ಬೋರಿಸ್​ ಜಾನ್ಸನ್ ತಲೆದಂಡಕ್ಕೆ ಒತ್ತಾಯ: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್

Rishi Sunak
ಬೋರಿಸ್​ ಜಾನ್ಸನ್​ ಮತ್ತು ರಿಷಿ ಸುನಕ್​
Published on

ಲಂಡನ್​: ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ ಬ್ರಿಟನ್​ ಪ್ರಧಾನಿ ಹುದ್ದೆಯಿಂದ ಬೋರಿಸ್​ ಜಾನ್ಸನ್​ ಅವರು ಮುಂದಿನ ದಿನಗಳಲ್ಲಿ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಒಂದು ವೇಳೆ ಬೋರಿಸ್​ ಜಾನ್ಸನ್​​ ರಾಜೀನಾಮೆ ನೀಡಿದರೆ ಮುಂದಿನ ಪ್ರಧಾನಿಯಾಗಿ ಭಾರತೀಯ ಮೂಲದ ಬ್ರಿಟನ್​ ಹಣಕಾಸು ಸಚಿವ ರಿಷಿ ಸುನಾಕ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.

ರಿಷಿ ಸುನಕ್​ ಅವರು ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಅವರ ಅಳಿಯ.

57 ವರ್ಷದ ಬೋರಿಸ್​ ಜಾನ್ಸನ್ ವಿವಾದದ ಸುಳಿಗೆ ಸಿಲುಕಿ ಸ್ವಪಕ್ಷೀಯದವರಿಂದಲೇ​ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಇಡೀ ಬ್ರಿಟನ್​ 2020ರ ಮೇ ತಿಂಗಳಲ್ಲಿ ಮೊದಲ ಕೋವಿಡ್​ ಲಾಕ್​ಡೌನ್​ನಲ್ಲಿ ಇರುವಾಗ ಲಂಡನ್​ನ 10 ಡ್ರೌವ್ನಿಂಗ್ ಸ್ಟ್ರೀಟ್​ನಲ್ಲಿ ಪ್ರಧಾನಿ ಜಾನ್ಸನ್​ ಮದ್ಯದ ಪಾರ್ಟಿ ನಡೆಸಿದ್ದರು ಎಂದು ಹೇಳಲಾಗಿದೆ. ಇದನ್ನು ಸ್ವತಃ ಪ್ರಧಾನಿಯೇ ಬುಧವಾರ ಒಪ್ಪಿಕೊಂಡಿದ್ದು, 2020ರ ಬೇಸಿಗೆಯಲ್ಲಿ ತನ್ನ ಕಚೇರಿಯಲ್ಲಿ ಪಾರ್ಟಿ ಆಯೋಜಿಸಿದ್ದಾಗಿ ಹೇಳಿದ್ದಾರೆ. ಆದರೆ, ಸಾಂಕ್ರಮಿಕ ಸಮಯದಲ್ಲಿ ತಮ್ಮ ಸಿಬ್ಬಂದಿಯ ಶ್ರಮಕ್ಕೆ ಪ್ರತಿಫಲವಾಗಿ ಈ ಕಾರ್ಯಕ್ರಮ ನಡೆಸಲಾಯಿತು ಎಂದು ಜಾನ್ಸನ್​ ಸಮರ್ಥನೆಯನ್ನು ನೀಡಿದ್ದಾರೆ.

ಇನ್ನು ಪಾರ್ಟಿ ನಡೆಸಿದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಹ ಇತ್ತೀಚೆಗಷ್ಟೇ ವೈರಲ್​ ಆಗಿದ್ದು, ಪ್ರತಿಪಕ್ಷ ಲೇಬರ್​ ಪಾರ್ಟಿ ಮತ್ತು ತಮ್ಮದೇ ಕನ್ಸರ್ವೇಟಿವ್​ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಬ್ರಿಟನ್​ ಜನರ ಕೆಂಗಣ್ಣಿಗೂ ಜಾನ್ಸನ್​ ಅವರ ನಡೆ ಗುರಿಯಾಗಿದ್ದು, ಅವರ ಖ್ಯಾತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇದು ಪಕ್ಷದ ಮೇಲೆ ಪರಿಣಾಮ ಬೀಳಲಿದೆ ಎಂಬುದು ಸ್ವಪಕ್ಷದ ನಾಯಕರ ಅಭಿಪ್ರಾಯವಾಗಿದೆ.

