ಒಲಿಂಪಿಕ್ಸ್​ನಲ್ಲಿ ಭಾರತ ಟಾಪ್​ 5ರಲ್ಲಿ ಇರಬೇಕೆಂಬುದು ಮೋದಿ ಕನಸು: ಖೇಲೋ ಇಂಡಿಯಾದಲ್ಲಿ ಅಮಿತ್​ ಷಾ ಹೇಳಿಕೆ

Khelo India
Published on

ಬೆಂಗಳೂರು: 2014 ಕ್ಕಿಂತ ಮೊದಲು ದೇಶದ ಎಲ್ಲ ಕ್ರೀಡಾಪ್ರೇಮಿಗಳು ಮತ್ತು ಕ್ರೀಡಾ ಉತ್ಸಾಹಿಗಳು ಕ್ರಿಕೆಟ್​ ಹೊರತುಪಡಿಸಿ ಇತರೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ವೀಕ್ಷಿಸಬೇಕಾದರೆ ಚಿಂತಿಸುತ್ತಿದ್ದರು. ಅದು ಒಲಿಂಪಿಕ್ಸ್​ ಆಗಿರಲಿ, ಏಷ್ಯಡ್​ ಅಥವಾ ಅಂತಾರಾಷ್ಟ್ರೀಯ ಟೂರ್ನಮೆಂಟ್​ ಆಗಿರಲಿ ಪದಕಗಳ ಪಟ್ಟಿಯಲ್ಲಿ ಭಾರತದ ಹೆಸರು ಎಲ್ಲಿಯೂ ಇರಲಿಲ್ಲ. ಆದರೆ, ಇಂದು ಎಲ್ಲ ಕ್ರೀಡೆಗಳಲ್ಲೂ ಭಾರತ ಉನ್ನತ ಸ್ಥಾನದಲ್ಲಿದೆ ಎಂದು ಅಮಿತ್​ ಷಾ ಅವರು ಹೇಳಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಾತನಾಡಿದರು.

ಮಹತ್ವಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕ್ರೀಡೆಯು ಮನುಷ್ಯನ ಸಹಜವಾದ ಕ್ರೀಡಾ ಚಟುವಟಿಕೆಯಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಎಂಬುದು ಸಾಮಾನ್ಯವಾಗಿದೆ. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸುವುದು ತುಂಬಾ ಮುಖ್ಯವಾಗಿದೆ ಎಂದು ಅಮಿತ್​ ಷಾ ಅವರು ಹೇಳಿದರು.

ಈ ಹಿಂದೆ ಕೆಲ ಕ್ರೀಡೆಗಳಲ್ಲಿ ಭಾರತದ ಹೆಸರು ಇರುತ್ತಿರಲಿಲ್ಲ. ಆದರೆ, ಇಂದು ಎಲ್ಲ ಕ್ರೀಡೆಗಳಲ್ಲೂ ಭಾರತ ಉನ್ನತ ಸ್ಥಾನದಲ್ಲಿದೆ. ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ಇಂದು ಹಳ್ಳಿ ಹಳ್ಳಿಗಳಿಂದ ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ. ನಮ್ಮ ಕ್ರೀಡಾ ಸಚಿವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಪಿಎಂ ಮೋದಿ ಅವರು 2014 ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತ ನಂ.1 ಆಗಬೇಕೆಂಬ ಗುರಿಯನ್ನು ಹೊಂದಿದ್ದರು. ಅವರು ಫಿಟ್ ಇಂಡಿಯಾ, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಂತಹ ಉಪಕ್ರಮಗಳ ಸರಣಿಯನ್ನು ಪ್ರಾರಂಭಿಸಿದರು. ಇಂದು ನಾವು ಅದರ ಫಲಿತಾಂಶವನ್ನು ನೋಡಬಹುದಾಗಿದೆ ಎಂದರು.

ನಾವಿಂದು ಒಲಿಂಪಿಕ್ಸ್​ನಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದೇವೆ. ಒಲಿಂಪಿಕ್ಸ್​ನಲ್ಲಿ ಭಾರತ ಟಾಪ್​ 5ರಲ್ಲಿ ಇರಬೇಕು. ಇದು ಪ್ರಧಾನಿ ಮೋದಿ ಅವರ ಕನಸಾಗಿದೆ. ವಿಶ್ವದಲ್ಲಿ ನಮಗೆ ಪ್ರಾಶಸ್ತ್ಯ ದೊರೆಯುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಕ್ರೀಡೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದೆ ಎಂದು ಅಮಿತ್​ ಷಾ ತಿಳಿಸಿದರು.

ಖೇಲೋ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಕ್ರೀಡಾ ಸಚಿವ ನಾರಾಯಣ ಗೌಡ ಹಾಗೂ ನಟ ಕಿಚ್ಚ ಸುದೀಪ್​ ಉಪಸ್ಥಿತರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net