

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಎಂ. ಎಸ್. ಧೋನಿ ಪತ್ನಿ ಸಾಕ್ಷಿ ಧೋನಿ ಅವರು ಜಾರ್ಖಂಡ್ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಹಲವು ವರ್ಷಗಳಿಂದ ಜಾರ್ಖಂಡ್ನಲ್ಲಿ ವಿದ್ಯುತ್ ಬಿಕ್ಕಟ್ಟು ಯಾಕಿದೆ ಎಂಬುದನ್ನು ನಾನೋರ್ವ ಜಾರ್ಖಂಡ್ನ ತೆರಿಗೆದಾರಳಾಗಿ ತಿಳಿಯಲು ಬಯಸಿದ್ದೇನೆ. ನಾವು ವಿದ್ಯುತ್ ಉಳಿತಾಯ ಮಾಡುವಲ್ಲಿ ಪ್ರಜ್ಞಾಪೂರ್ವಕವಾಗಿ ನಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದೇವೆ ಎಂಬುದು ನಮಗೆ ತಿಳಿದಿದೆ. ಆದರೂ ಜಾರ್ಖಂಡ್ನಲ್ಲಿ ವಿದ್ಯುತ್ ಬಿಕ್ಕಟ್ಟು ಯಾಕಿದೆ ಎನ್ನುವ ಮೂಲಕ ಸರ್ಕಾರ ವಿರುದ್ಧ ಸಾಕ್ಷಿ ಧೋನಿ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ.
ರಾಜ್ಯದ ಬಹುತೇಕ ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ಕಂಡು ಬರುತ್ತಿರುವ ಸಂದರ್ಭದಲ್ಲಿ ರಾಜ್ಯದ ಜನತೆ ಪದೇ ಪದೇ ಲೋಡ್ ಶೆಡ್ಡಿಂಗ್ನಿಂದ ಬಳಲುತ್ತಿದ್ದಾರೆ. ಬಿಸಿಗಾಳಿಯು ಪಶ್ಚಿಮ ಸಿಂಗ್ಭೂಮ್, ಕೊಡೆರ್ಮಾ ಮತ್ತು ಗಿರಿದಿಹ್ ಜಿಲ್ಲೆಗಳನ್ನು ಈಗಾಗಗಲೇ ಆವರಿಸಿದ್ದು, ಏಪ್ರಿಲ್ 28ರ ವೇಳೆಗೆ ರಾಂಚಿ, ಬೊಕಾರೊ, ಪೂರ್ವ ಸಿಂಗ್ಭುಮ್, ಗರ್ವಾ, ಪಲಾಮು ಮತ್ತು ಛತ್ರಕ್ಕೆ ಬಿಸಿಗಾಳಿ ಹರಡುವ ಸಾಧ್ಯತೆಯಿದೆ.
ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯ ಕೊರತೆಯಿಂದಾಗಿ ಹೆಚ್ಚುತ್ತಿರುವ ಇಂಧನ ಬಿಕ್ಕಟ್ಟಿನ ಆತಂಕದ ನಡುವೆ, ಇಂಧನ ಸಚಿವ ಆರ್.ಕೆ.ಸಿಂಗ್ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ನಿಭಾಯಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕಾರ್ಯತಂತ್ರಗಳನ್ನು ರೂಪಿಸಲು ಇಂದು ಮುಂಜಾನೆ ಚರ್ಚೆ ನಡೆಸಿದ್ದಾರೆ. (ಏಜೆನ್ಸೀಸ್)