ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿ: ತುಮಕೂರಲ್ಲಿ ನಡೆದ ಅಮಾನವೀಯ ಘಟನೆ

dalit
Published on

ತುಮಕೂರು: ದಲಿತ ಸಮುದಾಯದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಘಟನೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಭೈರೇನಾಹಳ್ಳಿ ಗ್ರಾಮದಲ್ಲಿ ಗುರುವಾರ (ಫೆ.03) ನಡೆದಿದೆ.

ಹನುಮಂತರಾಯಪ್ಪ (57) ಎಂಬುವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಗ್ರಾಮದ ಹೊರವಲಯ ಸರ್ಕಾರಿ ಜಮೀನಿನಲ್ಲಿ ಅಂತ್ಯಸಂಸ್ಕಾರಕ್ಕೆ ಕುಟುಂಬ ಮುಂದಾಗಿತ್ತು. ದಲಿತ ಸಮುದಾಯದವರು ಮೊದಲಿನಿಂದಲೂ ಅದೇ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸುತ್ತಿದ್ದರು. ಭೈರನಹಳ್ಳಿ ಗ್ರಾಮದ ಸರ್ವೇ ನಂಬರ್‌ 1ರಲ್ಲಿ 39 ಗುಂಟೆ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಯುತ್ತಿತ್ತು.

ಇದೀಗ ಅಂತ್ಯಸಂಸ್ಕಾರಕ್ಕೆ ಕೈವಾರ ತಾತಯ್ಯ ಟ್ರಸ್ಟ್​ನವರು ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸರ್ಕಾರಿ ಜಾಗದಲ್ಲಿ ಕೈವಾರ ತಾತಯ್ಯ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮದ ಕೆಲ ಜನರು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೆಲ ಜನರಿಂದ ಅಂತ್ಯಸಂಸ್ಕಾರಕ್ಕೆ ಅಡ್ಡಿಯಾಗಿದೆ.

ವಿವಾದ ತಿಳಿದ ಬೆನ್ನಲ್ಲೇ ಸ್ಥಳಕ್ಕೇ ಆಗಮಿಸಿದ ತಹಸೀಲ್ದಾರ್‌ ನಹೀದಾ ಝಂ, ದಲಿತ ಕುಟುಂಬದವರನ್ನು ಮನವೊಲಿಸಿ, ಬದಲಿ ಜಾಗವನ್ನು ಗುರುತಿಸಿ, ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net