ಈ ವಿವಾದದ ಬಗ್ಗೆ ಲಂಡನ್​ನ ಹೌಸ್​ ಆಫ್​ ಕಾಮನ್​ನಲ್ಲಿ ಪ್ರಧಾನಿ ಬೋರಿಸ್​ ಜಾನ್ಸನ್​ ಅವರು ಕ್ಷಮೆಯಾಚನೆ ಮಾಡಿದರೂ ಕೂಡ ಅವರದೇ ಕನ್ಸರ್ವೇಟಿವ್​ ಪಕ್ಷದ ನಾಯಕರು ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸರ್ಕಾರವೇ ಮಾಡಿದ ಲಾಕ್​ಡೌನ್​ ಮಾರ್ಗಸೂಚಿಯನ್ನು ಉಲ್ಲಂಘಿಸಿ ಜನರಿಗೆ ತಪ್ಪು ಸಂದೇಶವನ್ನು ರವಾನಿಸಿದ್ದಾರೆ. ಸರ್ಕಾರದ ಮೇಲೆ ಜನರ ಭಾವನೆ ಬದಲಾಗುವಂತೆ ಜಾನ್ಸನ್​ ನಡೆದುಕೊಂಡಿದ್ದಾರೆ. ಕೋವಿಡ್​ ಸಂದರ್ಭದಲ್ಲೂ ಕೂಡ ಸರಿಯಾದ ನಿರ್ವಹಣೆ ಮಾಡಲಿಲ್ಲ ಅಂತಾ ಸಾಲು ಸಾಲು ಆರೋಪಗಳು ಜಾನ್ಸನ್​​ ವಿರುದ್ಧ ಕೇಳಿಬಂದಿದ್ದು, ರಾಜೀನಾಮೆಗೆ ಬೇಡಿಕೆ ಹೆಚ್ಚಾಗಿದೆ. ಡೌನಿಂಗ್ ಸ್ಟ್ರೀಟ್‌ ಮತ್ತು ಇತರ ಎಲ್ಲಾ ಸರ್ಕಾರಿ ಕ್ವಾರ್ಟರ್‌ಗಳಲ್ಲಿ ನಡೆದಿರುವ ಲಾಕ್‌ಡೌನ್ ಉಲ್ಲಂಘನೆಗಳ ಕುರಿತು ಹಿರಿಯ ನಾಗರಿಕ ಸೇವಕ ಸ್ಯೂ ಗ್ರೇ ಅವರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಪ್ರಧಾನಿ ರೇಸ್​ನಲ್ಲಿ ರಿಷಿ ಸುನಕ್​

