ಪ್ರಮುಖ ಸಂಗತಿಯಾಗಿತ್ತು. ಕಳೆದ ತಿಂಗಳು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಈ ಇಬ್ಬರು ನಾಯಕರ ಆಲಿಂಗ ಮಾಡಿಸಿದ್ದರು ಎಂಬುದು ಉಲ್ಲೇಖಾರ್ಹ ಸಂಗತಿ.

    ಹಾಗೆಯೇ, ಈ ಯಾತ್ರೆ ಕೇಂದ್ರ ಸರ್ಕಾರದ ವಿರುದ್ಧ ಮಾತ್ರವಲ್ಲ ಸ್ಥಳೀಯ ಸರ್ಕಾರದ ವಿರುದ್ಧವೂ ಜನಾಂದೋಲನ ರೂಪಿಸುತ್ತದೆ ಎಂಬ ಸೂಕ್ಷ್ಮ ರಾಹುಲ್ ಮಾತಿನಲ್ಲಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮುಂದಿನ 21 ದಿನ ನೀವು(ಕಾರ್ಯಕರ್ತರು) ನನ್ನೊಂದಿಗೆ ಈ ಉರಿ ಬಿಸಿಲಿನಲ್ಲಿ ಹೆಜ್ಜೆ ಹಾಕಬೇಕು. ಕರ್ನಾಟಕ ರಾಜ್ಯದ ನೋವನ್ನು ನಾವು ಆಲಿಸುತ್ತೇವೆ. ಕರ್ನಾಟಕದಲ್ಲಿನ ಭ್ರಷ್ಟಾಚಾರ, ನಿರುದ್ಯೋಗ, ಬೆಲೆಏರಿಕೆ ಸಮಸ್ಯೆಗಳನ್ನು ಆಲಿಸುತ್ತೇವೆ ಎಂದರು.

    ಈ ಪಾದಯಾತ್ರೆ ನಮ್ಮ ಅಭಿಪ್ರಾಯ ಹೇಳುವುದಕ್ಕಿಂತ ನಿಮ್ಮ ಸಮಸ್ಯೆ ಆಲಿಸುವುದಕ್ಕಾಗಿ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಹಲವು ಸಂಸ್ಥೆಗಳಿವೆ. ಮಾಧ್ಯಮಗಳನ್ನು ಸರ್ಕಾರ ನಿಯಂತ್ರಿಸುತ್ತಿದೆ. ಸಂಸತ್ತಿನಲ್ಲಿ ನಾವು ಏನಾದರೂ ಹೇಳಲು ಹೋದರೆ ಅದಕ್ಕೆ ಅವಕಾಶ ನೀಡುವುದಿಲ್ಲ, ಮೈಕ್ ಆಫ್ ಆಗುತ್ತದೆ. ಪ್ರತಿಪಕ್ಷದವರನ್ನು ಬಂಧಿಸಲಾಗುತ್ತದೆ. ಹೀಗಾಗಿ ನಮ್ಮ ಮುಂದೆ ಬೇರೆ ದಾರಿ ಇಲ್ಲದೆ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು. ನಾವು 7-8 ಗಂಟೆಗಳ ಕಾಲ ಬೆಳಗ್ಗೆಯಿಂದ ಸಂಜೆವರೆಗೂ ಹೆಜ್ಜೆ ಹಾಕುತ್ತೇವೆ. ಈ ಸಮಯದಲ್ಲಿ ದಾರಿಯುದ್ಧಕ್ಕೂ ಜನರು ಸಮಸ್ಯೆ ಹೇಳಿಕೊಳ್ಳುತ್ತಾರೆ. ಬೆಲೆ ಏರಿಕೆ, ನಿರುದ್ಯೋಗ, ರೈತರ ಮೇಲಿನ ದೌರ್ಜನ್ಯ, ಸಾರ್ವಜನಿಕ ಉದ್ಯೋಗ ಖಾಸಗಿಕರಣದ ಬಗ್ಗೆ ನೋವು- ಸಮಸ್ಯೆ ಹೇಳಿಕೊಳ್ಳುತ್ತಾರೆ. ಎಲ್ಲೂ ದೊಡ್ಡ ಭಾಷಣ ಇರುವುದಿಲ್ಲ. 7-8 ಗಂಟೆ ಹೆಜ್ಜೆ ಹಾಕಿ 15 ನಿಮಿಷಗಳ ಭಾಷಣ ಇರುತ್ತದೆ. ಇದು ಕೇಳುವ ಸಮಯ ಎಂದರು.

