ಏಕಕಾಲದಲ್ಲಿ ಇಬ್ಬರು ಬದ್ಧ ವೈರಿಗಳನ್ನು ಸೋಲಿಸುವ ಅವಕಾಶ ಬಂದಿದೆ: ಶಿವರಾಮೇಗೌಡರಿಂದ ದಳಪತಿಗಳಿಗೆ ಸೆಡ್ಡು

Shivaramegowda
Published on

ಮಂಡ್ಯ: ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಹೈವೋಲ್ಟೇಜ್ ಕ್ಷೇತ್ರವಾದ ಮಂದ್ಯದ ನಾಗಮಂಗಲದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಜೆಡಿಎಸ್​ನಿಂದ ಉಚ್ಚಾಟನೆಗೊಂಡ ಬಳಿಕ ಎಲ್​. ಆರ್​. ಶಿವರಾಮೇಗೌಡ ಅವರು ರೆಬೆಲ್ ಆಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಲು ಪಕ್ಷೇತರವಾಗಿ ಸ್ಪರ್ಧೆಗೆ ನಿಲ್ಲಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

ನಿತ್ಯ ಕ್ಷೇತ್ರ ಪ್ರವಾಸ ಮಾಡುವ ಮೂಲಕ ಪ್ರಚಾರ ಆರಂಭಿಸಿರುವ ಶಿವರಾಮೇಗೌಡ, ನಾಗಮಂಗಲದಲ್ಲೇ ಟಿಕಾಣಿ ಹೂಡಲು ಗೃಹ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ಬೆಂಬಲಿಗರ ಪಡೆ ಸಂಘಟಿಸಿ ದಳಪತಿಗಳಿ ಸೆಡ್ಡು ಹೊಡೆಯಲು ತೀರ್ಮಾನಿಸಿದ್ದಾರೆ.

ಇಂದು ನಾಗಮಂಗಲದಲ್ಲಿ ಮಾತನಾಡಿದ ಅವರು ಚಲುವರಾಯಸ್ವಾಮಿ, ಸುರೇಶ್ ಗೌಡ ನನಗೆ ರಾಜಕೀಯ ಬದ್ಧ ವೈರಿಗಳು. ಏಕಕಾಲದಲ್ಲಿ ಬದ್ಧ ವೈರಿಗಳನ್ನು ಸೋಲಿಸುವ ಅವಕಾಶ ನನಗೀಗ ಬಂದಿದೆ. ನಾನು ಈಗ ಫ್ರೀ ಬರ್ಡ್, ನನಗೆ ಪಕ್ಷ ಸೂಟ್ ಆಗಲ್ಲ ಅಂತ ಜನರೇ ಹೇಳ್ತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷದ ಕಾರ್ಯಕರ್ತರೂ ಬೆಂಬಲ ಕೊಡ್ತಿದ್ದಾರೆ. ಪಕ್ಷೇತರ ಸ್ಪರ್ಧೆ ಮಾಡುವುದು ನಿರ್ಧಾರವಾಗಿದೆ ಎಂದರು.

ನನ್ನ ಸ್ಪರ್ಧೆ ಕೆಲವರಿಗೆ ಲಾಭ ಆಗಬಹುದು ಎಂದು ತಿಳಿದಿದ್ದಾರೆ. ನಾನು ಚೆಲುವರಾಯಸ್ವಾಮಿ, ಸುರೇಶ್ ಗೌಡ ಇಬ್ಬರ ಮತವನ್ನು ಪಡೆಯುತ್ತೇನೆ. ಪ್ರತಿ ಊರಲ್ಲೂ ಮೂರು ಗುಂಪಾಗಿ ರಚಿಸುತ್ತೇನೆ. ಅವರಿಬ್ಬರಂತೆ ನನ್ನ ಗುಂಪು ಇರುವಂತೆ ಮಾಡುತ್ತೇನೆ. ಅವರ ಗುಂಪು ಇಲ್ಲದಿದ್ರು ನನ್ನ ಪರವಾದ ಗುಂಪು ಇರಲೇಬೇಕು. ಈ ಕ್ಷೇತ್ರ ಬಿಟ್ಟು ಹೋಗಲ್ಲ ಎಂಬ ಸಂದೇಶ ಸಾರುವ ಉದ್ದೇಶದಿಂದಲೇ ನಾನಿಲ್ಲಿ ಮನೆ ಮಾಡ್ತಿರೋದು. ಚುನಾವಣೆ ಮುಗಿಯುವವರೆಗೂ ನಿದ್ದೆ ಮಾಡುವುದಿಲ್ಲ, ಹೋರಾಟ ನಿರಂತರ ಎಂದು ಸವಾಲು ಹಾಕಿದ್ದಾರೆ.

ಎಚ್​.ಡಿ. ಕುಮಾರಸ್ವಾಮಿ, ದೇವೇಗೌಡರ ವಿರುದ್ಧ ಅಸಮಾಧಾನ ಇಲ್ಲ. ನಮ್ಮವರೇ ಕೆಲವರು ನನ್ನ ವಿರುದ್ಧ ಹುನ್ನಾರ ನಡೆಸಿದ್ರು. ಅವರ ಹುನ್ನಾರಕ್ಕೆ ನಾನು ಖೆಡ್ಡಕ್ಕೆ ಬಿದ್ದಿದ್ದೀನಿ. ಕುಮಾರಸ್ವಾಮಿ ಅವರು ಈ ಕುರಿತು ಯೋಚಿಸಬಹುದಿತ್ತು. ಆದ್ರೆ ಅವರು ತಕ್ಷಣ ಉಚ್ಚಾಟನೆ ತೀರ್ಮಾನ ಮಾಡಿಬಿಟ್ರು. ಅವರ ತೀರ್ಮಾನಕ್ಕೆ ನಾನು ಬದ್ಧ ನಾಗಿದ್ದೇನೆ. ನಾಗಮಂಗಲದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಸಾರಾಸಗಟಾಗಿ 7% ಕಮಿಷನ್ ಪ್ರತಿ ಕೆಲಸದಲ್ಲೂ ಇದೆ. ಶಾಸಕರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net