ಬಾಲಕಿಯ ಕೈಹಿಡಿದು ಲಿಫ್ಟ್​ ಒಳಗೆ ಎಳೆದುಕೊಂಡ 16ರ ಹುಡುಗ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Surat Girl
Published on

ಸೂರತ್​: ಹದಿಹರೆಯದ ಹುಡುಗನೊಬ್ಬ ಲಿಫ್ಟ್​ ಒಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೂರತ್​ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಸಂತ್ರಸ್ತ ಬಾಲಕಿಯ ವಯಸ್ಸು 12. ಲೈಂಗಿಕ ದೌರ್ಜನ್ಯ ಎಸಗಿದ ಹುಡುಗನ ವಯಸ್ಸು ಕೇವಲ 16. ಸಂತ್ರಸ್ತೆಯು ಸೂರತ್​ನ ದಿಂಡೋಲಿ ಪೆವಲಿಯನ್​ ಪ್ಲಾಜಾದ ನೆಲಮಾಳಿಯಲ್ಲಿ ಟೀ ಮಾರಾಟ ಮಾಡುವವನ ಪುತ್ರಿ. 8ನೇ ತರಗತಿಯಲ್ಲಿ ಓದುತ್ತಿದ್ದು, ಬೆಳಗ್ಗೆ 10.30ಕ್ಕೆ ಸಂತ್ರಸ್ತೆ, ಪೆವಲಿಯನ್​ ಪ್ಲಾಜಾದ ಮೂರನೇ ಮಹಡಿಯಲ್ಲಿರುವ ಕಾಳಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಲು ಲಿಫ್ಟ್​ ಪ್ರವೇಶಿಸಿದ್ದಳು.

11.30ಕ್ಕೆ ಲಿಫ್ಟ್​ನಿಂದ ಹೊರ ಹೋಗುವಾಗ ಆಕೆಯನ್ನು ಹುಡುಗನೊಬ್ಬ ಕೈಹಿಡಿದು ದಿಢೀರನೇ ಲಿಫ್ಟ್​ ಒಳಗೆ ಎಳೆದುಕೊಂಡಿದ್ದಾರೆ. ಬಾಲಕಿ ಲಿಫ್ಟ್​ ಬಾಗಿಲು ತೆರೆಯಲು ಯತ್ನಿಸಿದರು ಆತ ಬಿಡಲಿಲ್ಲ. ಆಕೆಯನ್ನು ಲಿಫ್ಟ್​ ಒಳಗೆ ತಬ್ಬಿಕೊಂಡು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳಲು ಬಾಲಕಿ ಯತ್ನಿಸಿದ್ದಾಳೆ. ಆದರೆ, ಆಕೆಯಿಂದ ಅದು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಲಿಫ್ಟ್​ ಬಾಗಿಲು ತೆರೆದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.

ನಡೆದ ಘಟನೆಯಿಂದ ಮನನೊಂದು ಬಾಲಕಿ ಅಳುತ್ತಾ ಮನೆಗೆ ಹೋಗಿದ್ದಾಳೆ. ಏನಾಯಿತು ಎಂದು ಪಾಲಕರು ಕೇಳಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಪಾಲಕರು ಪೊಲೀಸ್​ ಠಾಣೆಯ ಮೆಟ್ಟಿಲೇರಿ ದೂರು ದಾಖಲಾಗಿದ್ದಾರೆ. ದಿಂಡೋಲಿ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಂಧನಕ್ಕೆ ಲಿಫ್ಟ್​ ಒಳಗಡೆ ಅಳವಡಸಿದ್ದ ಸಿಸಿಟಿವಿ ಕ್ಯಾಮೆರಾ ನೆರವಾಯಿತು. (ಏಜೆನ್ಸೀಸ್​)

(ವಿಡಿಯೋ ಕೃಪೆ: ನ್ಯೂಸ್​ 18 ಗುಜರಾತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net