    ಆರ್​ಎಸ್​ಎಸ್ ಹಾಗೂ ಬಿಜೆಪಿ ವಿಚಾರಧಾರೆಗಳಿಂದ ದೇಶದಲ್ಲಿ ಹಬ್ಬುತ್ತಿರುವ ದ್ವೇಷ ಹಾಗೂ ಹಿಂಸಾಚಾರದ ವಿರುದ್ಧ ಹೋರಾಟ ಮಾಡುವುದು ಈ ಯಾತ್ರೆಯ ಉದ್ದೇಶ. ಯಾವುದೇ ಶಕ್ತಿ ಇದನ್ನು ತಡೆಯಲು ಸಾಧ್ಯವಿಲ್ಲ. ಕಾರಣ ಇದು ಭಾರತದ ಧ್ವನಿಯ ಯಾತ್ರೆಯಾಗಿದೆ. ಈ ಯಾತ್ರೆಯಲ್ಲಿ ದ್ವೇಷ, ಹಿಂಸೆ ಕಾಣುವುದಿಲ್ಲ. ಎಲ್ಲ ಧರ್ಮ, ಜಾತಿ, ಭಾಷಿಗರು ಒಟ್ಟಿಗೆ ಹೆಜ್ಜೆ ಹಾಕುತ್ತಾರೆ. ಈ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿದ್ದು ಕಾಶ್ಮೀರದವರೆಗೂ ಸಾಗಲಿದೆ

    | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ

    ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಧರ್ಮ, ಕೋಮುವಾದಿ, ದ್ವೇಷದ ರಾಜಕಾರಣ ಆರಂಭವಾಗಿದೆ. ಇಂದು ಮಹಿಳೆಯರು, ರೈತರು, ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ವಣವಾಗಿದೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಜನಜನಿತವಾಗಿದೆ. ದೇಶದಲ್ಲಿ ಅಶಾಂತಿ ಜತೆಗೆ, ರೈತರು, ನಿರುದ್ಯೋಗ, ಭ್ರಷ್ಟಾಚಾರ, ಮಹಿಳೆಯರು, ಬೆಲೆ ಏರಿಕೆ ಸಮಸ್ಯೆ ವಿರುದ್ಧ ಹೋರಾಡಲು ಈ ಪಾದಯಾತ್ರೆ ಮಾಡಲಾಗುತ್ತಿದೆ.

    | ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ

    ನಿರುದ್ಯೋಗ ಸಮಸ್ಯೆ, ರಾಜ್ಯದಲ್ಲಿನ ಭ್ರಷ್ಟಾಚಾರ ವಿಚಾರ ಸೇರಿ ಐದು ಜನಪರ ಉದ್ದೇಶಗಳೊಂದಿಗೆ ಈ ಪಾದಯಾತ್ರೆ ಮಾಡಲಾಗುತ್ತಿದೆ. ನಮ್ಮನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.

    | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

    ಯಾತ್ರೆ ರಾಜಕೀಯ ಲಾಭಕ್ಕಾಗಿ ಅಲ್ಲ: ಯಾತ್ರೆಯ ಸಂಕಲ್ಪ ರಾಜಕೀಯ ಲಾಭಕ್ಕಾಗಿ, ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಇದು ಈ ದೇಶವನ್ನು ಬೆಲೆ ಏರಿಕೆಯಿಂದ ಮುಕ್ತಿಗೊಳಿಸಲು, ದೇಶದ ಯುವಕರಿಗೆ ಉದ್ಯೋಗ ನೀಡಲು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು. ದೇಶದಲ್ಲಿ ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಾ ದ್ವೇಷದ ರಾಜಕಾರಣ ಮಾಡಲಾಗುತ್ತಿರುವುದರ ವಿರುದ್ಧ ಸಮರ ಸಾರಲು ಸಂಕಲ್ಪ ಮಾಡಿ ರಾಹುಲ್ ಗಾಂಧಿ ಅವರು ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಎಂದರು.

