ವರದಕ್ಷಿಣೆಗಾಗಿ ಪತ್ನಿಯ ಮೇಲೆ ಸಂಬಂಧಿಕರಿಂದ ಗ್ಯಾಂಗ್​​ರೇಪ್​ ಮಾಡಿಸಿ ಯೂಟ್ಯೂಬ್​ಗೆ ವಿಡಿಯೋ ಹರಿಬಿಟ್ಟ ಪತಿ

Rajasthan Man
Published on

ಜೈಪುರ: ವರದಕ್ಷಿಣೆ ಕೊಡಲು ವಿಫಲವಾಗಿದ್ದಕ್ಕೆ ತನ್ನ ಸಂಬಂಧಿಕರಿಂದಲೇ ಹೆಂಡತಿಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿ, ಅದನ್ನು ಚಿತ್ರೀಕರಣ ಮಾಡಿರುವ ಪಾಪಿ ಪತಿರಾಯನೊಬ್ಬ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ ಅಮಾನವೀಯ ಘಟನೆ ರಾಜಸ್ಥಾನದ ಭರತಪುರದಲ್ಲಿ ನಡೆದಿದೆ ಎನ್ನಲಾಗಿದೆ.

ಹೆಂಡತಿಯ ಕುಟುಂಬದವರು 1.5 ಲಕ್ಷ ರೂಪಾಯಿ ವರದಕ್ಷಿಣೆ ಕೊಡಲು ವಿಫಲವಾಗಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ. ನೀನು ವರದಕ್ಷಿಣೆ ಕೊಡಲಿಲ್ಲ ಅಂದರೆ, ನಿನ್ನ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿ ವರದಕ್ಷಿಣೆ ಹಣ ಪಡೆದುಕೊಳ್ಳುತ್ತೇನೆ ಎಂಬ ಉದ್ಧಟತನದ ಹೇಳಿಕೆಯನ್ನು ನೀಡುವ ಮೂಲಕ ನಾಗರಿಕ ಸಮಾಜ ತಲೆಗ್ಗಿಸುವಂತೆ ದುಷ್ಟ ಪತಿರಾಯ ಮಾಡಿದ್ದಾನೆ. ಸದ್ಯ ಪತಿಯ ಪತಿ ಮತ್ತು ಆತನ ಇಬ್ಬರು ಸಂಬಂಧಿಕರ ವಿರುದ್ಧ ಸಂತ್ರಸ್ತೆ ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆಯ ಬಗ್ಗೆ ಭರತಪುರದ ಕಮನ್​ ಪೊಲೀಸ್​ ಠಾಣೆಯ ಅಧಿಕಾರಿ ದೌಲತ್​​ ಸಾಹು ಅವರು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯು ತನ್ನ ಪತಿ ಮತ್ತು ಆತನ ಇಬ್ಬರು ಸಂಬಂಧಿಕರ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾಳೆ. ಅಲ್ಲದೆ, ಅಶ್ಲೀಲ ವಿಡಿಯೋವನ್ನು ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಿರುವ ಮಾತು ಸಹ ಕೇಳಿಬಂದಿದೆ ಎಂದಿದ್ದಾರೆ.

ಸಂತ್ರಸ್ತೆ ಸಹ ಮಾತನಾಡಿದ್ದು, ನನ್ನ ಅತ್ತೆ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ಹಣ ಕೊಡಲು ವಿಫಲವಾಗಿದ್ದಕ್ಕೆ ಸಂಬಂಧಿಕರಿಂದ ನನ್ನ ಮೇಲೆ ಗ್ಯಾಂಗ್​ರೇಪ್​ ಮಾಡಿಸಿ, ಅದನ್ನು ಮೊಬೈಲ್​ ಮೂಲಕ ವಿಡಿಯೋ ರೆಕಾರ್ಡ್​ ಮಾಡಿ ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಿದ್ದಾರೆ. ಸಂಬಂಧಿಕರಲ್ಲಿ ಒಬ್ಬ ನನ್ನನ್ನು ಐದು ದಿನಗಳ ಹಿಂದೆ ಕಮನ್​ಗೆ ಕರೆತಂದು ರೇಪ್​ ಮಾಡಿದ್ದಾನೆ. ನಾನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ನನ್ನ ಮನೆ ಓಡಿ ಬಂದೆ ಎಂದು ಹೇಳಿದ್ದಾಳೆ.

ಸಂತ್ರಸ್ತೆ 2019ರಲ್ಲಿ ಹರಿಯಾಣದಲ್ಲಿ ಮದುವೆ ಆಗಿದ್ದಳು. ಅಂದಿನಿಂದಲೂ ಅತ್ತೆ ಆಖೆಗೆ ಕಿರುಕುಳ ನೀಡುತ್ತಿದ್ದಾರಂತೆ. ಈ ಕಾರಣದಿಂದಲೇ ಆಕೆ ತವರು ಮನೆಗೆ ಹಿಂದಿರುಗಿದ್ದಳು. ಆದರೆ, ಗಂಡ ಆಕೆಯನ್ನು ಪುಸಲಾಯಿಸಿ ಮತ್ತೆ ಮನೆಗೆ ಕರೆದೊಯ್ದಿದ್ದ. ಇದಾದ ಬಳಿಕ ತನ್ನ ಇಬ್ಬರು ಸಂಬಂಧಿಕರನ್ನು ಮನೆ ಕರೆದು ನನ್ನ ಮೇಲೆ ಗ್ಯಾಂಗ್​ರೇಪ್​ ಮಾಡಲು ಹೇಳಿದ. ಅದರಂತೆ ನನ್ನ ಮೇಲೆ ಮೃಗೀಯವಾಗಿ ಎರಗಿದರು. ಅದನ್ನು ಪತಿ ವಿಡಿಯೋ ರೆಕಾರ್ಡ್​ ಮಾಡಿಕೊಂಡ ಎಂದು ಸಂತ್ರಸ್ತೆ ಹೇಳಿದ್ದಾಳೆ.

ವಿಡಿಯೋ ಚಿತ್ರೀಕರಣ ಮಾಡಿದ ಬಳಿಕ ನಿನ್ನ ಕುಟುಂಬ ವರದಕ್ಷಿಣೆ ಕೊಡಲಿಲ್ಲ ಆದರೆ, ಈಗ ನಿನ್ನ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಪೋಸ್ಟ್​ ಮಾಡಿ ಒಂದಿಷ್ಟು ಹಣವನ್ನು ಪಡೆದುಕೊಳ್ಳುತ್ತೇನೆ ಎಂದು ದುರಹಂಕಾರದ ಮಾತುಗಳನ್ನು ಆಡಿದ್ದಾನೆ. ಸದ್ಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net