'ಸುದೀಪ್​ ನೀವು ತುಂಬಾ ಸಾತ್ವಿಕರಾಗ್ಬೇಡಿ ಒಂದ್ಸಲ ತರಾಟೆಗೆ ತೆಗೆದುಕೊಳ್ಳಿ ಆಗ ಯಾರೂ ನಿಮ್ಮ ತಂಟೆಗೆ ಬರಲ್ಲ'

Jaggesh
Published on

ಬೆಂಗಳೂರು: ತುಂಬಾ ಸಾತ್ವಿಕರಾಗಬೇಡಿ ಸುದೀಪ್...ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೇ ಬಿಡಬೇಡಿ... ಒಂದ್ ಸಲ ತರಾಟೆಗೆ ತೆಗೆದುಕೊಂಡು ಗುಮ್ಮಿ ಆ ಮೇಲೆ ಯಾರೂ ನಿಮ್ಮ ತಂಟೆಗೆ ಬರಲ್ಲ.. ಸುಖಾಸುಮ್ಮನೇ ಕೆಣಕಿದವರನ್ನು ಸುಮ್ಮನೇ ಬಿಡಬಾರದು..

ಇದಿಷ್ಟು ನವರಸನಾಯಕ ಜಗ್ಗೇಶ್​ ಅವರು ಅಭಿನಯ ಚಕ್ರವರ್ತಿ ಸುದೀಪ್​ ಅವರಿಗೆ ಹೇಳಿದ ಕಿವಿಮಾತು. ಅಷ್ಟಕ್ಕೂ ಸುದೀಪ್​ ಅವರಿಗೆ ಜಗ್ಗೇಶ್​​ ಈ ರೀತಿ ಹೇಳಲು ಒಂದು ಕಾರಣವೂ ಇದೆ. ಇತ್ತೀಚೆಗೆ ಸುದೀಪ್​ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ಕೆಜಿಎಫ್​ ಬಗ್ಗೆ ಸುದೀಪ್​ ಅವರು ಮಾತನಾಡಿರುವ ಹಳೆಯ ವಿಡಿಯೋವನ್ನು ಯಾರೋ ಕಿಡಿಗೇಡಿಗಳು ತಮಗೆ ಬೇಕಾದಂತೆ ಎಡಿಟ್​ ಮಾಡಿ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಯಶ್​ ಮತ್ತು ಸುದೀಪ್​ ಅಭಿಮಾನಿಗಳ ನಡುವೆ ತಂದಿಟ್ಟು ತಮಾಷೆ ನೋಡುತ್ತಿದ್ದಾರೆ.

ಈ ಹಿಂದೆ ಒಂದು ವದಂತಿ ಹಬ್ಬಿತ್ತು. ಕೆಜಿಎಫ್​ ಚಿತ್ರದಲ್ಲಿ ಸುದೀಪ್​ ಇದ್ದಾರೆ ಎಂಬುದು ಸುದ್ದಿಯಾಗಿತ್ತು. ಕಳೆದ ವರ್ಷ ಗೋವಾದಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್​ ಭಾಗಿಯಾಗಿದ್ದ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕೆಜಿಎಫ್​ನಲ್ಲಿ ಪಾತ್ರದ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕೆ ಉತ್ತರ ನೀಡಿದ್ದ ಸುದೀಪ್​ ನಾನು ಅದರಲ್ಲಿ ಇಲ್ಲ ಎಂದು ಹೇಳಿದ್ದರು. ಇದನ್ನು ತಮಗೆ ಬೇಕಾದಂತೆ ಎಡಿಟ್​ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಯಶ್​ ಅಭಿಮಾನಿಗಳು ಕಿಚ್ಚ ಸುದೀಪ್​ ಅವರನ್ನು ಮನಸೋ ಇಚ್ಛೆ, ಕೆಟ್ಟ ಪದಗಳನ್ನು ಬಳಸಿ ನಿಂದಿಸುತ್ತಿದ್ದಾರೆ. ಇದು ಜಗ್ಗೇಶ್​ ಅವರ ಗಮನಕ್ಕೂ ಬಂದಿದ್ದು, ಸುದೀಪ್​ಗೆ ಕೆಲವೊಂದು ಸಲಹೆ ನೀಡಿದ್ದಾರೆ.

ವಿಜಯ್ ಪ್ರಸಾದ್ ನಿರ್ದೇಶನದ ಜಗ್ಗೇಶ್, ಅದಿತಿ ಪ್ರಭುದೇವ್ ಕಾಂಬಿನೇಷನ್​ನ ತೋತಾಪುರಿ ಸಿನಿಮಾ ಟ್ರೈಲರ್ ಲಾಂಚ್​ ಕಾರ್ಯಕ್ರಮಕ್ಕೆ ಸುದೀಪ್​ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಜಗ್ಗೇಶ್​ ಅವರು ಸುದೀಪ್ ಅವರು ನಮಗೆ ಲಕ್ಕಿ. ನನ್ನ ಪ್ರಿಮಿಯರ್ ಪದ್ಮಿನಿ ಸಿನ್ಮಾ ನೋಡಿ ಮೆಚ್ಚಿಕೊಂಡು ಹೊಗಳಿದ್ದರು. ಈಗ ತೋತಾಪುರಿ ಟ್ರೈಲರ್​ ಲಾಂಚ್ ಮಾಡಿಕೊಟ್ಟಿದ್ದಾರೆ ಎಂದರು.

ಕನ್ನಡ ಸಿನಿಮಾವನ್ನು ರಾಷ್ಟ್ರ ಮಟ್ಟದಲ್ಲಿ ತೆಗೆದುಕೊಂಡು ಹೋಗಿದ್ದ ಮೊದಲ ಕನ್ನಡದ ನಟ ಸುದೀಪ್ ಅವರು. ಅಮಿತಾಬ್ ಬಚ್ಚನ್ ನೋಡಬೇಕು ಅಂತ ಕಾದವರು ನಾವು. ಆದರೆ ಅಮಿತಾಬ್ ಬಚ್ಚನ್ ಜತೆ ನಟನೆ ಮಾಡಿ ಬಂದರು. ಹಲವು ಮೊದಲುಗಳಿಗೆ ಕಾರವಾದವರು. ಹಲವು ದಾಖಲೆ ಬರೆದವರು. ಸುದೀಪ್ ತಮಗೆ ತಾವೇ, ಕೆತ್ತಿಕೊಂಡು ಮೂರ್ತಿಯಾದವರು. ಇಂದು ಅಭಿನಯ ಚಕ್ರವರ್ತಿ ಅನ್ನೋ ಮೂರ್ತಿಗೆ ಪೂಜೆ ಪುನಸ್ಕಾರ ನಡೀತಿದೆ. ಸುದೀಪ್ ಬೆಳವಣಿಗೆ ನೋಡಿ ನನಗೆ ಹೆಮ್ಮೆಯಾಗುತ್ತದೆ ಎಂದರು.

ಬಳಿಕ ಟ್ರೋಲ್​ ಕುರಿತು ಮಾತನಾಡಿದ ಜಗ್ಗೇಶ್​ ಅವರು ಸುದೀಪ್​ ನೀವು ತುಂಬಾ ಸಾತ್ವಿಕರಾಗಬೇಡಿ. ನಿಮ್ಮ ತಂಟೆಗೆ ಬಂದವರನ್ನ ಸುಮ್ನೆ ಬಿಡಬೇಡಿ. ಒಂದು ಸಲ ತರಾಟೆಗೆ ತಗೊಂಡು ಗುಮ್ಮಿ ಆ ಮೇಲೆ ಯಾರೂ ನಿಮ್ಮ ತಂಟೆಗೆ ಬರಲ್ಲ. ಸುಖಾಸುಮ್ಮನೇ ಕೆಣಕಿದವರನ್ನ ಸುಮ್ನೆ ಬಿಡಬಾರದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net