ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ತೆಲುಗಿನ ಮೊದಲ ಚಿತ್ರದಲ್ಲೇ ಕನ್ನಡತಿ ನೇಹಾ ಶೆಟ್ಟಿಗೆ ಮುಜುಗರ

DJ Tillu
Published on

ಹೈದರಾಬಾದ್​: ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮತ್ತೊಬ್ಬ ಕನ್ನಡತಿ ನೇಹಾ ಶೆಟ್ಟಿಗೆ ಮೊದಲ ಚಿತ್ರದಲ್ಲೇ ಕಹಿ ಅನುಭವ ಆಗಿದೆ. ನಿನ್ನೆ ನೇಹಾ ನಟನೆಯ "ಡಿಜೆ ಟಿಲ್ಲು" ಸಿನಿಮಾದ ಟ್ರೈಲರ್​ ಲಾಂಚ್​ ಕಾರ್ಯಕ್ರಮ ನಡೆಯಿತು. ಈ ವೇಳೆ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಯಿಂದ ಮುಜುಗರಕ್ಕೆ ಒಳಗಾಗಿರುವ ನೇಹಾ ಇಂದು ಟ್ವಿಟರ್​ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಚಿತ್ರದಲ್ಲಿ ಸಿಧು ಜೊನ್ನಲಗಡ್ಡ ಅವರು ನಾಯಕರಾಗಿ ನಟಿಸಿದ್ದಾರೆ. ನಿರ್ಮಾಪಕ ಸೂರ್ಯದೇವರ ನಾಗ ವಂಶಿ ಸೇರಿದಂತೆ ಚಿತ್ರತಂಡ ಕಳೆದ ಬುಧವಾರ ಟ್ರೈಲರ್​ ಲಾಂಚ್​ ಮಾಡಿದೆ. ಟ್ರೈಲರ್​ನ ಒಂದು ದೃಶ್ಯದಲ್ಲಿ ನಾಯಕ ಮತ್ತು ನಾಯಕಿ ನಡುವಿನ ಸಂಭಾಷಣೆಯ ಮೇಲೆ ತೆಲುಗಿನ ಖ್ಯಾತ ಪತ್ರಕರ್ತರೊಬ್ಬರು ನಾಯಕ ಸಿಧುಗೆ ಒಂದು ಪ್ರಶ್ನೆಯನ್ನು ಕೇಳುತ್ತಾರೆ.

ಸಿಧು ಅವರೇ ನಾಯಕಿ ದೇಹದಲ್ಲಿ ಎಷ್ಟು ಮಚ್ಚೆಗಳಿವೆ ಎಂದು ನಿಮಗೆ ನಿಜಕ್ಕೂ ತಿಳಿದಿದೆಯೇ? ಎಂದು ಪತ್ರಕರ್ತ ಪ್ರಶ್ನಿಸುತ್ತಾರೆ. ಆದರೆ, ಇದರಿಂದ ಮುಜುಗರಕ್ಕೆ ಒಳಗಾಗುವ ಸಿಧು ಪ್ರಶ್ನೆಗೆ ಉತ್ತರಿಸದೇ ಒಂದು ನಗು ನೀಡಿ ಸುಮ್ಮನಾಗುತ್ತಾರೆ. ಅಸಲಿಗೆ ಅಂತಹ ಪ್ರಶ್ನೆಯನ್ನೇ ಸಿಧು ನಿರೀಕ್ಷಿಸಿರಲಿಲ್ಲ. ಆದರೆ, ಈ ಸನ್ನಿವೇಶಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನಟಿ ನೇಹಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವೀಟ್​ ಮಾಡಿರುವ ನೇಹಾ ಶೆಟ್ಟಿ, ಟ್ರೈಲರ್​ ಲಾಂಚ್​ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ನಿಜಕ್ಕೂ ದುರದೃಷ್ಟಕರವಾಗಿತ್ತು. ಆದರೆ ತನ್ನ ಕೆಲಸದ ಸ್ಥಳದಲ್ಲಿ ಮತ್ತು ಮನೆಯಲ್ಲಿ ಹಾಗೂ ತನ್ನ ಸುತ್ತಲಿನ ಮಹಿಳೆಯರ ಬಗ್ಗೆ ಅವನು (ಪ್ರಶ್ನೆ ಕೇಳಿದ ಪತ್ರಕರ್ತ) ಹೊಂದಿರುವ ಗೌರವವನ್ನು ಇದು ಸರಳವಾಗಿ ತೋರಿಸುತ್ತಿದೆ ಎಂದು ನೇಹಾ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ನೇಹಾ ಟ್ವೀಟ್​ಗೆ ಕಾಮೆಂಟ್​ ವಿಭಾಗದಲ್ಲಿ ಪ್ರತಿಕ್ರಿಯಿಸಿರುವ ನಿರ್ಮಾಪಕ ನಾಗ ವಂಶಿ ಕ್ಷಮಿಸಿ ನೇಹಾ ಇದು ನಿಜಕ್ಕೂ ದುರಾದೃಷ್ಟಕರ ಎಂದಿದ್ದಾರೆ. ಅಲ್ಲದೆ, ಅನೇಕ ನೆಟ್ಟಿಗರು ಕೂಡ ಪತ್ರಕರ್ತನನ್ನು ಟೀಕಿಸಿದ್ದಾರೆ. ಎಲ್ಲಿ ಯಾವ ಪ್ರಶ್ನೆ ಕೇಳಬೇಕು ಎಂಬ ಸೂಕ್ಷ್ಮತೆಯು ಗೊತ್ತಿಲ್ಲ. ಅವನೆಂಥ ಪತ್ರಕರ್ತ ಎಂದು ಜರಿದಿದ್ದಾರೆ. ಅಂದಹಾಗೆ ಪತ್ರಕರ್ತ ಸಿನಿಮಾ ಮ್ಯಾಗಜಿನ್​ ಒಂದರ ಎಡಿಟರ್​ ಮಾತ್ರವಲ್ಲದೆ, ನಿರ್ಮಾಪಕ ಮತ್ತು ವಿತರಕ ಸಹ ಆಗಿದ್ದಾರೆ.

ಗಾಯಕಿ ಮತ್ತು ನಿರ್ಮಾಪಕಿ ಚಿನ್ಮಯಿ ಶ್ರೀಪಾದ ಸಹ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದು ಅತ್ಯಂತ ಕ್ರೂರ ಕಾಮೆಂಟ್. ಅದನ್ನು ಬಿಟ್ಟುಬಿಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಅಂದಹಾಗೆ ನೇಹಾ ಶೆಟ್ಟಿ ಕನ್ನಡದ ಮುಂಗಾರು ಮಳೆ 2 ಚಿತ್ರದಲ್ಲಿ ಗಣೇಶ್​ಗೆ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೆ, ಚಂದನ್​ ಶೆಟ್ಟಿ ಅವರ ಸಾಂಗ್​ ಒಂದರಲ್ಲಿ ಹೆಜ್ಜೆ ಹಾಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net