ಕೂಡಲೇ ದೇಶದ ಜನರ ಬಳಿ ಕ್ಷಮೆ ಕೇಳಿ, ಈವರೆಗೂ ಏನಾಗಿದೆ ಅದಕ್ಕೆ ನೀವೇ ಹೊಣೆ: ನೂಪುರ್​ಗೆ ಸುಪ್ರೀಂ ತರಾಟೆ

Nupur
Published on

ನವದೆಹಲಿ: ಪ್ರವಾದಿ ಮುಹಮ್ಮದ್​ ಬಗ್ಗೆ ಕಾಮೆಂಟ್​ ಮಾಡಿ ದೇಶಾದ್ಯಂತ ಮಾತ್ರವಲ್ಲದೆ, ಗಲ್ಫ್​ ರಾಷ್ಟ್ರಗಳಲ್ಲೂ ಆಕ್ರೋಶದ ಕಿಡಿ ಹೊತ್ತಿಸಿ, ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್​ ಶರ್ಮಾರನ್ನು ಶುಕ್ರವಾರ (ಜುಲೈ 1) ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್​, ಕೂಡಲೇ ದೇಶದ ಜನತೆಯ ಮುಂದೆ ಕ್ಷಮೆಯಾಚಿಸಬೇಕೆಂದು ಸೂಚನೆ ನೀಡಿದೆ. ಅಲ್ಲದೆ, ದೇಶದಲ್ಲಿ ಈಗ ಏನು ನಡೆಯುತ್ತಿದೆಯೋ ಅದಕ್ಕೆ ಆಕೆಯೇ ಹೊಣೆ ಎಂದು ಉನ್ನತ ನ್ಯಾಯಾಲಯದ ಹೇಳಿದೆ.

ಅವರನ್ನು (ನೂಪುರ್​ ಶರ್ಮಾ) ಹೇಗೆ ಪ್ರಚೋದಿಸಲಾಯಿತು ಎಂಬ ಮಾಧ್ಯಮ ಚರ್ಚೆಯನ್ನು ನಾವು ಕೂಡ ನೋಡಿದ್ದೇವೆ. ಆದರೆ, ಅದಕ್ಕೆ ಆಕೆ ಪ್ರತಿಕ್ರಿಯಿಸಿದ ರೀತಿ ಮತ್ತು ತಾನೂ ಕೂಡ ವಕೀಲೆ ಎಂದು ಹೇಳಿಕೊಂಡಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಇಡೀ ದೇಶದ ಜನತೆಯ ಮುಂದೆ ಆಕೆ ಕ್ಷಮೆಯಾಚಿಸಲೇಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್​ ಹೇಳಿದ್ದಾರೆ.

ತನ್ನ ವಿರುದ್ಧ ದಾಖಲಾಗಿರುವ ಎಲ್ಲ ಎಫ್​ಐಆರ್​ಗಳನ್ನು ದೆಹಲಿಗೆ ವರ್ಗಾಯಿಸಲು ಕೋರಿ ಸುಪ್ರಿಂಕೋರ್ಟ್​ಗೆ ನೂಪುರ್​ ಶರ್ಮಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಪ್ರತಿಕ್ರಿಯಿಸಿ, ತರಾಟೆಗೆ ತೆಗೆದುಕೊಂಡಿತು. ಜೀವ ಬೆದರಿಕೆ ಇರುವುದರಿಂದ ಎಫ್​ಐಆರ್​ಗಳನ್ನು ದೆಹಲಿಗೆ ವರ್ಗಾಹಿಸಲು ನೂಪುರ್​ ಶರ್ಮಾ ಕೇಳಿಕೊಂಡಿದ್ದಾರೆ ಎಂದು ಅವರ ಪರ ವಕೀಲ ಸಿಂಗ್​ ಕೋರ್ಟ್​ ಮುಂದೆ ವಿವರಿಸಿದರು.

ದೇಶಾದ್ಯಂತ ಭಾವನೆಗಳನ್ನು ಪ್ರಚೋದಿಸಿದ ಕಾರಣದಿಂದ ಅವರು (ನೂಪುರ್​ ಶರ್ಮಾ) ಬೆದರಿಕೆಗಳನ್ನು ಎದುರಿಸುತ್ತಿರಬಹುದು ಅಥವಾ ಭದ್ರತಾ ಬೆದರಿಕೆಗೆ ಒಳಗಾಗಿರಬಹುದು. ಇಂದು ದೇಶದಲ್ಲಿ ಏನು ನಡೆಯುತ್ತಿದೆಯೋ ಅದಕ್ಕೆ ಅವರೇ ಕಾರಣ ಎಂದು ಹೇಳುವ ಮೂಲಕ ಆಕೆಯ ಮನವಿಯನ್ನು ಕೋರ್ಟ್​ ವಜಾಗೊಳಿಸಿತು. ಈ ಸಂಬಂಧ ಯಾವುದೇ ಪರಿಹಾರವನ್ನು ಪಡೆಯಲು ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಹೇಳಿತು.

ನೂಪುರ್ ಶರ್ಮಾ ಅವರು ಯಾವ ಸಂದರ್ಭಗಳಲ್ಲಿ ಕಾಮೆಂಟ್ ಮಾಡಿದ್ದಾರೆ ಎಂದು ವಕೀಲ ಸಿಂಗ್ ಸುಪ್ರೀಂಕೋರ್ಟ್​ ವಿವರಿಸಲು ಪ್ರಯತ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸುಪ್ರಿಂಕೋರ್ಟ್​, ಈ ಪ್ರಜಾಪ್ರಭುತ್ವದಲ್ಲಿ ಹುಲ್ಲು ಕೂಡ ಬೆಳೆಯಬೇಕು ಮತ್ತು ಅದನ್ನು ತಿನ್ನುವ ಹಕ್ಕು ಕತ್ತೆಗೆ ಇದೆ. ಹಾಗಂತ ಬೇಕಾಬಿಟ್ಟಿ ಬಿಡಲಾಗುವುದಿಲ್ಲ, ನಿಯಂತ್ರಣವೂ ಇರಬೇಕು. ಅದೇ ರೀತಿ ನೀವು ಏನು ಬೇಕಾದರೂ ಹೇಳಬಹುದು ಎಂದಲ್ಲ. ಸ್ವಲ್ಪ ನಿಯಂತ್ರಣ ಇರಬೇಕು ಎಂದು ಸುಪ್ರೀಂಕೋರ್ಟ್​ ಬುದ್ಧಿಮಾತು ಹೇಳಿತು.

ಈಗಾಗಲೇ ನೂಪುರ್ ಶರ್ಮಾ​ ಕ್ಷಮೆಯಾಚಿಸಿ ತನ್ನ ಕಾಮೆಂಟ್‌ಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದು ವಕೀಲ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್​, ಅವರು ಟಿವಿಗೆ ಹೋಗಿ ರಾಷ್ಟ್ರದ ಕ್ಷಮೆ ಕೇಳಬೇಕಿತ್ತು. ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ತುಂಬಾ ತಡವಾಗಿದೆ. ಇವರು ಯಾವುದೇ ಧಾರ್ಮಿಕ ವ್ಯಕ್ತಿಗಳಲ್ಲ, ಆದರೂ ಪ್ರಚೋದಿಸುವ ಹೇಳಿಕೆಗಳನ್ನು ನೀಡುತ್ತಾರೆ ಎಂದು ಸುಪ್ರೀಂಕೋರ್ಟ್​ ತರಾಟೆಗೆ ತೆಗೆದುಕೊಂಡಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net