ಇದು ವಿಶ್ವದ ಅತ್ಯಂತ ದುಬಾರಿ ತಲೆದಿಂಬು: ಇದರ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರೆಂಟಿ!

Coslty Pillow
Published on

ಆಮ್​ಸ್ಟರ್​ಡ್ಯಾಮ್: ಡಚ್​​ ಮೂಲದ ಕರ್ವಿಕಲ್ (ಕುತ್ತಿಗೆ)​ ತಜ್ಞ ಹಾಗೂ ಡಿಸೈನರ್​ ಒಬ್ಬರು ವಿಶ್ವದ ಅತ್ಯಂತ ದುಬಾರಿ ತಲೆದಿಂಬನ್ನು ತಯಾರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ. ದಿಂಬಿನ ಬೆಲೆ ಕೇಳಿದರಂತೂ ನೀವು ಒಮ್ಮೆ ಬಾಯಿ ಮೇಲೆ ಬೆರಳಿಡುವುದು ಖಂಡಿತ.

ಟೈಲರ್​ ಮೇಡ್​ ಪಿಲ್ಲೋ ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ದುಬಾರಿ ತಲೆದಿಂಬಿನ ವಿಡಿಯೋವನ್ನು ಶೇರ್​ ಮಾಡಲಾಗಿದ್ದು, ವಿಡಿಯೋದಲ್ಲಿರುವ ತಲೆದಿಂಬನ್ನು ವಿಶ್ವದ ಅತ್ಯಂತ ವಿಶೇಷ, ಸುಧಾರಿತ ಹಾಗೂ ದುಬಾರಿ ದಿಂಬು ಎಂದು ಹೇಳಲಾಗಿದೆ. ದಿಂಬನ್ನು ಈಜಿಪ್ಟ್​ ಹತ್ತಿಯಿಂದ ಮತ್ತು ಮಲ್ಬೆರ್ರಿ ರೇಷ್ಮೆಯಿಂದ ತಯಾರಿಸಲಾಗಿದೆ. ದಿಂಬಿನ ಒಳಗೆ ವಿಷಕಾರಿಯಲ್ಲದ ಡಚ್ ಮೆಮೊರಿ ಫೋಮ್ ಅನ್ನು ತುಂಬಲಾಗಿದೆ.

ನೆದರ್​ಲ್ಯಾಂಡ್​ನ ಥೀಜ್ಸ್​ ವ್ಯಾನ್​ ಡೆರ್ ಹಿಲ್ಸ್ಟ್​​ ಎಂಬುವರೇ ಈ ತಲೆದಿಂಬಿ ಸೃಷ್ಟಿಕರ್ತ. ಇದರ ಬೆಲೆ 57 ಸಾವಿರ ಡಾಲರ್​. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 45 ಲಕ್ಷ ರೂಪಾಯಿ. ಈ ವಿಶೇಷವಾದ ತಲೆದಿಂಬನ್ನು ತಯಾರಿಸಲು ಹಿಲ್ಸ್ಟ್​​ ಅವರು 15 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ದಿಂಬನ್ನು 24 ಕ್ಯಾರೆಟ್​ ಚಿನ್ನ, ವಜ್ರ ಹಾಗೂ ನೀಲಮಣಿಗಳಿಂದ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ, ರೋಬೋಟಿಕ್ ಮಿಲ್ಲಿಂಗ್ ಯಂತ್ರದಿಂದ ಬರುವ ಹತ್ತಿಯನ್ನೇ ದಿಂಬನ್ನು ತುಂಬಲು ಬಳಸಲಾಗಿದೆ.

