

ಲಂಡನ್: ಯುನೈಟೆಡ್ ಕಿಂಗ್ಡಮ್ ಮೂಲದ ಬ್ಯಾಚುಲರ್ ಓರ್ವ ಪರಿಪೂರ್ಣ ಹೆಂಡತಿಗಾಗಿ ಜಾಹೀರಾತು ಫಲಕಗಳನ್ನು ಅಳವಡಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಹುಬ್ಬೇರಿಸುವ ವಿಚಾರವೆಂದರೆ ಜಾಹೀರಾತು ಫಲಕಗಳ ಮೇಲೆ "ಅರೆಂಜ್ ಮ್ಯಾರೇಜ್ನಿಂದ ನನ್ನನ್ನು ಕಾಪಾಡಿ" ಎಂದು ಬರೆದಿದ್ದಾರೆ.
ಉದ್ಯಮಿಯು ಆಗಿರುವ 29 ವರ್ಷದ ಮುಹಮ್ಮದ್ ಮಲಿಕ್ ಎಂಬುವರು ಫೈಂಡ್ಮಲಿಕ್ವೈಫ್ ಡಾಟ್ ಕಂ (Findmalikawife.com) ಹೆಸರಿನ ವೆಬ್ಸೈಟ್ ತೆರೆದಿದ್ದು, ಬರ್ಮಿಂಗ್ಹ್ಯಾಂ ಸುತ್ತಲೂ ಹಲವು ಜಾಹೀರಾತು ಫಲಕಗಳನ್ನು ಅಳವಡಿಸಿದ್ದಾರೆ. ಈ ಮೂಲಕ ತನಗೆ ಸೂಕ್ತವಾಗುವ ಪರಿಪೂರ್ಣ ಜೀವನ ಸಂಗಾತಿಗಾಗಿ ಮಲಿಕ್ ಹುಡುಕಾಟ ನಡೆಸುತ್ತಿದ್ದಾರೆ.
ಜಾಹೀರಾತು ಫಲಕಗಳಲ್ಲಿ ನಗುತ್ತಾ ಪೋಸ್ ನೀಡಿರುವ ಮಲಿಕ್ ಅವರ ಫೋಟೋ ಮತ್ತು "ಅರೆಂಜ್ ಮ್ಯಾರೇಜ್ನಿಂದ ನನ್ನನ್ನು ಕಾಪಾಡಿ" ಎಂಬ ಹಾಸ್ಯಭರಿತ ಬರವಣಿಗೆಯನ್ನು ಕಾಣಬಹುದಾಗಿದೆ. ಅಲ್ಲದೆ, ಮಲಿಕ್ ಅವರ ವೆಬ್ಸೈಟ್ ಲಿಂಕ್ ಕೂಡ ಇದೆ. ಬರ್ಮಿಂಗ್ಹ್ಯಾಂ ಮತ್ತು ಮ್ಯಾಂಚೆಸ್ಟರ್ ನಗರದ ಬೀದಿಗಳಲ್ಲಿ ಈ ಫಲಕಗಳು ರಾರಾಜಿಸುತ್ತಿವೆ.
ಲಂಡನ್ ಮೂಲದ ಮಲಿಕ್ ಬರ್ಮಿಂಗ್ಹ್ಯಾಂ ಅನ್ನು ತನ್ನ ಎರಡನೇ ಮನೆ ಎಂದು ಪರಿಗಣಿಸಿದ್ದಾರೆ. ತನ್ನ ಈ ವಿಭಿನ್ನ ಜಾಹೀರಾತುವಿನ ಬಗ್ಗೆ ಮಾತನಾಡಿರುವ ಮಲಿಕ್, ತಾನು ಅರೆಂಜ್ ಮ್ಯಾರೇಜ್ ಐಡಿಯಾಗೆ ವಿರುದ್ಧವಲ್ಲ. ಆದರೆ, ನನ್ನದೇ ಮೊದಲ ಆಯ್ಕೆಯನ್ನು ನಾನು ಹುಡುಕಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಇದುವರೆಗೂ ನನಗೆ ಸರಿಯಾದ ವಧು ದೊರಕಿಲ್ಲ. ಈ ಪ್ರದೇಶದಲ್ಲಿ ಅದು ಕಠಿಣವೂ ಆಗಿದೆ. ಹೀಗಾಗಿ ಜಾಹೀರಾತು ಫಲಕವನ್ನು ಪಡೆಯಬೇಕಾಗಿತ್ತು ಎಂದಿದ್ದಾರೆ.
ಯಾವ ರೀತಿ ವಧು ಬೇಕೆಂಬ ಪ್ರಶ್ನೆಗೆ ಉತ್ತರಿಸಿರುವ ಮಲಿಕ್, ನನ್ನ ಆದರ್ಶ ಮಹಿಳೆ ಮುಸ್ಲಿಂ ಆಗಿರಬೇಕು. 20 ವರ್ಷ ವಯಸ್ಸಾಗಿರಬೇಕು. ಜಾಹೀರಾತು ಫಲಕಗಳನ್ನು ಅಳವಡಿಸಿದಾಗಿನಿಂದ ನೂರಾರು ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಆದರೆ, ಅದನ್ನು ನೋಡಲು ನನಗೆ ಸಮಯವಿಲ್ಲ. ಹೀಗಾಗಿ ಬಿಡುವು ಮಾಡಿಕೊಂಡು ಎಲ್ಲವನ್ನು ನೋಡುತ್ತೇನೆಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. (ಏಜೆನ್ಸೀಸ್)