    ಕಂಟೇನರ್​ನಲ್ಲಿ ವಾಸ್ತವ್ಯ: ಪಾದಯಾತ್ರೆ ರಾತ್ರಿ ಬೇಗೂರು ತಲುಪಿದ್ದು, ರಾಹುಲ್ ಗಾಂಧಿ ಕಂಟೇನರ್​ನಲ್ಲಿ ಉಳಿದುಕೊಂಡರು. ರಾಹುಲ್ ಕಂಟೇನರ್​ಗೆ ತೆರಳುವಾಗಲೂ ಅಭಿಮಾನಿಗಳು ಮುಗಿಬಿದ್ದರು.

    ಕಾರ್ಯಕರ್ತರ ಜಾತ್ರೆ!: ಗುಂಡ್ಲುಪೇಟೆ ಮೂಲಕ ಕರ್ನಾಟಕಕ್ಕೆ ಶುಕ್ರವಾರ ಕಾಲಿಟ್ಟ ಭಾರತ ಐಕ್ಯತಾ ಯಾತ್ರೆಯಲ್ಲಿ ರಣೋತ್ಸವದ ಕಹಳೆ ಮೊಳಗಿತು. ಹಳ್ಳಿ-ಹಳ್ಳಿಗಳಿಂದ ಹರಿದು ಬಂದಿದ್ದ ಕಾರ್ಯಕರ್ತರ ದಂಡು ಯಾತ್ರೆಯನ್ನು ಜಾತ್ರೆ ಮಾಡಿ ಕುಣಿದು ಕುಪ್ಪಳಿಸಿತು. ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದ ಮೈದಾನದಲ್ಲಿ ಶುಕ್ರವಾರ ವೇದಿಕೆ ನಿರ್ವಿುಸಲಾಗಿತ್ತು. ಕಾರ್ಯಕ್ರಮ ಶುರುವಾಗುವ ಕ್ಷಣದವರೆಗೂ ವೇದಿಕೆ ಮುಂದೆ ಖಾಲಿ ಕುರ್ಚಿಗಳು ಕಂಡವು. ಇದನ್ನು ನೋಡಿ ಕೆಲವರು ಯಾತ್ರೆ ವಿಫಲವಾಯಿತೆಂದು ವಿಶ್ಲೇಷಿಸುವುದರೊಳಗೆ ಜಿಲ್ಲೆಯ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಬಂದರು. ವೇದಿಕೆ ಇಳಿದು ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ ಅವರನ್ನು ಸಾವಿರಾರು ಕಾರ್ಯಕರ್ತರು ಹಿಂಬಾಲಿಸಿದರು. ಗುಂಡ್ಲುಪೇಟೆ ಪಟ್ಟಣದಿಂದ ಕೆಬ್ಬೆಕಟ್ಟೆ ಶನೈಶ್ಚರ ದೇಗುಲದವರೆಗೂ ಬೆಳಗಿನ ಪಾದಯಾತ್ರೆ ನಡೆಯಿತು. ನೆಚ್ಚಿನ ನಾಯಕನನ್ನು ನೋಡಲು, ಜತೆ ಜತೆಗೆ ಹೆಜ್ಜೆ ಇಡಲು ಹಿಂದಿನಿಂದ ಮುಂದಕ್ಕೆ ಕಾರ್ಯಕರ್ತರು ಓಡೋಡಿ ಬಂದರು. ಇವರೆಲ್ಲರ ರಣೋತ್ಸಾಹಕ್ಕೆ ಬೆಳಗಿನ ಪಾದಯಾತ್ರೆ ಜೈಕಾರ, ಸಿಳ್ಳೆ, ಚಪ್ಪಾಳೆಯೊಂದಿಗೆ ಮುಂದೆ ಸಾಗಿತು.

