

ಲಖನೌ: ಬರೋಬ್ಬರಿ 28 ವರ್ಷಗಳ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ತವರಿಗೆ ಮರಳಿದ್ದಾರೆ. ಮಂಗಳವಾರದಿಂದ ಮೂರು ದಿನಗಳ ಉತ್ತರಾಖಂಡ ಪ್ರವಾಸದಲ್ಲಿರುವ ಸಿಎಂ ಯೋಗಿ ಮಂಗಳವಾರ ಪೂರ್ವಜರ ಗ್ರಾಮಕ್ಕೆ ಭೇಟಿ ನೀಡಿದರು. ತಮ್ಮ ತಾಯಿಯನ್ನು ನೋಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
ಪ್ರವಾಸದ ಮೊದಲ ದಿನ ಪೌರಿ ಗರ್ವಾಲ್ ಜಿಲ್ಲೆಯ ಯಮಕೇಶ್ವರದಲ್ಲಿರುವ ಗುರು ಗೋರಖನಾಥ ಮಹಾವಿದ್ಯಾಲಯದಲ್ಲಿ ತಮ್ಮ ಗುರು ಮಹಂತ್ ಅವೈದ್ಯನಾಥರ ಪ್ರತಿಮೆಯನ್ನು ಅವರು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಉತ್ತರಖಂಡದ ಪೂರ್ವಜರ ಗ್ರಾಮ ಪಂಚೂರಿಗೆ ಭೇಟಿ ನೀಡಿದ ಯೋಗಿ, ತಮ್ಮ ತಾಯಿ ಸಾವಿತ್ರಿ ದೇವಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಸಿಎಂ ಯೋಗಿ ತಾಯಿಗೆ ಶಾಲು ಉಡುಗೊರೆ ನೀಡಿದರು. ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ತಾಯಿಯನ್ನು ಭೇಟಿಯಾಗಿದ್ದು, ತುಂಬಾ ವರ್ಷಗಳ ಬಳಿಕ ಮಗನನ್ನು ನೋಡಿದ ತಾಯಿ ತುಂಬಾ ಭಾವುಕರಾದರು. ಇಂದು (ಮೇ. 4) ನಿಗದಿಯಾಗಿದ್ದ ತಮ್ಮ ಸೋದರಳಿಯನ ಕೇಶಮುಂಡನ ಸಮಾರಂಭಕ್ಕಾಗಿ ಯೋಗಿ ತಮ್ಮ ತವರಿಗೆ ಭೇಟಿ ನೀಡಿದರು.
2020ರ ಏಪ್ರಿಲ್ ತಿಂಗಳಲ್ಲಿ ಮೊದಲನೇ ಕರೊನಾ ಅಲೆಯ ಸಂದರ್ಭದಲ್ಲಿ ತಂದೆ ನಿಧನರಾದರೂ ಸಿಎಂ ಆಗಿದ್ದ ಯೋಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಈ ಬಗ್ಗೆ ಮಾತನಾಡಿರುವ ಯೋಗಿ, ಅಂತಿಮ ಕ್ಷಣದಲ್ಲಿ ನನ್ನ ತಂದೆಯ ದರ್ಶನ ಪಡೆಯಬೇಕೆಂಬ ಬಯಕೆ ನನಗಿತ್ತು. ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ರಾಜ್ಯದ 23 ಕೋಟಿ ಜನರ ಆರೋಗ್ಯ ದೃಷ್ಟಯಿಂದ ನನ್ನಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದರು.
ಯೋಗಿ ಆದಿತ್ಯನಾಥ್ ಅವರು ಪೌರಿಯ ಪಂಚೂರ್ ಗ್ರಾಮದಲ್ಲಿ ಜನಿಸಿದರು. ಚಮ್‌ಕೋಟ್‌ಖಾಲ್‌ನ ಶಾಲೆಯೊಂದರಲ್ಲಿ ಒಂದನೇ ತರಗತಿಯಿಂದ 9ನೇ ತರಗತಿವರೆಗೆ ಓದಿದರು. ಬಹು ವರ್ಷಗಳ ನಂತರದ ಭೇಟಿಯ ವೇಳೆ ಮಂಗಳವಾರ ಕಾಲೇಜಿನಲ್ಲಿ ತಮ್ಮ ಆಧ್ಯಾತ್ಮಿಕ ಗುರು ಮಹಂತ್ ಅವೈದ್ಯನಾಥ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದಾದ ಬಳಿಕ ತಮ್ಮ ಗ್ರಾಮಕ್ಕೆ ತೆರಳಿದರು. (ಏಜೆನ್ಸೀಸ್)