More

    ನಾಲ್ಕು ವರ್ಷಗಳ ಪದವಿ ಸ್ಥಗಿತ

    ಮಂಜುನಾಥ ತಿಮ್ಮಯ್ಯ ಮೈಸೂರು

    ಗೊಂದಲ ಸೃಷ್ಟಿಸಿದ್ದ 4 ವರ್ಷಗಳ ಸ್ನಾತಕ ಪದವಿ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಸಂಭ್ರಮ ಮೂಡಿಸಿದೆ.


    ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗವು ಸಲ್ಲಿಸಿದ ಮಧ್ಯಂತರ ವರದಿಯನ್ನು ಆಧರಿಸಿ ಉನ್ನತ ಶಿಕ್ಷಣ ಇಲಾಖೆ 4 ವರ್ಷಗಳ ಪದವಿ ಕೈಬಿಡುವ ನಿರ್ಧಾರಕ್ಕೆ ಬಂದಿದೆ.


    ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್‌ಇಪಿ) ಭಾಗವಾಗಿದ್ದ 4 ವರ್ಷಗಳ ಪದವಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು. ಎಲ್ಲ ವಿದ್ಯಾರ್ಥಿಗಳಿಗೂ ಸರ್ಕಾರದ ನಿರ್ಧಾರ ಮನವರಿಕೆ ಮಾಡಿಕೊಡಬೇಕು. ಈ ಕುರಿತು ಸೂಕ್ತ ಮಾಹಿತಿ ನೀಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯಗಳು, ಕಾಲೇಜುಗಳಿಗೆ ಸೂಚನೆ ನೀಡಿದ್ದು, ಮೇ 8ರಂದು ಅಧಿಕೃತ ಆದೇಶ ಹೊರಡಿಸುವುದಾಗಿ ತಿಳಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳ ಸಮೂಹದಲ್ಲಿ ಉಂಟಾಗಿದ್ದ ಗಲಿಬಿಲಿ ಕೊನೆಗೊಂಡಿದೆ.


    ಎನ್‌ಇಪಿ ಜಾರಿಗೊಳಿಸಿದ ನಂತರ ಪದವಿಗೆ ಸೇರಿದ್ದ ವಿದ್ಯಾರ್ಥಿಗಳು ಈಗ 6ನೇ ಸೆಮಿಸ್ಟರ್‌ನಲ್ಲಿ ಇದ್ದಾರೆ. ಈ ವಿದ್ಯಾರ್ಥಿಗಳೆಲ್ಲ ನಿಟ್ಟುಸಿರು ಬಿಟ್ಟಿದ್ದಾರೆ. ಜತೆಗೆ, ಸ್ನಾತಕ ಪದವಿಯನ್ನು ಇನ್ನೂ ಒಂದು ವರ್ಷ(ಎರಡು ಸೆಮಿಸ್ಟರ್) ಓದುವುದೂ ತಪ್ಪಿದೆ. ಬದಲಿಗೆ 3 ವರ್ಷ ಪೂರೈಸಿರುವ ಎಲ್ಲ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ನೇರವಾಗಿ ಪ್ರವೇಶ ಪಡೆದುಕೊಳ್ಳಲಿದ್ದಾರೆ. ಇದು ವಿದ್ಯಾರ್ಥಿಗಳಲ್ಲಿ ಸಂತಸ ಮೂಡಲು ಕಾರಣವಾಗಿದೆ.


    ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಅದರಲ್ಲೂ ಮೈಸೂರು ವಿಶ್ವವಿದ್ಯಾಲಯ ಪ್ರಥಮವಾಗಿ ಇದನ್ನು ಅನುಷ್ಠಾನಕ್ಕೆ ತಂದಿದೆ. 2021-22ನೇ ಶೈಕ್ಷಣಿಕ ಸಾಲಿನಿಂದಲೇ ಸ್ನಾತಕ ಪದವಿಯಲ್ಲಿ(ಯುಜಿ) ಇದನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ.
    ಪ್ರಸ್ತುತ ಪದವಿ ತರಗತಿಗಳಲ್ಲಿ ಬಹುಶಿಸ್ತೀಯ ಕಾರ್ಯಕ್ರಮ ನಡೆಯುತ್ತಿದ್ದು, ಇದರಿಂದ ಕಲಾ ವಿದ್ಯಾರ್ಥಿ ವಿಜ್ಞಾನದ ಕೆಲ ಕೋರ್ಸ್‌ಗೆ ಸೇರಿದ್ದಾರೆ. ಅಂತೆಯೇ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕಲಾ ಕೋರ್ಸ್ ಅನ್ನೂ ಅಧ್ಯಯನ ಮಾಡುತ್ತಿದ್ದಾರೆ. ಹಿಂದೆ ಈ ರೀತಿಯ ಅವಕಾಶ ಇರಲಿಲ್ಲ.