    ಹೆಜ್ಜೆ ಗುರುತು

    • ರಾಜ್ಯದಲ್ಲಿ ಸಾಗುವ 21 ದಿನಗಳ ಯಾತ್ರೆಗೆ ಗುಂಡ್ಲುಪೇಟೆಯಲ್ಲಿ ಚಾಲನೆ.
    • ಕಾರ್ಯಕರ್ತರ ನಡುವೆ ಹೆಜ್ಜೆ ಹಾಕಿದ ರಾಹುಲ್, ಹಾಲಿ-ಮಾಜಿ ಶಾಸಕರನ್ನು ಕರೆದು ಮಾತನಾಡಿಸುತ್ತಾ ಸಾಗಿದ ರಾಹುಲ್.
    • ಮಧ್ಯಾಹ್ನ ಭೋಜನ ವಿರಾಮದ ಬಳಿಕ ಸೋಲಿಗರು ಮತ್ತು ಆಕ್ಸಿಜನ್ ಕೊರತೆಯಿಂದ ಮೃತರಾದ ಸಂತ್ರಸ್ತರ ಜತೆ ಸಂವಾದ.
    • ಯಾತ್ರೆಯುದ್ಧಕ್ಕೂ ರಾಹುಲ್ ಎಡ ಬಲದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಒಟ್ಟಿಗೆ ಸಾಗಿದ್ದು ವಿಶೇಷ.

    ಹತ್ತಿಕ್ಕುವ ಪ್ರಯತ್ನಕ್ಕೆ ನಾವು ಹೆದರಲ್ಲ

    ನಮ್ಮನ್ನು, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಹತ್ತಿಕ್ಕಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಾರತೀಯರ ಮನದಲ್ಲಿ ಅಸೂಯೆ, ದ್ವೇಷ ಹೆಚ್ಚಿಸಿದ್ದು, ಇದನ್ನು ತೊಡೆದು ಹಾಕಬೇಕ್ಮುತ್ತು ಎಲ್ಲರನ್ನು ಒಗ್ಗೂಡಿಸಬೇಕು ಎಂದು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದರು. ಐದು ವಿಚಾರಗಳ ಮೇಲೆ ಈ ಪಾದಯಾತ್ರೆ ಮಾಡಲಾಗುತ್ತಿದೆ. ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುವುದು, ಯುವಕರ ನಿರುದ್ಯೋಗ ಸಮಸ್ಯೆ ಪರಿಹಾರ, ರೈತರಿಗೆ ಗೌರವಯುತ ಆದಾಯ ಸಿಗುವಂತೆ ಮಾಡುವುದು, ರಾಜ್ಯದಲ್ಲಿನ ಭ್ರಷ್ಟಾಚಾರ ನಿಮೂಲನೆ, ಜನ ಸಾಮಾನ್ಯರ ಬದುಕು ನರಕ ಮಾಡಿರುವ ಬೆಲೆ ಏರಿಕೆ ತಡೆಯುವ ಎಲ್ಲ ಜನಪರ ಉದ್ದೇಶಗಳೊಂದಿಗೆ ಈ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.

    ಮಠಗಳಿಗೆ ಭೇಟಿ: ಭಾರತ್ ಜೋಡೋ ಯಾತ್ರೆಯ ಬಿಡುವಿನ ಅವಧಿಯಲ್ಲಿ ರಾಹುಲ್ ಗಾಂಧಿ ಪ್ರಮುಖ ಮಠಗಳಿಗೆ ಭೇಟಿಕೊಡುವ ಸಾಧ್ಯತೆ ಇದೆ. ಪ್ರಮುಖವಾಗಿ ಸುತ್ತೂರು, ಶ್ರೀ ಆದಿಚುಂಚನಗಿರಿ, ಶ್ರೀ ಸಿದ್ದಗಂಗಾ ಮಠಗಳಿಗೆ ಭೇಟಿ ನೀಡುವ ಕುರಿತು ಚರ್ಚೆಗಳು ನಡೆದಿವೆ.

