ತಿಮಿಂಗಿಲಕ್ಕೆ ಡಿಕ್ಕಿ ಹೊಡೆದ ಪ್ರವಾಸಿಗರ ದೋಣಿ ಗತಿ ಏನಾಯ್ತು? ಭಯಾನಕ ವಿಡಿಯೋ ವೈರಲ್​

Boat
Published on

ಮೆಕ್ಸಿಕೋ: ದೈತ್ಯ ತಿಮಿಂಗಿಲ ಹಾಗೂ ಪ್ರವಾಸಿಗರ ದೋಣಿ ನಡುವೆ ಡಿಕ್ಕಿ ಸಂಭವಿಸಿ ಮೂವರು ಮಕ್ಕಳು ಹಾಗೂ ಇಬ್ಬರು ಹಿರಿಯರು ಗಾಯಗೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಈ ಘಟನೆ ಸಂಬಂಧಿಸಿದ ದೃಶ್ಯವನ್ನು ಸಹ ಪ್ರಯಾಣಿಕರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆಯು ಬಾಜಾ ಕ್ಯಾಲಿಫೋರ್ನಿಯಾ ಪರ್ಯಾಯ ದ್ವೀಪದ ಪೂರ್ವ ಕರಾವಳಿಯಲ್ಲಿ ನಡೆದಿದೆ. ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರಪಂಚದಾದ್ಯಂತದ ತಿಮಿಂಗಿಲ ವೀಕ್ಷಕರಿಗೆ ಆಶ್ರಯವಾಗಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಅಮೆರಿಕದ ನೌಕಾಪಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ನೀರಿನ ಮೇಲ್ಮೈ ಕೆಳಗಡೆ ಇದ್ದ ತಿಮಿಂಗಲಕ್ಕೆ ಪ್ರವಾಸಿಗರ ದೋಣಿ ಡಿಕ್ಕಿ ಹೊಡೆದಿದೆ. ಇದರಿಂದ ಆತಂಕಕ್ಕೆ ಒಳಗಾದ ತಿಮಿಂಗಿಲವೂ ದೋಣಿಯತ್ತ ನುಗ್ಗಿದಾಗ ಅದರ ರಭಸಕ್ಕೆ ದೋಣಿ ಗಾಳಿಯಲ್ಲಿ ಹಾರಿ ಮತ್ತೆ ನೀರಿಗೆ ಬಿದ್ದಿದೆ. ಈ ವೇಳೆ ದೋಣಿಯಲ್ಲಿದ್ದ ಪ್ರಯಾಣಿಕರು ಸಹ ಹಾರಿ ನೀರಿಗೆ ಬಿದ್ದ ದೃಶ್ಯವು ವಿಡಿಯೋದಲ್ಲಿದೆ.

ಸಮುದ್ರ ಜೀವಿಗಳಿಂದ ಅಂತರ ಕಾಯ್ದುಕೊಳ್ಳಿ ಎಂದು ಅಧಿಕಾರಿಗಳು ಪ್ರವಾಸಿಗರಿಗೆ ಸದಾ ಎಚ್ಚರಿಕೆ ಕೊಡುತ್ತಿರುತ್ತಾರೆ. ಆದರೂ, ಇದೀಗ ಅವಘಡ ಸಂಭವಿಸಿದೆ. ದೋಣಿ ಅತಿ ವೇಗದ ಚಾಲನೆಯಲ್ಲಿತ್ತು ಎಂದು ಹೇಳಲಾಗಿದ್ದು, ಈ ಬಗ್ಗೆ ಅಟಾರ್ನಿ ಜನರಲ್​ ತನಿಖೆಗೆ ಆದೇಶಿಸಿದ್ದಾರೆ.

ತಿಮಿಂಗಿಲವು ಸಮುದ್ರದಿಂದ ಮೇಲಕ್ಕೆ ಬಂದಿತು ಮತ್ತು ಅದು ದೋಣಿಯನ್ನು ತಳ್ಳಿದ್ದರಿಂದ ಅದು ಗಾಳಿಯಲ್ಲಿ ಹಾರಿ ಬಿದ್ದಿತು. ಇದರಿಂದ ಕೆಲವು ಪ್ರಯಾಣಿಕರು ಬಿದ್ದು ಗಾಯಗೊಂಡರು. ಮೆಕ್ಸಿಕನ್ ನೌಕಾಪಡೆಯ ರಕ್ಷಣಾ ಘಟಕವು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ದಿದೆ ಎಂದು ವಕ್ತಾರ ಬೆಂಜಮಿನ್​ ಗಾರ್ಸಿಯಾ ತಿಳಿಸಿದ್ದಾರೆ.

ದೋಣಿಯು ಕ್ಯಾಲಿಫೋರ್ನಿಯಾ ಕೊಲ್ಲಿಯ ಇಸ್ಲಾ ಎಸ್ಪಿರಿಟು ಸ್ಯಾಂಟೋಗೆ ಪ್ರವಾಸವನ್ನು ಕೈಗೊಂಡಿತ್ತು ಮತ್ತು ಲಾ ಪಾಜ್‌ನಲ್ಲಿರುವ ಬಂದರಿಗೆ ಹಿಂತಿರುಗುತ್ತಿತ್ತು. ಯಾವ ಜಾತಿಯ ತಿಮಿಂಗಿಲವು ದೋಣಿಗೆ ಡಿಕ್ಕಿ ಹೊಡೆಯಿತ ಮತ್ತು ಘಟನೆಯಲ್ಲಿ ಅದು ಗಾಯಗೊಂಡಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಸದ್ಯ ಇದಕ್ಕೆ ಸಂಬಂಧಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪ್ರವಾಸಿಗರು ಪ್ರಾಣಿಗಳು ಇರುವ ಕಡೆ ಎಚ್ಚರಿಕೆ ವಹಿಸಬೇಕು ಎಂದು ಕಾಮೆಂಟ್​ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net