    ಆರಂಭದ 2 ವರ್ಷ ಭಾಷಾ ವಿಷಯ ಕಲಿಕೆ ಅವಕಾಶ ಇತ್ತು. ಕನ್ನಡ ಕಡ್ಡಾಯವಾಗಿದ್ದರೆ, ಇಂಗ್ಲಿಷ್ ಐಚ್ಛಿಕವಾಗಿದೆ. ಸ್ನಾತಕ ಪದವಿಯಲ್ಲಿ ಒಂದು ವರ್ಷ ಮುಗಿದ ನಂತರ ಪ್ರಮಾಣಪತ್ರ(ಸರ್ಟಿಫಿಕೇಟ್ ಕೋರ್ಸ್), 2ನೇ ವರ್ಷ ಪೂರೈಸಿದ ಬಳಿಕ ಡಿಪ್ಲೊಮಾ, 3ನೇ ವರ್ಷ ಮುಗಿದ ಬಳಿಕ ಬ್ಯಾಚುಲರ್ ಡಿಗ್ರಿ ಮತ್ತು 4ನೇ ವರ್ಷ ಪೂರ್ಣಗೊಳಿಸುವ ಬಿಎಸ್ಸಿ, ಬಿಎ, ಬಿಕಾಂನಂತಹ ವಿದ್ಯಾರ್ಥಿಗಳಿಗೆ ಆನರ್ಸ್ ಪದವಿ ನೀಡಲು ಅವಕಾಶ ಇದೆ. ಇದೀಗ ಮೂರು ವರ್ಷಕ್ಕೆ ಸ್ನಾತಕ ಪದವಿ ಮೊಟಕುಗೊಂಡಿದ್ದು, ಈ ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಪ್ರಮಾಣಪತ್ರ ದೊರೆಯಲಿದೆ.


    ಅಂತರಶಿಸ್ತೀಯ ಅಧ್ಯಯನವನ್ನು ಥಿಯರಿ ಮತ್ತು ಪ್ರಯೋಗಗಳ ಆಧಾರದಲ್ಲಿ ಕೋರ್ಸ್‌ಗಳನ್ನು ರೂಪಿಸಲಾಗಿತ್ತು. ಆದರೆ, ಆತುರದಲ್ಲಿ ರಚನೆ ಮಾಡಿದ ಈ ಎಲ್ಲ ಕೋರ್ಸ್‌ಗಳಲ್ಲಿ ಗೊಂದಲ ಸೃಷ್ಟಿಯಾಗಿದ್ದವು. ಕೋರ್ಸ್‌ಗೆ ತಕ್ಕ ಪಠ್ಯಕ್ರಮವೂ ಪೂರ್ಣಪ್ರಮಾಣದಲ್ಲಿ ಇರಲಿಲ್ಲ. ಇದು ವಿದ್ಯಾರ್ಥಿಗಳಿಗೆ ಕಲಿಕೆಗೆ ಅಡ್ಡಿ ಉಂಟು ಮಾಡಿತ್ತು.


    ಎನ್‌ಇಪಿ ಆಧಾರಿತ 4 ವರ್ಷ ಪದವಿ ಕೋರ್ಸ್‌ನ ಮಧ್ಯದಲ್ಲೇ ವಿದ್ಯಾರ್ಥಿ ಇಚ್ಛೆಯಂತೆ ಪ್ರವೇಶ ಮತ್ತು ನಿರ್ಗಮನಕ್ಕೂ ಅವಕಾಶವನ್ನೂ ನೀಡಲಾಯಿತು. ಇದರಿಂದಾಗಿ ಉದ್ಯೋಗ ಸೇರಿದಂತೆ ವಿವಿಧ ಕಾರಣಕ್ಕೆ ಕೆಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನೇ ಅರ್ಧದಲ್ಲೇ ಕೈಬಿಟ್ಟರು. ಇದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು, ಅದರಲ್ಲೂ ಬಡವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದಲೇ ವಂಚಿತರಾದರು. ಕೆಲವರು ಸಣ್ಣಪುಟ್ಟ ಕೆಲಸಕ್ಕೆ ತೃಪ್ತಿಪಟ್ಟುಕೊಂಡರು. ಇನ್ನೂ ಕೆಲವರು ನಿರುದ್ಯೋಗಿಗಳಾಗಿದ್ದಾರೆ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.