    ಪೊಲೀಸರಿಗೆ ಸಿದ್ದು ಎಚ್ಚರಿಕೆ: ನಮ್ಮ ಯಾತ್ರೆಯನ್ನು ಕಂಡು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಪೋಸ್ಟರ್​ಗಳಿಗೆ ಮಸಿ ಬಳಿಯುವ, ಹರಿದು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ನೀವು ಇದೇ ರೀತಿ ಮುಂದುವರಿದರೆ ಬಿಜೆಪಿಯ ಯಾವುದೇ ನಾಯಕರು ಹೊರಗಡೆ ತಿರುಗಾಡಬಾರದು. ಅಂಥಾ ಪರಿಸ್ಥಿತಿಯನ್ನು ನಾವು ನಿರ್ಮಾಣ ಮಾಡಲು ಶಕ್ತರಿದ್ದೇವೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಇಂಥ ಘಟನೆಗಳು ನಡೆಯದಂತೆ ತಡೆಯಿರಿ ಎಂದು ಪೊಲೀಸರಿಗೆ ನಾನು ಹೇಳಿದ್ದೇನೆ. ಆದರೂ ಇವು ನಿಂತಿಲ್ಲ. ಮುಂದಿನ 6 ತಿಂಗಳಲ್ಲಿ ಚುನಾವಣೆ ನಡೆದು ಸರ್ಕಾರ ಬದಲಾಗಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿಯವರು ಹೇಳಿದಂತೆ ಕುಣಿಯುತ್ತಾ, ಕಾನೂನಿನ ರಕ್ಷಣೆಯನ್ನು ಮಾಡದ ಪೊಲೀಸರಿಗೆ ಆಗ ನಾವು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂಬುದನ್ನು ಹೇಳಲು ಬಯಸುತ್ತೇನೆ ಎಂದು ಬಹಿರಂಗವಾಗಿ ಗದರಿದರು.

    ಯಾತ್ರೆಯ ಸರಾಸರಿ ವಯೋಮಾನ 38 ವರ್ಷ: ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ಯಾತ್ರಿಗಳ ಪೈಕಿ ಮೂರನೇ ಒಂದರಷ್ಟು ಮಂದಿ ಮಹಿಳೆಯರು. ಯಾತ್ರಿಗಳ ಸರಾಸರಿ ವಯೋಮಾನ 38 ವರ್ಷ ಎಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ತಿಳಿಸಿದರು. ಯಾತ್ರೆ ಇದುವರೆಗೂ ದಿನನಿತ್ಯ ಸರಾಸರಿ 21 ಕಿ.ಮೀ ದೂರದಷ್ಟು ಸಾಗುತ್ತಿದೆ. ಶುಕ್ರವಾರ 23ನೇ ದಿನ. ಈ ಯಾತ್ರೆ ತಮಿಳುನಾಡಿನಲ್ಲಿ 62 ಕಿ.ಮೀ, ಕೇರಳದಲ್ಲಿ 355 ಕಿ.ಮೀ ಕ್ರಮಿಸಿ ಈಗ ಕರ್ನಾಟಕದಲ್ಲಿ 21 ದಿನಗಳ ಕಾಲ 511 ಕಿ.ಮೀ ಕ್ರಮಿಸಲು ಸಿದ್ಧವಾಗಿದೆ. ಅ.4-5ರಂದು ದಸರಾ ಪ್ರಯುಕ್ತ ಯಾತ್ರೆಗೆ ಬಿಡುವು ನೀಡಲಾಗುವುದು. 6ರಂದು ಮತ್ತೆ ಪುನರಾರಂಭವಾಗಲಿದೆ ಎಂದು ವಿವರಿಸಿದರು.

    ಸೌಂದರ್ಯ ಜಗದೀಶ್ ಮತ್ತು ನೆರೆಮನೆ ಜಗಳ ಬೀದಿಗೆ; ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts