

ಲಖನೌ: ಉತ್ತರ ಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಕುಟುಂಬದ ಮೇಲೆ ಅಮಾನವೀಯವಾಗಿ ದಾಳಿ ಮಾಡಿದ್ದಾರೆ. ಅಲ್ಲದೆ, 17 ವರ್ಷದ ಅಪ್ರಾಪ್ತೆಯನ್ನು ಎರಡನೇ ಮಹಡಿಯಿಂದ ನೂಕಿ ವಿಕೃತಿ ಮೆರೆದಿದ್ದಾರೆ.
ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಗಂಭೀರವಾಗಿ ಗಾಯಗೊಂಡಿದ್ದ ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಅಂದಹಾಗೆ ಈ ಘಟನೆ ಸೋಮವಾರ ರಾತ್ರಿ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದ್ದು, ಸಂತ್ರಸ್ತೆಯ ಸಹೋದರ ದಿನೇಶ್ ಸಿಂಗ್ ದೂರು ದಾಖಲಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ಸಹೋದರ ನೀಡಿರುವ ಮಾಹಿತಿಯ ಪ್ರಕಾರ ಕೆಲ ಯುವಕರು ಸುಮಾರು ಒಂದು ವರ್ಷಗಳಿಂದ ಸಹೋದರಿಗೆ ಕಿರುಕುಳ ನೀಡುತ್ತಿದ್ದರಂತೆ. ಸೋಮವಾರ ರಾತ್ರಿ 8 ಗಂಟೆಗೆ ಅಪರಿಚಿತ ವ್ಯಕ್ತಿಗಳಿಗೆ ನನ್ನ ತಂದೆಗೆ ಕರೆಬಂದಿತು. ಇದಾದ ಕೆಲವೇ ಹೊತ್ತಲ್ಲಿ ಕೆಲ ಯುವಕರು ಬೈಕ್ನಲ್ಲಿ ಬಂದು ಬಾಗಿಲು ಮುರಿದು ನನ್ನ ತಂದೆ, ತಾಯಿ ಮತ್ತು ನನ್ನ ಮೇಲೆ ದಾಳಿ ಮಾಡಿದರು. ಇದೇ ವೇಳೆ ಕೋಣೆಯಲ್ಲಿದ್ದ ನನ್ನ ಸಹೋದರಿಯನ್ನು ಇಬ್ಬರು ಯುವಕರು ಎರಡನೇ ಮಹಡಿ ಮೇಲೆ ಎಳೆದೊಯ್ದು ಆಕೆಯ ಮೇಲೆ ದೌಜನ್ಯ ನಡೆಸಿ ಅಲ್ಲಿಂದ ಕೆಳಗಡೆ ನೂಕಿದರು. ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾದರು ಎಂದು ಸಹೋದರ ದಿನೇಶ್ ಸಿಂಗ್ ಹೇಳಿದ್ದಾರೆ.
ಮನೆಯ ಮುಂದಿನ ಸಿಸಿಟಿವಿ ಕ್ಯಾಮೆರಾದಲ್ಲಿ ಎರಡನೇ ಮಹಡಿಯಿಂದ ಹುಡುಗಿ ಬೀಳುತ್ತಿರುವ ದೃಶ್ಯ ಸ್ಪಷ್ಟವಾಗಿ ದಾಖಲಾಗಿದೆ. ಆಕೆ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿ, ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಸಮಯದಲ್ಲಿ ಆಕೆ ಸ್ಥಿತಿ ಗಂಭೀರವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಮಥುರಾ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಸಿರೀಶ್ ಚಂದ್ರ ಮಾತನಾಡಿದ್ದು, ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)