    ಮೊದಲಿನಂತೆ ಕಲಿಕೆ:


    ಎನ್‌ಸಿಪಿ ಪ್ರಕಾರ 4 ವರ್ಷದ ಪದವಿ ಪೂರೈಸುವ ವಿದ್ಯಾರ್ಥಿಗಳಿಗೆ ಆನರ್ಸ್ ಜತೆಗೆ ಬ್ಯಾಚುಲರ್ ಡಿಗ್ರಿ ದೊರೆಯುತ್ತಿತ್ತು. ರಿಸರ್ಚ್ ಕಾಂಪೊನೆಂಟ್‌ಯೊಂದಿಗೆ ಆನರ್ಸ್ ಡಿಗ್ರಿ ಪಡೆಯುವವರು ಪಿಎಚ್.ಡಿ ಅಧ್ಯಯನವನ್ನು ಕೈಗೊಳ್ಳಲು ಅರ್ಹರು. ಇಲ್ಲವೇ ಪ್ರಾಜೆಕ್ಟ್ ವರ್ಕ್‌ನ ಸಮೇತ ಸ್ನಾತಕೋತ್ತರ ಪದವಿಯ 2ನೇ ವರ್ಷಕ್ಕೆ ನೇರ ಪ್ರವೇಶ ಪಡೆಯಬಹುದಾಗಿತ್ತು. ಆದರೀಗ ಇದಕ್ಕೆ ಅವಕಾಶ ಇರುವುದಿಲ್ಲ. ಬದಲಿಗೆ ಈ ಹಿಂದಿನಂತೆ ನೇರವಾಗಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬೇಕು. ಅದು ಪೂರ್ಣಗೊಂಡ ಬಳಿಕವೇ ಪಿಎಚ್.ಡಿ ಮಾಡಲು ಅವಕಾಶ ಸಿಗಲಿದೆ.

    ವಿದ್ಯಾರ್ಥಿಗಳ ಆಕ್ರೋಶ


    ಎನ್‌ಇಪಿ ಶಿಕ್ಷಣದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹ ಕಲ್ಪಿಸಲಾಗುವುದು. ಬಹುಶಿಸ್ತೀಯ, ಸರ್ವಾಂಗೀಣ ಶಿಕ್ಷಣವನ್ನು ನೀಡುವಾಗ ಪಠ್ಯ, ಪಠ್ಯೇತರ ಚಟುವಟಿಕೆಗಳ ಕಡೆ ಗಮನಹರಿಸಲಾಗುವುದು. ಪರಿಕಲ್ಪನಾತ್ಮಕ ಅರಿವು, ಸೃಜನಶೀಲತೆ, ಸೂಕ್ಷ್ಮ ಆಲೋಚನೆ, ತಂಡವಾಗಿ ಕಾರ್ಯ, ಸಂವಹನ ಕೌಶಲವನ್ನು ಕಲಿಸಿಕೊಡಲಾಗುವುದು.

    ಇದರಿಂದ ಸ್ವಯಂ ಉದ್ಯೋಗವು ಸಾಧ್ಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದು ಬರೀ ಆಲೋಚನಾ ಕ್ರಮವಾಗಿತ್ತೇ ಹೊರತು ಪ್ರಾಯೋಗಿಕವಾಗಿರಲಿಲ್ಲ. ಜತೆಗೆ, ಇದು ಕಾರ್ಯಗತವೂ ಆಗಿರಲಿಲ್ಲ. ಅದಕ್ಕಾಗಿ ಸೂಕ್ತ ಪಠ್ಯಕ್ರಮವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತೆ ಮಾಡಲಾಯಿತು. ಪಠ್ಯಕ್ರಮಕ್ಕೆ ತಕ್ಕಂತೆ ಬೋಧಕರು ಇರಲಿಲ್ಲ. ಹೀಗೆ ಅನೇಕ ಸಮಸ್ಯೆಗಳು ಸೃಷ್ಟಿಸಿ ಸಂಕಷ್ಟಕ್ಕೆ ಸಿಲುಕಿಸಲಾಯಿತು ಎಂದು ವಿದ್ಯಾರ್ಥಿಗಳ ಆರೋಪವಾಗಿದೆ.

    ಸರ್ಕಾರದ ನಿರ್ಧಾರ ಸ್ವಾಗತಾರ್ಹ


    ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರಿಂದ ವ್ಯಕ್ತವಾದ ಅಪಾರ ಪ್ರತಿರೋಧದ ಪ್ರತಿಫಲವಾಗಿ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ರಾಜ್ಯದಲ್ಲಿ ನಡೆದ ಐತಿಹಾಸಿಕ ಜನ ಹೋರಾಟಕ್ಕೆ ಸಂದಿರುವ ಜಯವಾಗಿದೆ. ಅಧಿಕೃತ ಆದೇಶವನ್ನು ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ತಿಳಿಸಿದ್ದಾರೆ.

    ನಾಲ್ಕು ವರ್ಷಗಳ ಪದವಿ ಸ್ಥಗಿತಗೊಳಿಸಲು ಸೂಚನೆ ಬಂದಿದೆ. ಅಧಿಕೃತ ಆದೇಶ ಮೇ 8ಕ್ಕೆ ಆದೇಶ ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ. ಬಳಿಕ ಇನ್ನಷ್ಟು ಸ್ಪಷ್ಟತೆ ದೊರೆಯಲಿದೆ.
    ಪ್ರೊ.ಎನ್.ಕೆ.ಲೋಕನಾಥ್ ಕುಲಪತಿ, ಮೈಸೂರು ವಿಶ್ವವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts