

ಆಗ್ರಾ: ಮಹಿಳಾ ಕಾನ್ಸ್ಟೇಬಲ್ ಒಬ್ಬರು ಕರ್ತವ್ಯದ ವೇಳೆಯಲ್ಲಿ ಯೂನಿಫಾರ್ಮ್ ಧರಿಸಿ, ಕೈಯಲ್ಲಿ ರಿವಾಲ್ವರ್ ಹಿಡಿದು ಡಬ್ಸ್ಮ್ಯಾಶ್ ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವುದು ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಲೇಡಿ ಕಾನ್ಸ್ಟೇಬಲ್ರನ್ನು ಪ್ರಿಯಾಂಕಾ ಮಿಶ್ರಾ ಎಂದು ಗುರುತಿಸಲಾಗಿದೆ. ರಿವಾಲ್ವರ್ ಹಿಡಿದು ರಂಗ್ಬಾಜಿ ಚಿತ್ರದ ಡೈಲಾಗ್ಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಉತ್ತರ ಪ್ರದೇಶದ ಕ್ರೈಂ ಅನ್ನು ವೈಭವೀಕರಿಸುವ ಡೈಲಾಗ್ ಅನ್ನು ಪ್ರಿಯಾಂಕಾ ಮಿಶ್ರಾ ಹೊಡೆದಿದ್ದಾರೆ. ಯಾವುದೇ ಕಾರಣವಿಲ್ಲದೆ ಹರಿಯಾಣ ಮತ್ತು ಪಂಜಾಬ್ ಕೆಟ್ಟ ಹೆಸರು ಹೊಂದಿವೆ. ಉತ್ತರ ಪ್ರದೇಶಕ್ಕೆ ಬನ್ನಿ. ರಂಗಬಾಜಿ ಏನೆಂದು ನಾವು ನಿಮಗೆ ತೋರಿಸುತ್ತೇವೆ. ಇಲ್ಲಿ 5 ವರ್ಷದೊಳಗಿನ ಮಕ್ಕಳು ಕೂಡ ಬಂದೂಕುಗಳನ್ನು ಬಳಸುತ್ತಾರೆ ಎಂದು ಡೈಲಾಗ್ ಹೊಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಿಯಾಂಕಾ ವಿರುದ್ಧ ಹಿರಿಯ ಅಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಆಕೆಯ ನಡೆ ಯುಪಿ ಪೊಲೀಸ್ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದಿದ್ದಾರೆ. ವಿಡಿಯೋ ನೋಡಿದ ಅನೇಕರು ಉತ್ತರ ಪ್ರದೇಶದ ಪೊಲೀಸರನ್ನು ಖಂಡಿಸಿದ್ದಾರೆ.
ಪ್ರಿಯಾಂಕಾಗೆ ಸೇವಾ ರಿವಾಲ್ವರ್ ನೀಡಲಾಗಿಲ್ಲ. ಠಾಣೆಯ ಸ್ಟೋರ್ ರೂಮ್ನಲ್ಲಿ ಇಡಲಾಗಿದ್ದ ರಿವಾಲ್ವರ್ ಅನ್ನು ವಿಡಿಯೋ ಚಿತ್ರೀಕರಣ ಮಾಡಲು ಬಳಸಿಕೊಂಡಿದ್ದಾರೆ ಎಂದು ಎಸ್ಎಸ್ಪಿ ಹೇಳಿದ್ದಾರೆ. ಆಕೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)
(ವಿಡಿಯೋ ಕೃಪೆ: ದಿ ನ್ಯೂಸ್ ಪ್ಲೇಸ್)