ಅಯ್ಯೋ ದುರ್ವಿಧಿಯೇ! ಮದುವೆಯಾದ ಮೂರೇ ದಿನದಲ್ಲಿ ದುರಂತ ಸಾವಿಗೀಡಾದ ನವವಿವಾಹಿತೆ

Girl Death
Published on

ಹೈದರಾಬಾದ್​: ಮದುವೆಯಾದ ಮೂರೇ ದಿನದಲ್ಲಿ ನವವಿವಾಹಿತೆಯೊಬ್ಬಳು ಶನಿವಾರ ಬೆಳಗ್ಗೆ ತೆಲಂಗಾಣದ ನಿರ್ಮಲ ಜಿಲ್ಲೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾಳೆ. ಅವಘಡದಲ್ಲಿ ಆಕೆಯ ತಂದೆಯೂ ಕೂಡ ಕೊನೆಯುಸಿರೆಳೆದಿದ್ದಾರೆ.

ಮೌನಿಕಾ (25) ಮೃತ ನವವಿವಾಹಿತೆ. ತಂದೆ ರಾಜಯ್ಯ (50) ಕೂಡ ಅಸುನೀಗಿದ್ದಾರೆ. ನಿರ್ಮಲ ಜಿಲ್ಲೆಯ ಕೊಡೆಮ್​ ವಲಯದ ಪಾಂಡವಪುರ್​ ಬಳಿ ಕಣಿವೆಯೊಂದಕ್ಕೆ ಕಾರು ಉರುಳಿಬಿದ್ದು ದುರಂತ ಸಂಭವಿಸಿದೆ. ಮಹಾರಾಷ್ಟ್ರದ ಬಲಹರ್ಷಾದಲ್ಲಿರುವ ವರನ ಮನೆಯಲ್ಲಿ ರಿಸೆಪ್ಷನ್​ ಮುಗಿಸಿಕೊಂಡು ತವರಿಗೆ ಹಿಂದಿರುಗುವಾಗ ಕಾರು ಅಪಘಾತಕ್ಕೀಡಾಗಿದೆ.

ಆಗಸ್ಟ್​ 25ರಂದು ಮೌನಿಕಾ ಮದುವೆ ನಡೆದಿತ್ತು. ಇದಾದ ಮೂರೇ ದಿನಗಳಲ್ಲಿ ಮೌನಿಕಾ ದಾರುಣವಾಗಿ ಮೃತಪಟ್ಟಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ವರ ಜನಾರ್ಧನ್​ ಕೂಡ ಅದೇ ಕಾರಿನಲ್ಲಿದ್ದರು. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಕುಟುಂಬದ ಕೆಲವರಿಗೂ ಗಾಯಗಳಾಗಿವೆ.

ಘಟನೆ ನಡೆದ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನವವಿವಾಹಿತೆಯನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net