ತನ್ನ ಫೋಟೋ ಮೇಲೆ ಸೆಲೆಬ್ರಿಟಿ ಎಂದು ಬರೆದು ಪೂಜೆ ಮಾಡಿ ಸಾವಿನ ದಾರಿ ಹಿಡಿದ ವ್ಯಕ್ತಿ..!

TL Man
Published on

ಹೈದರಾಬಾದ್​: ತೆಲಂಗಾಣದ ಖಮ್ಮಮ್​ ಜಿಲ್ಲೆಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಬದುಕಿರುವಾಗಲೇ ತನ್ನ ಫೋಟೋ ಮಾಡಿಸಿ ಅದರ ಮೇಲೆ ಸೆಲೆಬ್ರಿಟಿ ಎಂದು ಬರೆದು, ಪೂಜೆ ಮಾಡಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತನನ್ನು ವಡಪಲ್ಲಿ ಶಿವಪ್ರಸಾದ್​ (48) ಎಂದು ಗುರುತಿಸಲಾಗಿದೆ. ಈತ ತಮಿಳುನಾಡು ಮೂಲದವನಾಗಿದ್ದು, 30 ವರ್ಷಗಳ ಹಿಂದೆ ತೆಲಂಗಾಣಕ್ಕೆ ವಲಸೆ ಬಂದು ನೆಲೆಸಿದ್ದ. ಮೊದಲು ವಿಜಯವಾಡದಲ್ಲಿದ್ದ ಶಿವಪ್ರಸಾದ್​ ನಂತರ ಖಮ್ಮಮ್​ಗೆ ಬಂದಿದ್ದ. ಆನಂತರ ಖಮ್ಮಮ್​ ಗ್ರಾಮೀಣ ಪ್ರದೇಶ ಎಡುಲಪುರಂ ಮತ್ತು ವೇಂಪತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ರಸ್ತೆ ಬದಿಯ ಹೋಟೆಲ್​ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದ.

ಫೆ. 1ರಂದು ಕೆಲಸಕ್ಕೆ ಬಂದ ಶಿವಪ್ರಸಾದ್​ ಅದಾದ ಬಳಿಕ ಕಾಣಿಸಿಕೊಳ್ಳಲೇ ಇಲ್ಲ. ಗುರುವಾರ ಬೆಳಗ್ಗೆ ಹೋಟೆಲ್​ ಮಾಲೀಕ ಆತನ ಮನೆಗೆ ಹೋಗಿ ನೋಡಿದಾಗ ಬಾಗಿಲು ಹಾಕಿತ್ತು. ಎಷ್ಟೇ ಬಾಗಿಲು ಬದಿದರೂ ತೆಗೆಯದಿದ್ದಾಗ ಅನುಮಾನ ಬಂದು ಕಿಟಕಿ ಬಾಗಿಲಿನಿಂದ ನೋಡಿದಾಗ ಮನೆಯ ಫ್ಯಾನ್​ಗೆ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ.

ಇದಾದ ಬಳಿಕ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಶವವನ್ನು ಖಮ್ಮಮ್​ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಕೆಲವು ದಿನಗಳಿಂದ ಶಿವಪ್ರಸಾದ್​ ಗಂಭೀರ ತಲೆನೋವಿನಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಅದನ್ನು ತಡೆಯಲಾಗದೇ ಮೊದಲೇ ಸಾವನ್ನು ಬಯಸಿದ್ದ. ಕೊನೆಗೂ ಆತ್ಮಹತ್ಯೆಗೆ ಶರಣಾಗಿರುವ ಆತ ಸಾವಿಗೂ ಮುನ್ನ ತನ್ನ ಫೋಟೋಗೆ ತಾನೇ ಪೂಜೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net