24 ಕ್ಯಾರೆಟ್​ ಚಿನ್ನದ ಕವರ್​ ಹೊಂದಿದೆ. ಸುರಕ್ಷಿತ ಮತ್ತು ಆರೋಗ್ಯಕರ ನಿದ್ರೆಗಾಗಿ ಎಲ್ಲಾ ವಿದ್ಯುತ್ಕಾಂತೀಯ ವಿಕಿರಣವನ್ನು ಉದ್ದೇಶಪೂರ್ವಕವಾಗಿ ನಿರ್ಬಂಧಿಸುವ ಹೊಳಪಿನ ಬಟ್ಟೆಯ ಹೊದಿಕೆಯನ್ನು ಹೊಂದಿದೆ. ದಿಂಬಿನಲ್ಲಿರುವ ಜಿಪ್ಪರ್​, 22.5 ಕ್ಯಾರೆಟ್​ ನೀಲಮಣಿ ಮತ್ತು ನಾಲ್ಕು ವಜ್ರಗಳನ್ನು ಹೊಂದಿದೆ. ಹೈ-ಟೆಕ್ ಪರಿಹಾರಗಳು ಮತ್ತು ಹಳೆಯ ಶೈಲಿಯ ಕರಕುಶಲತೆಯನ್ನು ಒಳಗೊಂಡಿರುವ ಟೈಲರ್​ಮೇಟ್​ ಪಿಲ್ಲೋ ಅತ್ಯಂತ ನವೀನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ವೈಯಕ್ತಿಕಗೊಳಿಸಿದ ದಿಂಬಾಗಿದೆ. ದಿಂಬನ್ನು ಬ್ರಾಂಡೆಡ್​ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಲಾಗಿದೆ.

ಹಿಲ್ಸ್ಟ್​ ಹೇಳುವ ಪ್ರಕಾರ ನಿದ್ರಾಹೀನತೆ ಇರುವವರಿಗೆ ಶಾಂತಿಯುತವಾಗಿ ಮಲಗಲು ದಿಂಬು ಸಹಾಯ ಮಾಡುತ್ತದೆ. ಪ್ರತಿ ಗ್ರಾಹಕರಿಗೆ ಈ ದಿಂಬು ಕಸ್ಟಮ್-ನಿರ್ಮಿತವಾಗಿದೆ ಎಂದು ವೆಬ್‌ಸೈಟ್ ವಿವರಿಸಿದೆ. ವ್ಯಕ್ತಿಯ ಭುಜಗಳು, ತಲೆ ಮತ್ತು ಕತ್ತಿನ ನಿಖರವಾದ ಆಯಾಮಗಳನ್ನು 3D ಸ್ಕ್ಯಾನರ್ ಬಳಸಿ ಎಚ್ಚರಿಕೆಯಿಂದ ಅಳೆಯಲಾಗುತ್ತದೆ. ಇದಾದ ಬಳಿಕ ಡಚ್ ಮೆಮೊರಿ ಫೋಮ್ ಅನ್ನು ತುಂಬಲಾಗುತ್ತದೆ. ಇದು ಹೈಟೆಕ್ ರೋಬೋಟಿಕ್ ಯಂತ್ರ ಗಿರಣಿಗಳನ್ನು ಬಳಸಿಕೊಂಡು ವ್ಯಕ್ತಿಯ ತಲೆಯ ಆಕಾರಕ್ಕೆ ಹೊಂದಿಕೊಳ್ಳುತ್ತದೆ. ದಿಂಬನ್ನು ತಯಾರಿಸುವ ಮೊದಲು ಗ್ರಾಹಕರ ದೇಹದ ಮೇಲ್ಭಾಗದ ಅಳತೆ ಮತ್ತು ಮಲಗುವ ಭಂಗಿಯನ್ನು ಸಹ ಗುರುತಿಸಲಾಗುತ್ತದೆ.

ನೀವು ಸಣ್ಣ ಅಥವಾ ದಪ್ಪ, ಪುರುಷ ಅಥವಾ ಮಹಿಳೆ ಎಂಬುದು ಇಲ್ಲಿ ಮುಖ್ಯ ವಿಷಯವಲ್ಲ. ನಿಮ್ಮ ಟೈಲರ್‌ಮೇಡ್ ದಿಂಬು ನಿಮಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಬೆಂಬಲಿಸುತ್ತದೆ ಎಂದು ಕಂಪನಿ ಹೇಳಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net