

ಲಂಡನ್: ಕೈ ಜಾರಿ ಕೆರೆ ಅಥವಾ ನದಿಗೆ ಬಿದ್ದ ಮೊಬೈಲ್ ಫೋನ್ 10 ತಿಂಗಳ ಬಳಿಕ ಪತ್ತೆಯಾದರೆ, ಅದರ ಸ್ಥಿತಿ ಹೇಗಿರುತ್ತದೆ? ಎಂದು ಪ್ರಶ್ನಿಸಿದರೆ, ಬಹುತೇಕರ ಉತ್ತರ ಹೇಗಿರುತ್ತದೆ ಅಂದರೆ, ಕೆಲವೇ ಗಂಟೆಗಳು ನೀರಿನೊಳಗಿದ್ದರೆ, ಮೊಬೈಲ್ ಉಳಿಯುವುದಿಲ್ಲ. ಅಂತಹುದರಲ್ಲಿ 10 ತಿಂಗಳ ನೀರಿನೊಳಗಡೆ ಇದ್ರೆ ಆ ಮೊಬೈಲ್ ಸಂಪೂರ್ಣ ಕೆಟ್ಟು ಹೋಗಿರುತ್ತದೆ ಎನ್ನುತ್ತಾರೆ.
ಆದರೆ, ಈ ಒಂದು ಪ್ರಕರಣದಲ್ಲಿ ನಡೆದಿದ್ದೇ ಬೇರೆ. 10 ತಿಂಗಳ ಹಿಂದೆ ನದಿಯಲ್ಲಿ ಕಳೆದು ಹೋಗಿದ್ದ ಮೊಬೈಲ್ ಪತ್ತೆಯಾಗಿದೆ. ಅಚ್ಚರಿಯೆಂದರೆ, ಅದಿನ್ನೂ ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಇದೇನು ಕಲ್ಪನೆಯಲ್ಲ. ನಿಜವಾಗಿಯೂ ನಡೆದಿದೆ.
ವಿವರಣೆಗೆ ಬರುವುದಾದರೆ, ಯುಕೆ ಮೂಲದ ಓವೈನ್ ಡೇವಿಸ್, 10 ತಿಂಗಳ ಹಿಂದೆ ಗ್ಲೌಸೆಸ್ಟರ್ಶೈರ್ನ ಸಿಂಡರ್ಫೋರ್ಡ್ ಬಳಿಯಿರುವ ವೈ ನದಿಯಲ್ಲಿ ಆಕಸ್ಮಿಕವಾಗಿ ತಮ್ಮ ಐಫೋನ್ ಕಳೆದುಕೊಂಡಿದ್ದರು. 2021ರ ಆಗಸ್ಟನಲ್ಲಿ ಬ್ಯಾಚುಲರ್ ಪಾರ್ಟಿ ವೇಳೆ ಮೊಬೈಲ್ ಕಳೆದುಹೋಗಿತ್ತು. ನದಿಯಲ್ಲಿ ಬಿದ್ದ ಫೋನ್ ಮತ್ತೆ ಸಿಗುವುದಿಲ್ಲ ಅಂದುಕೊಂಡು ಬೇಸರದಿಂದಲೇ ಮನೆಗೆ ವಾಪಾಸ್ ಆಗಿದ್ದರು.
ಇದು ನಡೆದ ಸುಮಾರು 10 ತಿಂಗಳ ಬಳಿಕ ಅದೇ ನದಿಗೆ ತಮ್ಮ ಕುಟುಂಬದ ಜತೆ ದೋಣಿಯಾಟಕ್ಕೆ ತೆರಳಿದ್ದ ಮಿಗುಯೆಲ್ ಪಚೆಕೊ ಎಂಬುವರು ಓವೈನ್ ಡೇವಿಸ್ಗೆ ಕರೆ ಮಾಡಿದ್ದಾರೆ. ದೋಣಿಯಲ್ಲಿ ಹೋಗುವಾಗ ಮಿಗುಯೆಲ್ಗೆ ಡೇವಿಸ್ ಅವರ ಐಫೋನ್ ಕಣ್ಣಿಗೆ ಬಿದ್ದಿದೆ. ಬಳಿಕ ಅದನ್ನು ನದಿಯಿಂದ ಎತ್ತಿಕೊಂಡಿದ್ದಾರೆ.
ಮೊದಲೇ ನೀರಿನಲ್ಲಿ ಮಿಂದಿದ್ದ ಮೊಬೈಲ್ ಫೋನ್ ರಿಸ್ಟಾರ್ಟ್ ಆಗುವುದು ಅನುಮಾನ ಎಂದು ಮಿಗುಯೆಲ್ ಭಾವಿಸಿದ್ದರು. ಆದರೂ, ಒಂದು ಪ್ರಯತ್ನ ಮಾಡೋಣ, ಫೋನ್ನಲ್ಲಿ ಭಾವನಾತ್ಮಕ ವಿಷಯಗಳಿರಬಹುದು ಅಂತಾ ಫೋನ್ನಲ್ಲಿ ಮೊದಲು ಒಣಗಿಸುತ್ತಾರೆ. ಬಳಿಕ ಫೋನ್ ಚಾರ್ಜ್ಗೆ ಹಾಕಿದಾಗ ಮಿಗುಯೆಲ್. ಒಂದು ಕ್ಷಣ ತಮ್ಮನ್ನು ಕಣ್ಣನ್ನು ತಾವೇ ನಂಬುವುದಿಲ್ಲ. ಏಕೆಂದರೆ, ಚೆನ್ನಾಗಿಯೇ ಚಾರ್ಜ್ ಆಗುತ್ತಿರುತ್ತದೆ. ಸ್ವಲ್ಪ ಹೊತ್ತು ಬಿಟ್ಟು ಸ್ವಿಚ್ ಆನ್ ಮಾಡಿದಾಗ ಮೊಬೈಲ್ ಸ್ಕ್ರೀನ್ನಲ್ಲಿ ದಂಪತಿ ಫೋಟೋ ಇರುವುದುನ್ನು ನೋಡುತ್ತಾರೆ. ಆಗಸ್ಟ್ 13ರ ದಿನಾಂಕ ವಿರುತ್ತದೆ. ಬಹುಶಃ ಅದೇ ದಿನದಂದು ಮೊಬೈಲ್ ನೀರಲ್ಲಿ ಬಿದ್ದಿರಬಹುದೆಂದು ಭಾವಿಸುತ್ತಾರೆ. ಇದಾದ ಬಳಿಕ ಮೊಬೈಲ್ ಫೋಟೋವನ್ನು ತೆಗೆದು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಮಾಹಿತಿ ಸಮೇತ ಮಿಗುಯೆಲ್ ಪೋಸ್ಟ್ ಮಾಡುತ್ತಾರೆ.
ಸುಮಾರು 4000ಕ್ಕೂ ಹೆಚ್ಚು ಮಂದಿ ಮಿಗುಯೆಲ್ ಪೋಸ್ಟ್ ಅನ್ನು ಶೇರ್ ಮಾಡುತ್ತಾರೆ. ಆದರೆ, ಇಲ್ಲಿ ಟ್ವಿಸ್ಟ್ ಏನೆಂದರೆ, ಮೊಬೈಲ್ ಕಳೆದುಕೊಂಡ ಡೇವಿಸ್, ಯಾವುದೇ ಸಾಮಾಜಿಕ ಜಾಲತಾಣ ಖಾತೆಯನ್ನೇ ಹೊಂದಿಲ್ಲ. ಡೆವಿಸ್ ಸ್ನೇಹಿತರೊಬ್ಬರು ಫೇಸ್ಬುಕ್ ಪೋಸ್ಟ್ ನೋಡಿ ಮಾಹಿತಿ ನೀಡುತ್ತಾರೆ. ತಕ್ಷಣ ಡೆವಿಸ್, ಮಿಗುಯೆಲ್ ಅವರನ್ನು ಸಂಪರ್ಕಿಸಿ ತಮ್ಮ ಮೊಬೈಲ್ ಅನ್ನು ಮರಳಿ ಪಡೆದುಕೊಳ್ಳುತ್ತಾರೆ. (ಏಜೆನ್ಸೀಸ್)