ಒಂದು ವೇಳೆ ಒತ್ತಾಯಕ್ಕೆ ಮಣಿದು ಜಾನ್ಸನ್​​​ ರಾಜೀನಾಮೆ ನೀಡಿದರೆ, ಮುಂದಿನ ಬ್ರಿಟನ್​ ಪ್ರಧಾನಿ ಯಾರಾಗಲಿದ್ದಾರೆ ಎಂಬ ಕುತೂಹಲ ಕೂಡ ಗರಿಗೆದರಿದೆ. ಆ ರೇಸ್​ನಲ್ಲಿ ಭಾರತೀಯ ಮೂಲದ ರಿಷಿ ಸುನಕ್​ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಜಾನ್ಸನ್​ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ರಿಷಿ ಸುನಕ್​ ಕಾರ್ಯ ನಿರ್ವಹಿಸುತ್ತಿದ್ದಾರೆ. ಬುಧವಾರ ಜಾನ್ಸನ್​​ ಅವರು ಹೌಸ್​ ಆಫ್​ ಕಾಮನ್​ನಲ್ಲಿ ಕ್ಷಮೆಯಾಚಿಸುವಾಗ ಸುನಕ್​ ಗೈರಾಗಿದ್ದರು. ಆದರೆ, ಈ ಬಗ್ಗೆ ಟ್ವೀಟ್​ ಮಾಡಿದ್ದ ಅವರು ಪ್ಲಾನ್​ ಫಾರ್​ ಜಾಬ್ ಯೋಜನೆಯ ನಿರಂತರ ಕೆಲಸ​ ಮತ್ತು ಇಂಧನ ಪರಿಸ್ಥಿತಿ ಬಗ್ಗೆ ಸಂಸದರೊಂದಿಗೆ ಚರ್ಚಿಸಬೇಕಾದ್ದರಿಂದ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ. ಆದರೆ, ಗೈರಿನ ಹಿಂದೆ ಮತ್ತೊಂದು ಊಹಾಪೋಹ ಹರಿದಾಡುತ್ತಿದೆ. ಜಾನ್ಸನ್​ ಅವರಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದಲೇ ಅವರು ಗೈರಾಗಿದ್ದರು ಎನ್ನಲಾಗಿದೆ. 2020ರ ಫೆಬ್ರವರಿಯಲ್ಲಿ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ 2020ರಲ್ಲಿ ಕೋವಿಡ್​ ಭೀತಿಯ ಮಧ್ಯೆಯು ಮೊದಲ ಬಜೆಟ್​ ಮಂಡಿಸಿದ ಸುನಕ್ ಅವರನ್ನು ವಿಶ್ಲೇಷಕರು ಮತ್ತು ಮಾಧ್ಯಮದವರು ಕೊಂಡಾಡಿದ್ದರು. ಅಲ್ಲದೆ, ಕೋವಿಡ್​ ಸಂದರ್ಭದಲ್ಲೂ ಆರ್ಥಿಕ ಉತ್ತೇಜನಕ್ಕಾಗಿ ರಿಷಿ ಸುನಕ್​ ಅವರು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು.

ಇನ್ನು ಹಣಕಾಸು ಸಚಿವರಾಗಿ ಆಯ್ಕೆಯಾದಾಗಿನಿಂದ ರಿಷಿ ಸುನಕ್​ ಅವರಿಗೆ ಪ್ರಧಾನಿ ಹುದ್ದೆಯ ಮೇಲೆಯೂ ತುಂಬಾ ಉತ್ಸಾಹವನ್ನು ಹೊಂದಿದ್ದಾರೆ. ಅಲ್ಲದೆ, ಪಕ್ಷದಲ್ಲೂ ಅವರಿಗೆ ಒಳ್ಳೆಯ ಬೆಂಬಲವಿದೆ ಮತ್ತು ಯುವ ನಾಯಕರಾಗಿರುವ ಅವರಿಗೆ ಸಾರ್ವಜನಿಕರ ವಲಯದಲ್ಲೂ ಜನಮನ್ನಣೆ ಇರುವುದರಿಂದ ಮುಂದಿನ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾದರೂ ಅಚ್ಚರಿಪಡಬೇಕಾಗಿಲ್ಲ. ಆದಾಗ್ಯೂ ಇನ್ನು ಅನೇಕರು ಪ್ರಧಾನಿ ರೇಸ್​ನಲ್ಲಿರುವುದು ತಿಳಿದುಬಂದಿದೆ. ಆದರೆ, ಜಾನ್ಸನ್​ ರಾಜೀನಾಮೆ ನೀಡಿದರೆ ಅಂತಿಮವಾಗಿ ಯಾರು ಪ್ರಧಾನಿ ಸ್ಥಾನಕ್ಕೇರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net