

ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ ಅವರ ಪತಿ ವಿದ್ಯಾಸಾಗರ್ 48ನೇ ವಯಸ್ಸಿನಲ್ಲಿ ಶ್ವಾಸಕೋಸ ಸಮಸ್ಯೆಯಿಂದ ಮಂಗಳವಾರ (ಜೂನ್ 28) ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಗಂಡನ ಸಾವು ಮೀನಾ ಅವರಿಗೆ ಬರಸಿಡಿಲು ಬಡಿದಂತಾಗಿದೆ.
ಮೀನಾ ಮತ್ತು ವಿದ್ಯಾಸಾಗರ್ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್ ಮಗಳಾಗಿ ನಟಿಸಿದ್ದಾಳೆ. ಜೂನ್ 29ರಂದು ವಿದ್ಯಾಸಾಗರ್ ಅಂತ್ಯಕ್ರಿಯೆ ನೆರವೇರಿದ್ದು, ಮೀನಾ ಮತ್ತು ನೈನಿಕಾ ಕಂಬನಿ ಮಿಡಿದಿದ್ದಾರೆ.
ಮೀನಾ ಅವರು ಅನೇಕ ಸಂದರ್ಭಗಳಲ್ಲಿ ಪತಿ ಮತ್ತು ತಮ್ಮ ನಡುವಿನ ಉತ್ತಮ ಬಾಂದವ್ಯದ ಬಗ್ಗೆ ಮಾತನಾಡಿದ್ದಾರೆ. ಒಳ್ಳೆಯ ವೈವಾಹಿಕ ಜೀವನವನ್ನು ಹೊಂದಿದ್ದಾಗಿ ಮತ್ತು ಮದುವೆಯ ನಂತರವು ಕಿರಿತೆರೆ ಮತ್ತು ಬೆಳ್ಳಿತೆರೆಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಲು ವಿದ್ಯಾಸಾಗರ್ ವಿಶೇಷ ಬೆಂಬಲ ನೀಡಿದ್ದರ ಬಗ್ಗೆ ಹೇಳಿಕೊಂಡಿದದ್ದಾರೆ. ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ಆರಂಭದಲ್ಲಿ ವಿದ್ಯಾಸಾಗರ್ ಅವರ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ನಮ್ಮ ಕುಟುಂಬವು ಸೂಕ್ತ ವರನನ್ನು ಹುಡುಕುತ್ತಿದ್ದಾಗ ನನ್ನ ಜಾತಕಕ್ಕೆ ವಿದ್ಯಾಸಾಗರ್ ಅವರ ಜಾತಕ ಹೊಂದಿಕೆಯಾಯಿತು. ಅವರನ್ನು ಭೇಟಿಯಾಗಿ ಮಾತನಾಡುವಾಗ ಅವರ ವಿಭಿನ್ನ ವೃತ್ತಿಗಳು ಮತ್ತು ದೃಷ್ಟಿಕೋನಗಳಿಂದ ನಾನು ಹೆಚ್ಚು ಪ್ರಭಾವಿತಳಾಗಿರಲಿಲ್ಲ. ಕೆಲವು ದಿನಗಳ ನಂತರ ನಾನು ಮದುವೆ ಆಗುವುದಿಲ್ಲ ಎಂದು ಹೇಳಿದ್ದೆ. ಇದರಿಂದ ಕೊಂಚವೂ ಬೇಸರ ಮಾಡಿಕೊಳ್ಳದ ವಿದ್ಯಾಸಾಗರ್, ನನ್ನ ನಿರ್ಧಾರವನ್ನು ಮನಃಪೂರ್ವಕವಾಗಿ ಒಪ್ಪಿಕೊಂಡರು ಮತ್ತು ಶುಭ ಹಾರೈಸಿದರು ಎಂದು ಹೇಳಿದ್ದಾರೆ. ನಂತರದಲ್ಲಿ ಮನಸ್ಸು ಬದಲಾಗಿ ಮದುವೆಗೆ ಒಪ್ಪಿಕೊಂಡೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)